ಸಕಾಲದಲ್ಲಿ ಗುತ್ತಿಗೆ ಹಣ ಪಾವತಿಸಿ: ಹೈಕೋರ್ಟ್

ಬೆಂಗಳೂರು: ‘ಗುತ್ತಿಗೆದಾರರು ಯಾವುದೇ ಲೋಪವಿಲ್ಲದೆ ಕಾಮಗಾರಿ ಪೂರ್ಣಗೊಳಿಸಿದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮತ್ತು ಅಧೀನ ಸಂಸ್ಥೆಗಳು ಗುತ್ತಿಗೆದಾರರಿಗೆ ಸಕಾಲದಲ್ಲಿ ಹಣ ಪಾವತಿ ಮಾಡಬೇಕು’ ಎಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ಖಡಕ್ ನಿರ್ದೇಶನ ನೀಡಿದೆ.
‘ಕಾಮಗಾರಿ ಪೂರ್ಣಗೊಂಡು ಹಲವು ತಿಂಗಳು ಕಳೆದಿದ್ದರೂ ಗುತ್ತಿಗೆಯ ₹ 15 ಕೋಟಿಗೂ ಹೆಚ್ಚಿನ ಮೊತ್ತ ನೀಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಳಂಬ ಮಾಡುತ್ತಿದೆ’ ಎಂದು ಆಕ್ಷೇಪಿಸಿ ಬೆಂಗಳೂರಿನ ‘ಸತ್ಯ ಕನ್ಸಟ್ರಕ್ಷನ್ಸ್’, ಬಿ.ಬಿ.ಉಮೇಶ್ ಮತ್ತು ಕೆ.ಎಸ್.ರೋಹಿತ್ ಸಲ್ಲಿಸಿದ್ದ ರಿಟ್ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ತೀರ್ಪು ಪ್ರಕಟಿಸಿದೆ.
‘ಗುತ್ತಿಗೆ ಹಣ ಪಾವತಿಸುತ್ತಿಲ್ಲ ಎಂದು ಆಕ್ಷೇಪಿಸಿ ಗುತ್ತಿಗೆದಾರರು ನ್ಯಾಯಾಲಯದ ಮೆಟ್ಟಿಲೇರುತ್ತಿರುವ ಹಲವು ಪ್ರಕರಣಗಳು ಕೋರ್ಟ್ ಗಮನಕ್ಕೆ ಬಂದಿದೆ. ಇಂತಹ ಪ್ರಕರಣಗಳಲ್ಲಿ ಸರ್ಕಾರ ಮತ್ತು ಸರ್ಕಾರಿ ಸಂಸ್ಥೆಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಸಂವಿಧಾನದ ಹೊಣೆಗಾರಿಕೆ ನಿರ್ವಹಣೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಬೇಕು. ಗುತ್ತಿಗೆ ಹಣ ಪಾವತಿಸದೆ ಅಪ್ರಾಮಾಣಿಕತೆ ಮೆರೆಯಬಾರದು. ಸಾರ್ವಜನಿಕರ ತಪ್ಪು ಕಲ್ಪನೆಗೆ ಒಳಗಾಗಲು ಅವಕಾಶ ಮಾಡಿಕೊಡಬಾರದು’ ಎಂದು ನ್ಯಾಯಪೀಠ ಹೇಳಿದೆ. ‘ಗುತ್ತಿಗೆದಾರರು ಭಾರಿ ಮೊತ್ತದ ಹಣ ವ್ಯಯಿಸಿ ಕಾಮಗಾರಿ ಪೂರೈಸಿರುತ್ತಾರೆ. ಕೆಲವೊಮ್ಮೆ ಸಾಲ ಮಾಡಿಯೂ ಹಣ ಹೊಂದಿಸಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಅದನ್ನು ದೃಢೀಕರಿಸಿದ ಪ್ರಮಾಣ ಪತ್ರ ನೀಡಿದ್ದರೂ ಹಣ ಬಿಡುಗಡೆಗೆ ವಿಳಂಬ ಮಾಡುವುದು ನ್ಯಾಯಸಮ್ಮತವಲ್ಲ. ಹಣಕ್ಕಾಗಿ ಗುತ್ತಿಗೆದಾರರು ಕೋರ್ಟ್ ಮೆಟ್ಟಿಲೇರಿ ಕಾನೂನು ಹೋರಾಟ ನಡೆಸುವ ಪರಿಸ್ಥಿತಿ ಸೃಷ್ಟಿಸಬಾರದು’ ಎಂದು ನ್ಯಾಯಪೀಠ ಹೇಳಿದೆ.
ನಿರ್ದೇಶನ: ‘ನ್ಯಾಯಾಲಯಕ್ಕೆ ನೀಡಿರುವ ಭರವಸೆಯಂತೆ ಅರ್ಜಿದಾರರಿಗೆ ಬಿಬಿಎಂಪಿ ಶೀಘ್ರವೇ ಹಣ ಬಿಡುಗಡೆ ಮಾಡಬೇಕು. ಒಂದೊಮ್ಮೆ ವಿಳಂಬವಾದರೆ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಬೇಕಿದ್ದ ದಿನದಿಂದ ಪ್ರತಿ ತಿಂಗಳಿಗೆ ಶೇ 2ರಷ್ಟು ಬಡ್ಡಿ ಪಾವತಿಸಬೇಕು. ಆ ಹಣವನ್ನು ಪ್ರಕರಣದಲ್ಲಿ ತಪ್ಪಿತಸ್ಥರಾಗಿರುವ ಅಧಿಕಾರಿಗಳಿಂದ ವಸೂಲಿ ಮಾಡಬೇಕು. ಈ ಆದೇಶ ಪಾಲಿಸಿದ ಬಗ್ಗೆ ಎರಡು ವಾರಗಳಲ್ಲಿ ರಿಜಿಸ್ಟ್ರಾರ್ ಜನರಲ್ ಅವರಿಗೆ ವರದಿ ಸಲ್ಲಿಸಬೇಕು’ ಎಂದು ನ್ಯಾಯಪೀಠ ಬಿಬಿಎಂಪಿಗೆ ನಿರ್ದೇಶಿಸಿದೆ. ‘ಒಂದು ವೇಳೆ ತಪ್ಪಿದರೆ ನ್ಯಾಯಾಂಗ ನಿಂದನೆಯಡಿ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.