ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

CBI ತನಿಖೆ ಪ್ರಶ್ನಿಸಿದ್ದ ಡಿಕೆಶಿ ಅರ್ಜಿ ವಿಚಾರಣೆ ನನೆಗುದಿಗೆ: ಹೈಕೋರ್ಟ್ ತರಾಟೆ

Last Updated 31 ಮಾರ್ಚ್ 2023, 14:37 IST
ಅಕ್ಷರ ಗಾತ್ರ

ಬೆಂಗಳೂರು: ‘ಆದಾಯ ಮೀರಿ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕನಕಪುರ ಶಾಸಕ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆ ನಡೆಸಲು ರಾಜ್ಯ ಸರ್ಕಾರ ನೀಡಿದ್ದ ಅನುಮತಿ ಪ್ರಶ್ನಿಸಲಾದ ರಿಟ್‌ ಅರ್ಜಿಗೆ ಮುಕ್ತಿ ನೀಡದೆ ಮುಗುಮ್ಮಾಗಿ ಇರಿಸಲಾಗಿದೆ’ ಎಂದು ಹೈಕೋರ್ಟ್‌, ರಾಜ್ಯ ಪ್ರಾಸಿಕ್ಯೂಷನ್‌ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಸಿಬಿಐ ತನಿಖೆಗೆ ಅನುಮತಿ ನೀಡಲಾದ ಅಧಿಸೂಚನೆ ಪ್ರಶ್ನಿಸಿ ಡಿ.ಕೆ.ಶಿವಕುಮಾರ್ ಸಲ್ಲಿಸಿರುವ ರಿಟ್‌ ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣ’ಗಳ ವಿಚಾರಣೆ ನಡೆಸುವ ಹೈಕೋರ್ಟ್‌ನ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರಾಜ್ಯ ಪ್ರಾಸಿಕ್ಯೂಷನ್‌ ಪರ ಹಾಜರಿದ್ದ ಎಸ್‌ಪಿಪಿ–2, ವಿ.ಎಸ್‌. ಹೆಗಡೆ, ‘ರಿಟ್‌ ಅರ್ಜಿಯ ತಿದ್ದುಪಡಿ ಪ್ರತಿ ಇನ್ನೂ ನಮ್ಮ ಕೈಸೇರಿಲ್ಲ. ವಿಧಾನಸಭೆಗೆ ಚುನಾವಣೆ ಬೇರೆ ಘೋಷಣೆಯಾಗಿದೆ. ಈ ಸಮಯದಲ್ಲಿ ಅಧಿಕಾರಿ ವರ್ಗ ಸಂವಹನಕ್ಕೆ ದಕ್ಕುವುದು ದುರ್ಲಭ. ಈ ಪ್ರಕರಣದಲ್ಲಿ ಹೆಚ್ಚಿನ ಕಾನೂನಾತ್ಮಕ ಅಧ್ಯಯನ ನಡೆಸಬೇಕಾದ ಅವಶ್ಯಕತೆ ಇದೆ. ಅಡ್ವೊಕೇಟ್‌ ಜನರಲ್‌ ಅವರಿಂದಲೂ ಸಾಕಷ್ಟು ವಿವರಣೆ ಪಡೆಯಬೇಕಿದೆ. ಹೀಗಾಗಿ, ಆಕ್ಷೇಪಣೆ ಸಲ್ಲಿಸಲು ಕನಿಷ್ಠ ನಾಲ್ಕು ವಾರಗಳಾದರೂ ಸಮಯ ನೀಡಿ’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಆದರೆ, ಇದನ್ನು ಒಪ್ಪದ ನ್ಯಾಯಪೀಠ, ‘ನೀವು ಬರೀ ಸಮಯವನ್ನು ಕೇಳುತ್ತಿದ್ದೀರಿ. ಈ ಅರ್ಜಿಯ ಪ್ರಗತಿಗಾಗಿ ಕೋರ್ಟೇ ಶ್ರಮಿಸಬೇಕಾದೆಯಲ್ಲಾ, ಬೇರೊಂದು ಪೀಠದಲ್ಲಿದ್ದ ಈ ಅರ್ಜಿಯನ್ನು ಇಲ್ಲೇ ವಿಚಾರಣೆ ನಡೆಸುವಂತೆ ಶಿವಕುಮಾರ್ ಪರ ವಕೀಲರು ಕೋರಿದ ಹಿನ್ನೆಲೆಯಲ್ಲಿ ಇಲ್ಲಿಗೆ ತರಿಸಿಕೊಳ್ಳಲಾಗಿದೆ. ಆದರೆ, ಮತ್ತೊಂದು ನ್ಯಾಯಪೀಠದಲ್ಲಿದ್ದಾಗ ರಾಜ್ಯ ಪ್ರಾಸಿಕ್ಯೂಷನ್‌ ಏಕೆ ಸುಮ್ಮನಿತ್ತು? ಸಿಬಿಐ ನೋಡಿದರೆ ಬೇಗ ಬೇಗ ವಿಚಾರಣೆ ನಡೆಸುವಂತೆ ಕೋರುತ್ತಿದೆ. ನೀವು ನೋಡಿದರೆ ಕಾಲ ತಳ್ಳುತ್ತಿದ್ದೀರಿ. ನಿಮಗೆ ಯಾಕೆ ಸಮಯ ಕೊಡಬೇಕು’ ಎಂದು ಪ್ರಶ್ನಿಸಿತು.

ಅಂತೆಯೇ, ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ಉದಯ ಹೊಳ್ಳ ಅವರಿಗೂ, ‘ಹೊಳ್ಳ ಅವರೇ ನೀವೇಕೆ ಸುಮ್ಮನಿದ್ದಿರಿ’ ಎಂದು ಕೆಣಕಿತು. ಇದಕ್ಕೆ ಹೊಳ್ಳ ಅವರು, ‘ಸ್ವಾಮಿ ರಾಜ್ಯ ಪ್ರಾಸಿಕ್ಯೂಷನ್‌, ಪ್ರತಿಬಾರಿಯೂ ಆಕ್ಷೇಪಣೆ ಸಲ್ಲಿಸಲು ಸಮಯ ಬೇಕು ಎಂದು ಇಷ್ಟು ದಿನಗಳ ಕಾಲ ನೂಕುತ್ತಲೇ ಬಂದಿದೆ’ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.

ಅಂತಿಮವಾಗಿ ನ್ಯಾಯಪೀಠವು, ಎರಡು ದಿನಗಳ ಸಮಯ ಕೊಡಲು ಮುಂದಾಯಿತಾದರೂ ಕಡೆಗೆ ಏಪ್ರಿಲ್‌ 6ಕ್ಕೆ ವಿಚಾರಣೆ ನಿಗದಿಪಡಿಸಿ ಆದೇಶಿಸಿತು. ಇದೇ ವೇಳೆ, ಮತ್ತೊಂದು ಪ್ರಕರಣದಲ್ಲಿ ಸಿಬಿಐ ತನಿಖೆಗೆ ನೀಡಿರುವ ಮಧ್ಯಂತರ ತಡೆ ಆದೇಶವನ್ನು, ಶಿವಕುಮಾರ್ ಪರ ಹಿರಿಯ ವಕೀಲ ಸಿ.ಎಚ್‌. ಜಾಧವ್‌ ಅವರ ಕೋರಿಕೆಯ ಮೇರೆಗೆ ಮುಂದಿನ ವಿಚಾರಣೆವರೆಗೂ ವಿಸ್ತರಿಸಿತು. ಸಿಬಿಐ ಪರ ಪಿ.ಪ್ರಸನ್ನಕುಮಾರ್ ಹಾಜರಿದ್ದರು.

ಪ್ರಕರಣವೇನು?: ‘ಭ್ರಷ್ಟಾಚಾರ ನಿಗ್ರಹ ಕಾಯ್ದೆ–1988ರ ಕಲಂ 13 (2), 13 (1)(ಇ) ಅಡಿಯಲ್ಲಿ ಸಿಬಿಐ 2020ರ ಅಕ್ಟೋಬರ್ 3ರಂದು ಪ್ರಕರಣ ದಾಖಲಿಸಿದೆ. ‘ಸಿಬಿಐ ದಾಖಲಿಸಿರುವ ಈ ಎಫ್‌ಐಆರ್‌ ಕಾನೂನು ಬಾಹಿರವಾಗಿದ್ದು ಇದನ್ನು ರದ್ದುಗೊಳಿಸಬೇಕು’ ಎಂದು ಕೋರಿ ಶಿವಕುಮಾರ್‌ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಸಿಬಿಐ ತನಿಖೆಗೆ ಹೈಕೋರ್ಟ್‌ 2023ರ ಫೆಬ್ರುವರಿ 10ರಂದು ಮಧ್ಯಂತರ ತಡೆ ನೀಡಿತ್ತು.

ಸಿಬಿಐ ತನಿಖೆಗೆ ಆದೇಶಿಸಲಾಗಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ಡಿ.ಕೆ.ಶಿವಕುಮಾರ್ ಸಂಬಂಧಿ ನಾಗರಬಾವಿ ನಿವಾಸಿ ಶಶಿಕುಮಾರ್ ಶಿವಣ್ಣ ಎಂಬುವರು 2020ರ ಜೂನ್‌ನಲ್ಲಿ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು. ಇದನ್ನು ಏಕಸದಸ್ಯ ನ್ಯಾಯಪೀಠ ತಿರಸ್ಕರಿಸಿತ್ತು. ಈ ಆದೇಶ ಪ್ರಶ್ನಿಸಲಾದ ಮೇಲ್ಮನವಿಯನ್ನು ವಿಭಾಗೀಯ ನ್ಯಾಯಪೀಠವೂ ತಿರಸ್ಕರಿಸುವ ಮೂಲಕ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಎತ್ತಿ ಹಿಡಿದಿತ್ತು.

ಶಿವಕುಮಾರ್ ಅವರು ತಮ್ಮ ಮತ್ತೊಂದು ಅರ್ಜಿಯನ್ನು ಇದೇ ನ್ಯಾಯಪೀಠಕ್ಕೆ ವರ್ಗಾಯಿಸಬೇಕು ಎಂಬ ಕೋರಿಕೆಗೆ ಸಿಬಿಐ ಈ ಮೊದಲು ಬಲವಾಗಿ ಆಕ್ಷೇಪಿಸಿತ್ತು. ‘ಈಗಾಗಲೇ, ಇಂತಹುದೇ ಪ್ರಾರ್ಥನೆಯನ್ನು ಹೊಂದಿದ ಶಿವಕುಮಾರ್ ಸಂಬಂಧಿಯ ಅರ್ಜಿ ವಿಭಾಗೀಯ ನ್ಯಾಯಪೀಠದಲ್ಲಿ ಬಿದ್ದು ಹೋಗಿರುವ ಕಾರಣ ಈಗ ಶಿವಕುಮಾರ್‌ ಸ್ವತಃ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುವ ಅವಶ್ಯಕತೆ ಇಲ್ಲ’ ಎಂದು ವಾದ ಮಂಡಿಸಿತ್ತು. ಆದರೆ, ಈ ಆಕ್ಷೇಪಣೆಯನ್ನು ಮಾನ್ಯ ಮಾಡದ ನ್ಯಾಯಮೂರ್ತಿ ಕೆ.ನಟರಾಜನ್‌ ಅವರು, ‘ಆ ಅರ್ಜಿಯೂ ಇಲ್ಲಿಯೇ ವಿಚಾರಣೆ ನಡೆಯಲಿ’ ಎಂದು ಅರ್ಜಿದಾರರ ಕೋರಿಕೆಯನ್ನು ಮನ್ನಿಸಿ ವರ್ಗಾವಣೆಗೆ ನಿರ್ದೇಶನ ನೀಡಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT