ಬುಧವಾರ, ಜನವರಿ 19, 2022
26 °C
ಇನ್ ಕ್ಯಾಮರಾ ವಿಚಾರಣೆಗೆ ಆದೇಶ

ಮನುಷ್ಯ ಮಸಣಮುಖಿ, ಆಸ್ತಿಗೇಕೆ ಬಡಿದಾಟ?: ಒಡಹುಟ್ಟಿದ ಅಣ್ಣ-ತಂಗಿಗೆ ಹೈಕೋರ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮನುಷ್ಯ ಮಸಣಮುಖಿ, ಅಂತಹ ಅಲೆಕ್ಸಾಂಡರ್‌ನ ಸಾಮ್ರಾಜ್ಯವೇ ಉಳಿಯಲಿಲ್ಲ ಎಂದಾಗ ಸಾವಿನ ಹಾದಿಯಲ್ಲಿ ಸದಾ ದಾಪುಗಾಲಿಕ್ಕುವ ನಾವುಗಳು ಅದರಲ್ಲೂ, ಒಡಹುಟ್ಟಿದ ಅಣ್ಣ–ತಂಗಿಯರು ಆಸ್ತಿಗಾಗಿ ಇಳಿವಯಸ್ಸಿನಲ್ಲಿರುವ ತಂದೆ–ತಾಯಿಗಳ ಮನಸ್ಸನ್ನು ನೋಯಿಸುವುದು ಸರಿಯೇ...‘

ತಂದೆ ಸಂಪಾದಿಸಿದ ಆಸ್ತಿ ಹಂಚಿಕೆ ವ್ಯಾಜ್ಯವೊಂದರಲ್ಲಿ ಕೋರ್ಟ್‌ಗೆ ಖುದ್ದು ಹಾಜರಾಗಿದ್ದ ಅಣ್ಣ–ತಂಗಿ, ವೃದ್ಧ ತಂದೆ–ತಾಯಿಗಳ ಅಹವಾಲನ್ನು ತಾಳ್ಮೆಯಿಂದ ಆಲಿಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಕೋರ್ಟ್‌ನಿಂದ ಹೊರಗೆ ಹೋಗುವಾಗ ಯಾವುದಾದರೂ ಮರದ ಟೊಂಗೆ ನಮ್ಮ ಮೇಲೆ ಬಿದ್ದರೆ ಕಥೆ ಮುಗಿಯಿತು!. ಹೊರಗೆ ಬಂದವರು ಸುರಕ್ಷಿತವಾಗಿ ಮರಳಿ ಮನೆ ಸೇರುತ್ತೇವೆ ಎಂಬುದೇ ಖಾತ್ರಿ ಇಲ್ಲದಿರುವಾಗ ಆಸ್ತಿ ಹಂಚಿಕೆಗಾಗಿ ಹೆತ್ತ ತಂದೆ–ತಾಯಿಯನ್ನು ಅದೂ ಅವರ ಜೀವನದ ಸಂಧ್ಯಾಕಾಲದಲ್ಲಿ ಯಾಕೆ ನೋಯಿಸುತ್ತೀರಿ’ ಎಂದು ಪ್ರಶ್ನಿಸಿತು. 

ಬೆಂಗಳೂರು ನಗರದ ನಿವಾಸಿಗಳಾದ ಶ್ರೀಮಂತ ಕುಟುಂಬವೊಂದರ ಆಸ್ತಿ ಹಂಚಿಕೆ ವಿವಾದವನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಪೀಠ, ‘ಮಗ ಎಷ್ಟೇ ಆಗಲಿ ಮಗ. ಅವನ ಉದ್ಧಟತನ, ಒರಟುತನಗಳನ್ನು ನಾವೂ ಕ್ಷಮಿಸಬೇಕು. ಅಷ್ಟೇಕೆ ಮಗನೂ ತನ್ನ ತಂದೆ ತಾಯಿಯ ಯೋಗ ಕ್ಷೇಮವನ್ನು ತಾನೇ ಹೊರಬೇಕು. ಮಗಳ ಮನೆಯಲ್ಲಿ ಅಳಿಯನೊಟ್ಟಿಗೆ ಇರಬೇಕು ಎಂದರೆ ಹೆತ್ತ ತಂದೆ–ತಾಯಿಗೆ ಎಷ್ಟೊಂದು ಮುಜುಗುರವಾಗಬೇಡ’ ಎಂದು ಅರ್ಜಿದಾರರನ್ನು ಕೇಳಿತು.

ಇದಕ್ಕೆ ಉತ್ತರಿಸಿದ ಅರ್ಜಿದಾರ ಸ್ವಾಮಿ, ‘ಈಕೆ (ತಂಗಿಯ ಕಡೆ ಕೈತೋರಿಸುತ್ತಾ) ತನ್ನ ಸ್ಮಾರ್ಟ್‌ನೆಸ್‌ನಿಂದ ನಮ್ಮ ಕುಟುಂಬವನ್ನೇ ಹಾಳುಗೆಡವಿದ್ದಾಳೆ. ತಂದೆ–ತಾಯಿಯನ್ನು ಆಕೆ ಮನೆಯಲ್ಲಿ ಇಟ್ಟುಕೊಂಡು ಸಾಕುತ್ತಿದ್ದರೂ ಬರುವ ಮೂರೂವರೆ ಲಕ್ಷ ಬಾಡಿಗೆಯಲ್ಲಿ ಬಹುಪಾಲು ಹಣವನ್ನು ಪೊಲೀಸರಿಗೇ ಸುರುವಿ ನನಗೆ ಹಿಂಸೆ ಕೊಡುತ್ತಿದ್ದಾಳೆ. ಸಿವಿಲ್‌ ವ್ಯಾಜ್ಯಗಳಲ್ಲಿ ನನ್ನ ಸ್ವಯಾರ್ಜಿತ ಸ್ಥಿರಾಸ್ತಿಯನ್ನೂ ಪಾಲು ಮಾಡಿಕೊಡುವಂತೆ ಕೇಳುತ್ತಿದ್ದಾಳೆ. ಇದ್ಯಾವ ನ್ಯಾಯ ಸ್ವಾಮಿ’ ಎಂದು ದೈನ್ಯದಿಂದ ಕೇಳಿದರು.

ಇದಕ್ಕೆ ಉತ್ತರಿಸಿದ ತಂಗಿ, ‘ಸ್ವಾಮಿ ನನಗೇನೂ ಅವನ ಆಸ್ತಿಯ ಮೇಲೆ ಆಸೆಯಿಲ್ಲ. ನನ್ನ ಮಗ ಅಮೆರಿಕಾದಲ್ಲಿ ಎಂಜಿನಿಯರಿಂಗ್‌ ಓದುತ್ತಿದ್ದಾನೆ. ನಾನೂ ಸ್ಥಿತಿವಂತಳಿದ್ದೇನೆ. ಆದರೆ ಕೊನೆಗಾಲದಲ್ಲಿ ತಂದೆ–ತಾಯಿಯನ್ನು ನೋಡಿಕೊಳ್ಳುವುದಕ್ಕೆ ಆಸ್ತಿ ಪಾಲು


ಕೃಷ್ಣ ಎಸ್‌.ದೀಕ್ಷಿತ್

ಮಾಡಿಕೊಡದೆ ಹೋದರೆ ಮುಂದೇನು ಗತಿ ಎಂಬ ಮುಂದಾಲೋಚನೆಯಿಂದ ಈ ರೀತಿ ದಾವೆ ಹೂಡಿದ್ದೇನೆ. ಬೇಕಾದರೆ ವಾಪಸು ತೆಗೆದುಕೊಳ್ಳುತ್ತೇನೆ’ ಎಂದರು.

ಪ್ರಕರಣ ಕುಟುಂಬದ ವ್ಯಾಜ್ಯವಾಗಿರುವ ಕಾರಣ ವಿಚಾರಣೆಯನ್ನು ತೆರೆದ ನ್ಯಾಯಾಲಯದಲ್ಲಿ ನಡೆಸುವುದು ಬೇಡ. ಇನ್‌ ಕ್ಯಾಮೆರಾ (ಅರ್ಜಿದಾರರ, ಪ್ರತಿವಾದಿಗಳು ಮತ್ತು ವಕೀಲರು ಮಾತ್ರವೇ ಹಾಜರಿರುವ ಕೋಣೆ) ವಿಚಾರಣೆ ನಡೆಯಲಿ ಎಂದ ಆದೇಶಿಸಿದ ಪೀಠ ವಿಚಾರಣೆಯನ್ನು ಇದೇ 29ಕ್ಕೆ ಮುಂದೂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು