ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19: ರೋಗಿಗಳಲ್ಲಿ ‘ಅಧಿಕ ಸಕ್ಕರೆ ಅಂಶ’

ಸ್ಟಿರಾಯ್ಡ್‌ ಬಳಕೆ, ಭಯದಿಂದ ದಿಢೀರ್ ಏರಿಕೆ: 40 ವರ್ಷ ಕೆಳಗಿನವರಲ್ಲೇ ಹೆಚ್ಚು
Last Updated 23 ಮೇ 2021, 20:28 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌–19 ರೋಗಿಗಳಲ್ಲಿ ಸ್ಟಿರಾಯ್ಡ್‌ ಬಳಕೆಯಿಂದ ‘ಕಪ್ಪು ಶಿಲೀಂಧ್ರ’ ಸಮಸ್ಯೆ ತಲೆದೋರಿರುವ ಬೆನ್ನಲ್ಲೇ, ಈ ಸೋಂಕಿನಿಂದ ಗುಣಮುಖರಾದ ಸಾಕಷ್ಟು ಜನರ ರಕ್ತದಲ್ಲಿ ಅಧಿಕ ಪ್ರಮಾಣದ ಸಕ್ಕರೆ ಅಂಶ (ಹೈಪರ್‌ ಗ್ಲೈಸಿಮಿಯಾ) ಕಾಣಿಸಿಕೊಳ್ಳುತ್ತಿದೆ.

ಎರಡನೇ ಅಲೆಯಲ್ಲಿ 40 ವರ್ಷ ಕೆಳಗಿನವರಲ್ಲಿ ಹೈಪರ್‌ ಗ್ಲೈಸಿಮಿಯಾ ಕಾಡುತ್ತಿದೆ.

ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರು ಮತ್ತು ಮನೆಯಲ್ಲಿ ಪ್ರತ್ಯೇಕವಾಗಿದ್ದವರಲ್ಲೂ ‘ಹೈಪರ್‌ ಗ್ಲೈಸಿಮಿಯಾ’ ಕಾಣಿಸಿಕೊಂಡಿದೆ. ಇದಕ್ಕೆ ಕೋವಿಡ್ ಸೋಂಕು ಪ್ರಧಾನ ಕಾರಣ. ಮಧುಮೇಹದ ಹಿನ್ನೆಲೆ ಇಲ್ಲದವರೂ ಈಗ ಇದಕ್ಕಿದ್ದ ಹಾಗೆ ಮಧುಮೇಹಿಗಳಾಗುತ್ತಿದ್ದಾರೆ. ಕೆಲವರಲ್ಲಿ ಸಾಮಾನ್ಯ ಸ್ವರೂಪದಲ್ಲಿದ್ದರೆ, ಹಲವರಲ್ಲಿ ಗಂಭೀರ ಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತಿದೆ.

ಸ್ಟಿರಾಯ್ಡ್‌ ಜೀವರಕ್ಷಕವೇನೊ ಹೌದು. ಆದರೆ, ಅದರ ಬಳಕೆ ಕೋವಿಡ್ ರೋಗಿಗಳನ್ನು ಹೆಚ್ಚು ಹೆಚ್ಚು ಸವಾಲುಗಳಿಗೆ ಒಡ್ಡುತ್ತಿದೆ. ವೈರಾಣುವಿನ ದಾಳಿ, ಸ್ಟಿರಾಯ್ಡ್‌ ಬಳಕೆ, ಕೋವಿಡ್‌ನಿಂದ ಸಾವಿನ ಭೀತಿ ಮತ್ತು ಮಾನಸಿಕ ಒತ್ತಡವೇ ರಕ್ತದಲ್ಲಿ ಸಕ್ಕರೆ ಅಂಶ ಏರುಪೇರಾಗಲು ಕಾರಣ ಎಂದು ‘ಡಯಾಬಿಟೀಸ್‌ ಇಂಡಿಯಾ’ ಬಹಿರಂಗಪಡಿಸಿದೆ.

ಕೋವಿಡ್‌ ರೋಗಿಗಳಲ್ಲಿ ಸ್ಟಿರಾಯ್ಡ್‌ ಬಳಕೆಯ ಸಂದರ್ಭ, ಡೋಸೇಜ್‌ ಪ್ರಮಾಣ ಮತ್ತು ಎಷ್ಟು ಅವಧಿಯವರೆಗೆ ಬಳಕೆ ಮಾಡಬೇಕು ಎಂಬುದನ್ನು ವೈಜ್ಞಾನಿಕವಾಗಿ ನಿರ್ಧರಿಸುವಲ್ಲಿವೈದ್ಯರು ಎಡವುತ್ತಿದ್ದಾರೆ. ಇದರ ಪರಿಣಾಮ, ಕೋವಿಡ್‌ನಿಂದ ಬಳಲುತ್ತಿರುವವರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ, ಸ್ಟಿರಾಯ್ಡ್‌ ಬಳಕೆಯಿಂದ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾದಾಗ ಅದನ್ನು ತ್ವರಿತಗತಿಯಲ್ಲಿ ನಿಭಾಯಿಸುವುದು ಹೇಗೆ ಎಂಬುದನ್ನು ವೈದ್ಯರು ತಕ್ಷಣವೇ ತಿಳಿದುಕೊಂಡು ಚಿಕಿತ್ಸೆ ನೀಡಬೇಕಿದೆ ಎಂದು ಅಧ್ಯಯನ ತಿಳಿಸಿದೆ.

‘ಡಯಾಬಿಟೀಸ್‌ ಇಂಡಿಯಾ’ದ ಅಧ್ಯಕ್ಷ ಡಾ. ಎಸ್‌.ಆರ್‌.ಅರವಿಂದ್‌ ‘ಪ್ರಜಾವಾಣಿ’ ಜತೆ ಮಾತನಾಡಿ, ‘ಈಗ ಕಾಣಿಸಿಕೊಳ್ಳುತ್ತಿರುವ ಮಧು ಮೇಹಕ್ಕೆ ಹೊಸ ಆರಂಭ (ನ್ಯೂ ಆನ್‌ಸೆಟ್) ಎಂದು ಕರೆಯಲಾಗುತ್ತದೆ. ಕೋವಿಡ್‌ನಿಂದ ಗುಣಮುಖರಾದವರಲ್ಲಿ ಶೇ 5 ರಿಂದ 10ರಷ್ಟು ಜನರಲ್ಲಿ ಮಧುಮೇಹದ ಪ್ರಕರಣಗಳು ಕಾಣಿಸಿಕೊಂಡಿವೆ’ಎಂದರು.

‘ಹಿಂದೆ ದೀರ್ಘಾವಧಿಯಲ್ಲಿ ಸ್ಟಿರಾಯ್ಡ್‌ ಬಳಕೆ ಮಾಡಿದಾಗ ಮಧುಮೇಹ ಬರುತ್ತಿತ್ತು. ಆದರೆ, ಈಗ ಕೋವಿಡ್‌ರೋಗಿಗಳಲ್ಲಿ ವ್ಯಾಪಕವಾಗಿ ಬಳಕೆ ಮಾಡುತ್ತಿರುವುದರಿಂದ, ಅದರ ಪರಿಣಾಮ ಬೇಗನೇ ಗೊತ್ತಾಗುತ್ತಿದೆ. ಕೊರೊನಾ ವೈರಾಣು ನೇರವಾಗಿ ಮೇದೋಜೀರಕವನ್ನು ಹಾನಿ ಮಾಡುತ್ತದೆ ಎಂಬ ಅಂಶ ಗೊತ್ತಾಗಿದೆ. ಇದನ್ನು ಪುಷ್ಟೀಕರಿಸಲು ಇನ್ನಷ್ಟು ಪುರಾವೆಗಳು ಬೇಕು. ಆದರೆ, ಇನ್ಸುಲಿನ್ ಉತ್ಪಾದಿಸುವ ಬಿಟಾ ಕೋಶದ ಬಯಾಪ್ಸಿ ಮಾಡಿದಾಗ ವೈರಾಣು ದಾಳಿಯಿಂದ ಬಿಟಾಕೋಶ ನಾಶ ಆಗಿದ್ದು ಬೆಳಕಿಗೆ ಬಂದಿದೆ’ ಎಂದು ಅವರು ಹೇಳಿದರು.

‘ಕೋವಿಡ್‌ನಿಂದ ಯಾರೇ ಆಸ್ಪತ್ರೆಗೆ ದಾಖಲಾದರೂ ಪ್ರತಿದಿನ ಎರಡು ಬಾರಿ ರಕ್ತದಲ್ಲಿ ಸಕ್ಕರೆ ಅಂಶ ಮತ್ತು ಎಚ್‌ಬಿಎ1ಸಿ ಪರೀಕ್ಷೆ ಕಡ್ಡಾಯವಾಗಿ ಮಾಡಲೇಬೇಕು. ಅದು ಮಾಡದೇ ಸ್ಟಿರಾಯ್ಡ್‌ ಕೊಟ್ಟರೆ ರಕ್ತದಲ್ಲಿ ಏಕಾಏಕಿ ಸಕ್ಕರೆ ಪ್ರಮಾಣ 500 ರಿಂದ 600ಕ್ಕೆ ಹೋಗಿ ಗಂಭೀರ ಪರಿಸ್ಥಿತಿಉದ್ಭವಿಸುತ್ತದೆ’ ಎನ್ನುತ್ತಾರೆ ಅರವಿಂದ್.

ಬೆಂಗಳೂರಿನಲ್ಲಿ ಡಯಾಬಿಟೀಸ್‌ ಕ್ಲಿನಿಕ್‌ ಅಥವಾ ಆಸ್ಪತ್ರೆಗಳಿಗೆ ಬರುತ್ತಿರುವ ಒಟ್ಟು ಮಧುಮೇಹಿಗಳ ಪೈಕಿ, 8– 10 ಮಂದಿ ಹೊಸ ರೋಗಿಗಳು. ಇವರು ಕೋವಿಡ್‌ನಿಂದ ಗುಣಮುಖರಾಗಿ ಬಂದವರು. 40 ವರ್ಷಕ್ಕಿಂತ ಕೆಳಗಿನವರು ಎಂದು ಅವರು ವಿವರಿಸಿದರು.

‍‘ಕೋವಿಡ್‌ ರೋಗಿಗಳ ಚಿಕಿತ್ಸೆ ಸಂದರ್ಭದಲ್ಲಿ ರಕ್ತದಲ್ಲಿ ಸಕ್ಕರೆ ಅಂಶ ಏರುಪೇರಾಗುವುದನ್ನು ಗಮನವಿಡಲು (ಆಮ್ಲಜನಕದ ಮೇಲೆ ಗಮನ ಇಡುವಂತೆ) ಹಾಗೂ ಅದಕ್ಕೆ ಸಂದರ್ಭೋಚಿತವಾಗಿ ಔಷಧ ಮತ್ತು ಇತರ ಉಪಶಮನಗಳ ಬಗ್ಗೆ ಸರ್ಕಾರಕ್ಕೆ ಸಲಹೆಗಳ ಮಾರ್ಗಸೂಚಿ ನೀಡಿದ್ದೇವೆ’ ಎಂದು ಡಾ.ಎಸ್.ಆರ್. ಅರವಿಂದ್‌ ಅವರು ತಿಳಿಸಿದರು.

ಹೈಪರ್‌ ಗ್ಲೈಸಿಮಿಯಾಕ್ಕೆ ಕಾರಣವೇನು?
*ಸ್ಟಿರಾಯ್ಡ್‌ ಬಳಕೆಯಿಂದ ಜಠರದಲ್ಲಿ ಗ್ಲುಕೋಸ್‌ ಅಧಿಕ ಉತ್ಪಾದನೆ ಆಗುತ್ತದೆ. ಇದರಿಂದ ಪ್ರತಿ ನಿಯಂತ್ರಕ ಹಾರ್ಮೋನುಗಳ ಮೇಲೆ ಪರಿಣಾಮ ಉಂಟಾಗುತ್ತದೆ.
* ದೇಹದಲ್ಲಿ ಇನ್ಸುಲಿನ್‌ ಉತ್ಪಾದನೆಯನ್ನು ತಡೆಯುತ್ತದೆ, ಇನ್ಸುಲಿನ್‌ ನಿರೋಧಕತೆಯನ್ನು ಹೆಚ್ಚಿಸುತ್ತದೆ.
* ಮಾಂಸಖಂಡಗಳು ಮತ್ತು ಅಡಿಪೋಸ್‌ ಅಂಗಾಂಶಗಳು ಗ್ಲುಕೋಸ್‌ ಪಡೆದುಕೊಳ್ಳುವುದು ಕಡಿಮೆ ಮಾಡುತ್ತದೆ. ದಾಳಿಗೊಳಗಾದ ಬಿಟಾ ಕೋಶಗಳು ಕಾರ್ಯನಿರ್ವಹಿಸುವುದನ್ನು ತಗ್ಗಿಸುತ್ತವೆ.
* ರೋಗದಿಂದ ಉಂಟಾಗುವ ಒತ್ತಡ, ಭಯಭೀತಿಗೊಳ್ಳುವುದರಿಂದ ಒತ್ತಡದ ಹಾರ್ಮೋನುಗಳು ಹೆಚ್ಚು ಪ್ರಚೋದನೆಗೆ ಒಳಗಾಗುತ್ತವೆ. ಇದರಿಂದ ರಕ್ತದಲ್ಲಿ ಸಕ್ಕರೆ ಅಂಶ ಅಧಿಕ ಪ್ರಮಾಣದಲ್ಲಿ ಹೆಚ್ಚಾಗುತ್ತದೆ.

ರೋಗಿಗಳು ಮಾಡಬೇಕಾಗಿದ್ದೇನು?
*ಕೋವಿಡ್‌ ರೋಗಿಗಳು ಮನೆಯಲ್ಲಿದ್ದಾಗ ಗ್ಲೂಕೊಮೀಟರ್‌ ಮೂಲಕ 2 ರಿಂದ 3 ಬಾರಿ ಪರೀಕ್ಷೆ ಮಾಡಿಕೊಳ್ಳಬೇಕು
*ರೋಗಿಗಳ ಆಹಾರ ಪದ್ಧತಿ ಮತ್ತು ಜೀವನ ಶೈಲಿ ಬದಲಿಸಬೇಕು
*ಯೋಗ, ವ್ಯಾಯಾಮ, ನಡಿಗೆ, ಪ್ರಾಣಾಯಾಮ ಮತ್ತು ಧ್ಯಾನ ಮಾಡಬೇಕು

***

ಕೋವಿಡ್‌ ರೋಗಿಗಳ ಸಾವಿಗೆ ನಿಖರ ಕಾರಣ ಪತ್ತೆ ಮಾಡುತ್ತಿಲ್ಲ. ಸಾಕಷ್ಟು ಪ್ರಕರಣಗಳಲ್ಲಿ ರಕ್ತದಲ್ಲಿ ಸಕ್ಕರೆ ಅಂಶ ಏರುಪೇರಾಗುತ್ತಿರುವುದೂ ಕಾರಣವಾಗಿದೆ.
-ಡಾ. ಎಸ್‌.ಆರ್‌.ಅರವಿಂದ್‌, ಅಧ್ಯಕ್ಷ, ಡಯಾಬಿಟೀಸ್‌ ಇಂಡಿಯಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT