ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು, ರಾಮನಗರ ಜಿಲ್ಲೆಯಲ್ಲಿ ಭಾರಿ ಮಳೆ

20 ವರ್ಷಗಳ ನಂತರ ಹರಿದ ಜಯಮಂಗಲಿ ನದಿ l ರಾಗಿ, ಬಾಳೆ ಬೆಳೆಗಳಿಗೆ ಹಾನಿ
Last Updated 16 ನವೆಂಬರ್ 2021, 19:51 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಜೋರು ಮಳೆಯಾಗಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಕೆರೆ, ಕಟ್ಟೆಗಳು ಭರ್ತಿಯಾಗಿವೆ.20 ವರ್ಷಗಳ ನಂತರ ಜಯಮಂಗಲಿ ನದಿ ತುಂಬಿ ಹರಿಯುತ್ತಿದೆ.

ಪಾವಗಡ, ಶಿರಾ, ತಿಪಟೂರು ತಾಲ್ಲೂಕುಗಳನ್ನು ಹೊರತುಪಡಿಸಿದರೆ ಉಳಿದೆಡೆ ಮಳೆ ಬಿರುಸಾಗಿತ್ತು. ಕೊರಟಗೆರೆ, ತುಮಕೂರು, ಗುಬ್ಬಿ, ಕುಣಿಗಲ್, ತುರುವೇಕೆರೆ, ಮಧುಗಿರಿ ಭಾಗದಲ್ಲಿ ಭಾರಿ ಮಳೆಯಾಗಿದ್ದು, ಜಯಮಂಗಲಿ ನದಿ ಹರಿಯುವುದನ್ನು ನೋಡಲು ಜನರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು. ನದಿಗೆ ನಿರ್ಮಿಸಿರುವ ಚೆಕ್‌ಡ್ಯಾಂ, ಸೇತುವೆ ಮತ್ತು ನದಿ ಪಾತ್ರದ ಉದ್ದಕ್ಕೂ ಮೊಬೈಲ್‌ಗಳಲ್ಲಿ ಫೋಟೊ ತೆಗೆದುಕೊಂಡು, ವಿಡಿಯೊ ಮಾಡಿಕೊಂಡು ಇತರರಿಗೆ ಹಂಚಿಕೊಂಡು ಸಂತಸ ವ್ಯಕ್ತಪಡಿಸುತ್ತಿದ್ದ ದೃಶ್ಯಗಳು ಕಂಡುಬಂದವು.

ಕೊರಟಗೆರೆ ತಾಲ್ಲೂಕಿನ ತೀತಾ ಬಳಿ 40 ವರ್ಷಗಳ ಹಿಂದೆ ಅಣೆಕಟ್ಟು ನಿರ್ಮಿಸಲಾಗಿತ್ತು. ಆಗಿನಿಂದ ಕೊಡಿಗೇನಹಳ್ಳಿ ಭಾಗಕ್ಕೆ ನೀರು ಹರಿಯುವುದು ಕಡಿಮೆಯಾಯಿತು. ಜೊತೆಗೆ ಮಳೆ ಕಡಿಮೆಯಾದ ಕಾರಣ ನದಿ ಹರಿಯದೆ ಬರಡಾಗಿತ್ತು. ತಾಲ್ಲೂಕಿನ ಪ್ರಮುಖ ನದಿಗಳಾದ ಸುವರ್ಣಮುಖಿ ನದಿ ಕೂಡ 15 ದಿನಗಳಿಂದ ತುಂಬಿ ಹರಿಯುತ್ತಿದೆ. ತಿಪಟೂರಿನಲ್ಲಿ 72 ಗಂಟೆಯಲ್ಲಿ ಸುಮಾರು 79 ಮಿ.ಮೀ ಮಳೆ ಬಿದ್ದಿದ್ದು ತಾಲ್ಲೂಕಿನ ಗಂಗನಘಟ್ಟದ ಶಿಂಶಾ ನದಿಯೂ ತುಂಬಿ ಹರಿಯುತ್ತಿದೆ.

ಕೆರೆ ಕೋಡಿ– ಬೆಳೆಗಳಿಗೆ ಹಾನಿ: ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನಾದ್ಯಂತ ಸೋಮವಾರ ರಾತ್ರಿ‌ ಉತ್ತಮ ಮಳೆ ಆಗಿದ್ದು, ವಿರೂಪಾಕ್ಷಿಪುರ ಹಾಗೂ ಬಿ.ವಿ‌. ಹಳ್ಳಿ ಕೆರೆ ತುಂಬಿ ಕೋಡಿ ಹರಿದವು. ಇದರಿಂದ ಮಳೆ ನೀರು ಸುತ್ತಲಿನ ಜಮೀನುಗಳಿಗೆ ನುಗ್ಗಿದ್ದು, ಬೆಳೆಗಳಿಗೆ ಹಾನಿಯಾಯಿತು.

ಮಳೆಯಿಂದಾಗಿ ರಾಗಿ, ಭತ್ತ, ಬಾಳೆ ಬೆಳೆಗಳಿಗೆ ಹಾನಿಯಾಗಿದೆ‌. ಸಂಗ್ರಹಿಸಿ ಇಟ್ಟಿದ್ದ ಧಾನ್ಯ ಹಾಗೂ ತೆಂಗಿನಕಾಯಿ, ಗೊಬ್ಬರ ನೀರು ಪಾಲಾಗಿದ್ದು, ರೈತರು ನಷ್ಟ ಅನುಭವಿಸುವಂತೆ ಆಗಿದೆ.

15 ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ

ಬೆಂಗಳೂರು: ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಾಗೂ ಮೇಲ್ಮೈ ಸುಳಿಗಾಳಿ ಉಂಟಾಗಿರುವುದರಿಂದ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ನ.17 ಮತ್ತು 18ರಂದು ಧಾರಾಕಾರ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ನ.21ರವರೆಗೆ ಹೆಚ್ಚು ಮಳೆಯಾಗುವ ಸಾಧ್ಯತೆ ಇರುವುದರಿಂದ ‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿದೆ.

ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ಜಿಲ್ಲೆಗಳಿಗೂ ‘ಯೆಲ್ಲೊ ಅಲರ್ಟ್‌’ ನೀಡಲಾಗಿದೆ.

ರಾಜ್ಯದ ಕರಾವಳಿಯಲ್ಲಿ ಗಂಟೆಗೆ 60 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, 3.2 ಮೀಟರ್‌ಗಳಷ್ಟು ಎತ್ತರದ ಅಲೆಗಳೂ ಏಳುವ ಸೂಚನೆಗಳು ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಬುಧವಾರ ಇಳಿಯಬಾರದು ಎಂದು ಇಲಾಖೆ ಸೂಚಿಸಿದೆ.

ಮಳೆ–ಎಲ್ಲಿ, ಎಷ್ಟು?: ಕಾರವಾರದಲ್ಲಿ ಮಂಗಳವಾರ 9 ಸೆಂ.ಮೀ ಗರಿಷ್ಠ ಮಳೆಯಾಗಿದೆ. ಹಾಸನ 7, ಚಿಕ್ಕಬಳ್ಳಾಪುರ 6, ಬೆಂಗಳೂರು, ಚನ್ನಪಟ್ಟಣ 5, ಬೇಲೂರು, ಮಾಲೂರು, ನೆಲಮಂಗಲ, ತುಮಕೂರು, ಮಾಗಡಿ 4, ಕೊಪ್ಪ, ಗೌರಿಬಿದನೂರು, ರಾಮನಗರ, ಹೊಸಕೋಟೆ 3, ಸಾಗರ, ಮದ್ದೂರು, ತಿಪಟೂರು, ಶಿರಾ, ತೊಂಡೆಬಾವಿ, ಚಿಕ್ಕಮಗಳೂರು, ಕನಕಪುರ 2, ಭಟ್ಕಳ, ಗುಂಡ್ಲುಪೇಟೆ, ಕೊಳ್ಳೇಗಾಲ, ಅರಸೀಕೆರೆ, ಭದ್ರಾವತಿ, ಸೊರಬ, ಆನೇಕಲ್, ತೀರ್ಥಹಳ್ಳಿ, ತರೀಕೆರೆ, ಶಿಡ್ಲಘಟ್ಟದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ. ದಾವಣಗೆರೆಯಲ್ಲಿ 19 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿದೆ.

ಉತ್ತರ ಕನ್ನಡದಲ್ಲಿ ಜೋರು ಮಳೆ

ಹುಬ್ಬಳ್ಳಿ: ಉತ್ತರ ಕನ್ನಡ, ಬಳ್ಳಾರಿ, ಧಾರವಾಡ, ಬೆಳಗಾವಿ,ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ವಿವಿಧೆಡೆ ಮಂಗಳವಾರ ಮಳೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯಾದ್ಯಂತ ಜೋರಾದ ಮಳೆ ಮುಂದುವರಿಯಿತು. ಕಾರವಾರ ನಗರದಲ್ಲಿ ಮಧ್ಯಾಹ್ನದ ನಂತರ ಗುಡುಗು, ಸಿಡಿಲು ಸಹಿತ ಎರಡು ತಾಸಿಗೂ ಅಧಿಕ ಕಾಲ ವರ್ಷಧಾರೆಯಾಯಿತು.

ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಒಂದು ವಾರದಿಂದ ಆಗಾಗ ಮಳೆಯಾಗುತ್ತಿದೆ. ಇದರಿಂದ 794.90 ಹೆಕ್ಟೇರ್‌ಗಳಷ್ಟು ಭತ್ತದ ಬೆಳೆಗೆ ಹಾನಿಯಾಗಿದೆ. ಮಳೆ ಮುಂದುವರಿದರೆ ಈ ಪ್ರಮಾಣವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ ತಿಳಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದ ಮತ್ತು ಸುತ್ತಲಿನ ಪ್ರದೇಶದಲ್ಲಿ ರಭಸದಿಂದ ಮಳೆ ಸುರಿದಿದೆ. ಧಾರವಾಡದಲ್ಲಿ ಮುಸ್ಸಂಜೆಯಲ್ಲಿ ಜೋರಾದ ಗಾಳಿ ಮಳೆಯಾಗಿದೆ.

ಹಳ್ಳದಲ್ಲಿ ಕೊಚ್ಚಿಹೋದ 20 ಕುರಿ

ಹೊಸದುರ್ಗ (ಚಿತ್ರದುರ್ಗ ಜಿಲ್ಲೆ): ತಾಲ್ಲೂಕಿನಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಪಟ್ಟಣ ಸೇರಿ ಹಲವೆಡೆ ಮಂಗಳವಾರವೂ ಗುಡುಗು, ಸಿಡಿಲು ಸಹಿತ ಭಾರಿ ಮಳೆ ಸುರಿಯಿತು. ಹೋಬಳಿಯ ದೊಡ್ಡತೇಕಲವಟ್ಟಿಯಲ್ಲಿ ಹಳ್ಳ ದಾಟುವಾಗ 20 ಕುರಿಗಳು ಕೊಚ್ಚಿಹೋದವು. ಚಳ್ಳಕೆರೆ ತಾಲ್ಲೂಕಿನ ಬೆಳಗೆರೆ ಗ್ರಾಮದಲ್ಲಿ ಸಿಡಿಲು ಬಡಿದು 7 ಕುರಿಗಳು ಮೃತಪಟ್ಟಿವೆ. 13 ಮನೆಗಳಿಗೆ ಭಾಗಶಃ ಹಾನಿಯಾಗಿವೆ. ಶ್ರೀರಾಂಪುರದಲ್ಲೂ ಕೆರೆಗಳು ತುಂಬಿದ್ದು, ಕೋಡಿ ಬಿದ್ದಿವೆ.

ಜೋರು‌‌‌ ಮಳೆ: ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಗಡುಗು ಸಹಿತ ಜೋರು ಮಳೆ ಸುರಿಯಿತು. ನಗರದ ತಗ್ಗುಪ್ರದೇಶಗಳ ಮನೆಗಳಿಗೆ ನೀರು ನುಗ್ಗಿತು. ನಗರದ ಅನೇಕ ಕಡೆ ಕಾಲುವೆಗಳು ತುಂಬಿ ಹರಿದವು. ರಸ್ತೆಗಳು ನೀರಿನಿಂದ ಜಲಾವೃತವಾದವು.

ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ನ್ಯಾಮತಿ ತಾಲ್ಲೂಕುಗಳ ವಿವಿಧೆಡೆ ಉತ್ತಮ ಮಳೆಯಾಗಿದೆ.

ಮಳೆಯಿಂದ ಹತ್ತಿ ಬೆಳೆಗೆ ಹಾನಿ

ರಾಯಚೂರು: ಜಿಲ್ಲೆಯ ವಿವಿಧೆಡೆ ಮಂಗಳವಾರ ಬಿರುಸಾಗಿ ಸುರಿದ ಮಳೆಯಿಂದಾಗಿ ಕೊಯ್ಲಿಗೆ ಬಂದಿರುವ ಭತ್ತ, ಹತ್ತಿ ಬೆಳೆ ಹಾನಿಯಾಗಿದೆ.

ರಾಯಚೂರು ತಾಲ್ಲೂಕಿನ ದೇವಸುಗೂರು ಹೋಬಳಿ, ಸಿರವಾರ ತಾಲ್ಲೂಕಿನ ಶಿವನಗರ ಕ್ಯಾಂಪ್‌ನಲ್ಲಿ ಭತ್ತದ ಬೆಳೆಗಳು ನೆಲಕ್ಕೆ ಬಿದ್ದಿವೆ. ಮಳೆಯಿಂದಾಗಿ ಹತ್ತಿ ಹಾಳಾಗಿದ್ದು, ಕೊಯ್ಲು ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಕವಿತಾಳದಲ್ಲಿ ಸುಮಾರು 40 ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆ ಹಾನಿಯಾಗಿದೆ.

ಉತ್ತಮ ಮಳೆ (ಚಿಕ್ಕಮಗಳೂರು ವರದಿ): ಕಾಫಿನಾಡಿನಲ್ಲಿ ಉತ್ತಮ ಮಳೆಯಾಗಿದೆ. ಬಾಳೆಹೊನ್ನೂರು ಸಮೀಪದ ಮಹಾಲ್‌ಗೋಡು ಸೇತುವೆ ಮೇಲೆ ನೀರು ಹರಿಯುತ್ತಿದೆ. ಕಿರುಸೇತುವೆಗೆ ಅಳವಡಿಸಿದ್ದ ಮರಳಿನ ಚೀಲಗಳು ಕೊಚ್ಚಿ ಹೋಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT