ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಕೆ ಗೋಜಲು: ರೋಸಿರುವ ಜನ

ನಂಬರ್‌ ಪ್ಲೇಟ್ ವಿಳಂಬ
Last Updated 13 ಮಾರ್ಚ್ 2022, 20:24 IST
ಅಕ್ಷರ ಗಾತ್ರ

ಬೆಂಗಳೂರು: ವಾಹನಗಳ ಕಳವು ಮತ್ತು ದುರುಪಯೋಗ ತಡೆಯಲು ಎಲ್ಲ ವಾಹನಗಳಿಗೂ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್‌ (ಎಚ್‌ಎಸ್‌ಆರ್‌ಪಿ) ಅಳವಡಿಕೆ ಮಾಡುವ ಪ್ರಕ್ರಿಯೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳ್ಳದೇ ಹೊಸ ವಾಹನ ಖರೀದಿ ಮಾಡುವ ಜನ ರೋಸಿ ಹೋಗಿದ್ದಾರೆ. ಹಳೇ ವಾಹನಗಳ ನಂಬರ್ ಪ್ಲೇಟ್ ಬದಲಾವಣೆ ಪ್ರಕ್ರಿಯೆ ಇನ್ನೂ ಆರಂಭವೇ ಆಗಿಲ್ಲ.

ಎಲ್ಲ ವಾಹನಗಳಿಗೂ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಕೆಯನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. 2019 ರ ಮಾರ್ಚ್‌ 31ರ ಬಳಿಕ ರಸ್ತೆಗೆ ಇಳಿಯುತ್ತಿರುವ ಹೊಸ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಸಂಖ್ಯೆಯನ್ನು ಆರಂಭದಲ್ಲೇ ಅಳವಡಿಸಲಾಗುತ್ತಿದೆ. ಹಾಲೊಗ್ರಾಂ ಜೊತೆಗೆ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಸಾರಿಗೆ ಇಲಾಖೆ ನೀಡುತ್ತದೆ. ಎಂಜಿನ್ ಸಂಖ್ಯೆ, ಚಾಸಿ ಸಂಖ್ಯೆ ಸೇರಿ ಎಲ್ಲ ಮಾಹಿತಿ ಒಳಗೊಂಡಿರುತ್ತದೆ.

ಈ ನಂಬರ್ ಪ್ಲೇಟ್‌ ಸಿದ್ಧಪಡಿಸಿಕೊಡುವ ಜವಾಬ್ದಾರಿಯನ್ನು ರಾಜ್ಯದಲ್ಲಿ 5 ಕಂಪನಿಗಳು ಪಡೆದುಕೊಂಡಿವೆ. ವಾಹನಗಳನ್ನು ಮಾರಾಟ ಮಾಡುವ ಡೀಲರ್‌ ಏಜೆನ್ಸಿಗಳು ಹೋಮೋಲೋಗೇಷನ್ ಪೋರ್ಟಲ್‌ನಲ್ಲಿ ವಾಹನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಅಪ್‌ಲೋಡ್ ಮಾಡುತ್ತವೆ. ಅದಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳು ಅನುಮೋದನೆ ನೀಡುತ್ತಾರೆ. ನಂಬರ್ ಪ್ಲೇಟ್‌ ಸಿದ್ಧಪಡಿಸುವ ಕಂಪನಿಗೆ ಆ ಮಾಹಿತಿ ರವಾನೆಯಾಗುತ್ತದೆ. ನಂಬರ್ ಪ್ಲೇಟ್ ಸಿದ್ಧಪಡಿಸಿ ತಂದು ಕೊಡುವುದು ಆ ಕಂಪನಿಯ ಜವಾಬ್ದಾರಿ.

ಮಾರ್ಗಸೂಚಿ ಪ್ರಕಾರ ವಾಹನ ಖರೀದಿಸಲು ಬರುವ ಗ್ರಾಹಕರು ಹಣ ಪಾವತಿಸಿದ 6 ಗಂಟೆಗಳಲ್ಲೇ ಈ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳಬೇಕು. ಆದರೆ, ನಂಬರ್ ಪ್ಲೇಟ್‌ಗಾಗಿ ವಾರಗಟ್ಟಲೆ, ಕೆಲವೆಡೆ ತಿಂಗಳು ಕಾಯಬೇಕಾದ ಸ್ಥಿತಿ ಇದೆ. ಒಮ್ಮೊಮ್ಮೆ ಡೀಲರ್ ಏಜೆನ್ಸಿಗಳಿಂದ, ಕೆಲವೊಮ್ಮೆ ಸಾರಿಗೆ ಇಲಾಖೆಗಳಿಂದ ಮತ್ತು ನಂಬರ್ ಪ್ಲೇಟ್ ಮುದ್ರಿಸಿಕೊಡುವ ಕಂಪನಿಗಳಿಂದ ವಿಳಂಬವಾಗುತ್ತಿದೆ. ವಾಹನಗಳನ್ನು ಖರೀದಿಸುವ ಗ್ರಾಹಕರು ತಾತ್ಕಾಲಿಕ ನಂಬರ್‌ನಲ್ಲಿ ಹೆಚ್ಚು ದಿನ ಚಾಲನೆ ಮಾಡಿದರೆ ಪೊಲೀಸರಿಂದ ದಂಡ ಬೀಳುತ್ತದೆ. ಹೊಸ ವಾಹನ ಖರೀದಿಸಿ, ದಂಡ ಕಟ್ಟಬೇಕಾಗಿರುವುದು ಜನರಲ್ಲಿ ಬೇಸರ ಹುಟ್ಟಿಸಿದೆ.

‘ಈ ಪ್ರಕ್ರಿಯೆ ವಿಳಂಬಕ್ಕೆ ಕಾರಣ ಯಾರು ಎಂಬುದನ್ನು ಪತ್ತೆ ಹಚ್ಚಲು ಈ ಪೋರ್ಟಲ್‌ನಲ್ಲಿ ಅವಕಾಶ ಇದೆ. ಅದನ್ನು ಆಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬಹುದು. ಮುಖ್ಯವಾಗಿ ಈ ವ್ಯವಸ್ಥೆಯನ್ನು ಸಕಾಲ ವ್ಯಾಪ್ತಿಗೆ ತರಬೇಕು. ವಾಹನಗಳ ನೋಂದಣಿ ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು’ ಎನ್ನುತ್ತಾರೆ ಸಾರಿಗೆ ಇಲಾಖೆ ನಿವೃತ್ತ ಅಧಿಕಾರಿಗಳು.

‘ಹೊಸ ವಾಹನಗಳ ನೋಂದಣಿಗೇ ಇಷ್ಟೊಂದು ವಿಳಂಬವಾದರ ಇನ್ನು ಹಳೇ ವಾಹನಗಳಿಗೂ (1.76 ಕೋಟಿ) ಈ ಮಾದರಿಯ ನಂಬರ್ ಪ್ಲೇಟ್ ಅಳವಡಿಕೆ ಮಾಡಲು ಇನ್ನೆಷ್ಟು ಕಾಲ ಹಿಡಿಯುತ್ತದೆ ಗೊತ್ತಾಗುತ್ತಿಲ್ಲ. ಈ ಪ್ರಕ್ರಿಯೆಯಲ್ಲಿ ‘ಹಣಕಾಸಿನ ವ್ಯವಹಾರ’ಕ್ಕೆ ಅಷ್ಟಾಗಿ ಆಸ್ಪದ ಇಲ್ಲ. ಆದ್ದರಿಂದ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಆಸಕ್ತಿ ಇಲ್ಲ’ ಎನ್ನುತ್ತಾರೆ ವಾಹನಗಳ ಮಾಲೀಕರು.

‘ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ ಅಳವಡಿಕೆಗೆ ಕೇಂದ್ರ ಸರ್ಕಾರ ರೂಪಿಸಿರುವ ಮಾರ್ಗಸೂಚಿ ಪ್ರಕಾರ ಸಾರಿಗೆ ಇಲಾಖೆ ಸಮರ್ಪಕವಾಗಿಪ್ರಕ್ರಿಯೆಯನ್ನು ಅನುಸರಿಸುತ್ತಿಲ್ಲ. ಕೇವಲ 6 ಗಂಟೆಗಳಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡು ನಂಬರ್ ಪ್ಲೇಟ್ ವಾಹನಕ್ಕೆ ಅಳವಡಿಕೆ ಆಗಬೇಕಿದೆ. ಆದರೆ, ಈಗ ತಿಂಗಳುಗಟ್ಟಲೆ ಕಾಯಬೇಕಾದ ಸ್ಥಿತಿ ಇದೆ’ ಎಂದು ಕರ್ನಾಟಕ ರಾಜ್ಯ ಟ್ರಾವೆಲ್ಸ್‌ ಮಾಲೀಕರ ಸಂಘದ ಅಧ್ಯಕ್ಷ ಕೆ.ರಾಧಾಕೃಷ್ಣ ಹೊಳ್ಳ ಹೇಳಿದರು.

ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್‌ ನೀಡಿದ್ದ ಗಡುವು ಪೂರೈಸಲು ಎರಡು ದಶಕಗಳಿಂದ ವಿಫಲವಾಗಿರುವ ಸಾರಿಗೆ ಇಲಾಖೆ, ಮೂರು ವರ್ಷಗಳಲ್ಲಿ ಎಲ್ಲಾ ವಾಹನಗಳಿಗೂ ಈ ನಂಬರ್ ಪ್ಲೇಟ್ ಅಳವಡಿಕೆಯಾಗುವಂತೆ ನೋಡಿಕೊಳ್ಳಲು ಇತ್ತೀಚೆಗೆ ಎಲ್ಲಾ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಸೂಚನೆ ನೀಡಿದೆ.

‘ಹಳೇ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸುವ ಮೊದಲು ವಾಹನಗಳ ತಪಾಸಣೆ ಆಗಬೇಕಿದೆ. ಬೆಂಗಳೂರು ಒಂದರಲ್ಲೇ ತಿಂಗಳಿಗೆ 500 ವಾಹನಗಳು ಕಳವಾಗುತ್ತಿವೆ. ಕದ್ದ ವಾಹನಗಳಿಗೆ ನಕಲಿ ನೋಂದಣಿ ಪ್ರಮಾಣ ಪತ್ರ (ಆರ್‌.ಸಿ) ಸಿದ್ಧಪಡಿಸಿಕೊಂಡು ಓಡಾಡುತ್ತಿದ್ದಾರೆ. ಆರ್.ಸಿ ಮಾನ್ಯತೆ ಪರಿಶೀಲಿಸದೆ ಎಚ್‌ಎಸ್‌ಆರ್‌ಪಿ ನೀಡಿದರೆ ಅಂತಹ ವಾಹನಗಳನ್ನು ನಾವೇ ಕಾನೂನುಬದ್ಧಗೊಳಿಸಿದಂತೆ ಆಗಲಿದೆ’ ಎನ್ನುವ ಆತಂಕ ಇಲಾಖೆ ಹಿರಿಯ ಅಧಿಕಾರಿಯೊಬ್ಬರದು.

ಇಲಾಖೆಯ ವೆಬ್‌ಸೈಟ್‌ನಲ್ಲಿ ದೂರವಾಣಿ ಸಂಖ್ಯೆ ಮಾಯ
ಭ್ರಷ್ಟಾಚಾರ ತಡೆಗೆ ಪಾರದರ್ಶಕತೆ ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಹೇಳುವ ಸಾರಿಗೆ ಇಲಾಖೆ, ಅಧಿಕೃತ ವೆಬ್‌ಸೈಟ್‌ನಲ್ಲಿದ್ದ ಎಲ್ಲಾ ಅಧಿಕಾರಿಗಳ ಸಂಪರ್ಕ ಸಂಖ್ಯೆಯನ್ನು ‘ಮಾಯ’ಮಾಡಿದೆ.

ಇಲಾಖೆಯ ಆಯುಕ್ತರು ಸೇರಿ ಎಲ್ಲಾ ಹೆಚ್ಚುವರಿ ಸಾರಿಗೆ ಆಯುಕ್ತರು, ಜಂಟಿ ಆಯುಕ್ತರು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಮೊಬೈಲ್ ದೂರವಾಣಿ ಸಂಖ್ಯೆ ಕಳೆದ ಕೆಲವು ದಿನಗಳ ತನಕ ವೆಬ್‌ಸೈಟ್‌ನಲ್ಲಿ ಇತ್ತು. ಈಗ ಕಚೇರಿಯ ಸ್ಥಿರ ದೂರವಾಣಿ ಸಂಖ್ಯೆಗಳಷ್ಟೇ ಲಭ್ಯವಿದೆ. ಇವುಗಳಲ್ಲಿ ಕೆಲವು ದೂರವಾಣಿ ಸಂಖ್ಯೆಗಳು ನಿಷ್ಕ್ರಿಯಗೊಂಡಿದ್ದರೆ, ಇನ್ನು ಕೆಲವು ರಿಂಗ್‌ ಆದರೂ ಕರೆ ಸ್ವೀಕರಿಸುತ್ತಿಲ್ಲ.

‘ದಿನವಿಡೀ ಕರೆ ಮಾಡಿದರೂ ಸಂಪರ್ಕ ಮಾಡುವುದು ಕಷ್ಟ. ಸಾರ್ವಜನಿಕರ ಸಮಸ್ಯೆ ಕೇಳಿಸಿಕೊಳ್ಳಲು ಅಧಿಕಾರಿಗಳಿಗೆ ಕಷ್ಟ ಎನಿಸಿದರೆ ಅವರಿಗೆ ಸಾರ್ವಜನಿಕರ ತೆರಿಗೆ ಹಣದಿಂದ ಸಂಬಳ ಏಕೆ ಕೊಡಬೇಕು’ ಎಂಬುದು ಸಾರಿಗೆ ಇಲಾಖೆಯ ಧೋರಣೆಯಿಂದ ಬೇಸತ್ತಿರುವ ಜನರ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT