ಭಾನುವಾರ, ಮಾರ್ಚ್ 26, 2023
23 °C

ವೈದ್ಯರ ಗ್ರಾಮೀಣ ಸೇವೆ ವಿನಾಯಿತಿಗೆ ನಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಗ್ರಾಮೀಣ ಸೇವೆ ಕಡ್ಡಾಯ ನಿಯಮ ಪ್ರಶ್ನಿಸಿ ವೈದ್ಯಕೀಯ ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿ ಸಂಬಂಧ ಪರಿಹಾರಾತ್ಮಕ ಮಧ್ಯಂತರ ಆದೇಶ ಹೊರಡಿಸಲು ಹೈಕೋರ್ಟ್ ನಿರಾಕರಿಸಿದೆ. ಈ ವಿಷಯದಲ್ಲಿ ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಕರಾರು ಮಾಡಿಕೊಟ್ಟಿದ್ದಾರೆ ಎಂದು ಪೀಠ ಹೇಳಿದೆ.

2020–21ನೇ ಸಾಲಿನಲ್ಲಿ ಎಂಬಿಬಿಎಸ್ ಮುಗಿಸಿದ ವಿದ್ಯಾರ್ಥಿಗಳು ಗ್ರಾಮೀಣ ಸೇವೆಗೆ ನೋಂದಾಯಿಸಿಕೊಳ್ಳಬೇಕು ಎಂದು 2021ರ ಜೂನ್ 8ರಂದು  ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದನ್ನು ಪ್ರಶ್ನಿಸಿ ಡಾ. ಎನ್. ಪ್ರಾರ್ಥನಾ ಹಾಗೂ ಇತರರು ಅರ್ಜಿ ಸಲ್ಲಿಸಿದ್ದಾರೆ.

ಈ ಅಧಿಸೂಚನೆ ವಿಷಯದಲ್ಲಿ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಮ್ ಅವರಿದ್ದ ಪೀಠ, ‘ಒಂದು ವರ್ಷದ ಗ್ರಾಮೀಣ ಸೇವೆಗೆ ವಿದ್ಯಾರ್ಥಿಗಳನ್ನು ಆಹ್ವಾನಿಸಿರುವ ಸರ್ಕಾರದ ನಿರ್ಧಾರ ಸಮಂಜಸವಾಗಿದೆ’ ಎಂದು ಅಭಿಪ್ರಾಯಪಟ್ಟಿದೆ.

‘ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಾರೆ ಎಂಬ ವಿಶ್ವಾಸದಿಂದ ಶುಲ್ಕ ರಿಯಾಯಿತಿಯೊಂದಿಗೆ ವೈದ್ಯಕೀಯ ಶಿಕ್ಷಣವನ್ನು ಸರ್ಕಾರ ನೀಡಿದೆ. ಕೋವಿಡ್‌ 3ನೇ ಅಲೆಯ ನಿರೀಕ್ಷೆ ಇರುವ ಸಂದರ್ಭದಲ್ಲಿ ವೈದ್ಯಕೀಯ ಪದವಿ ಪಡೆದ ಹೊಸ ವಿದ್ಯಾರ್ಥಿಗಳ ಗ್ರಾಮೀಣ ಸೇವೆ ಸರ್ಕಾರಕ್ಕೆ ಅಗತ್ಯವಿದೆ. ವೃತ್ತಿಪರ ವೈದ್ಯರು ತಮ್ಮ ಕರ್ತವ್ಯ ಅರ್ಥ ಮಾಡಿಕೊಳ್ಳುವ ಸಮಯ ಇದಾಗಿದೆ’ ಎಂದು ತಿಳಿಸಿತು.

‘ಹೊಸದಾಗಿ ಎಂಬಿಬಿಎಸ್‌ ಪದವಿ ಪಡೆದವರ ಗ್ರಾಮೀಣ ಸೇವೆ ಜೂನ್ 30ರಿಂದ ಆರಂಭವಾಗಿದೆ. ಆಡಳಿತ ಮಂಡಳಿ ಕೋಟಾದಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಈ ನಿಯಮ ಅನ್ವಯ ಆಗುವುದಿಲ್ಲ. ಆದ್ದರಿಂದ ಇದು ವಿದ್ಯಾರ್ಥಿಗಳಲ್ಲಿ ತಾರತಮ್ಯ ಹುಟ್ಟು ಹಾಕಿದೆ. ಉನ್ನತ ಶಿಕ್ಷಣಕ್ಕಾಗಿ ನೀಟ್ ಪರೀಕ್ಷೆಗೆ ಹಾಜರಾಗಬೇಕಿದ್ದು, ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಬೇಕಿದೆ. ಗ್ರಾಮೀಣ ಸೇವೆ ಕಡ್ಡಾಯಗೊಳಿಸಿದರೆ ಉನ್ನತ ಶಿಕ್ಷಣದ ಮೇಲೆ ಪರಿಣಾಮ ಬೀರಲಿದೆ’ ಎಂದು ಅರ್ಜಿದಾರರು ವಾದಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು