ಶುಕ್ರವಾರ, ಆಗಸ್ಟ್ 19, 2022
22 °C
ರಾಜ್ಯದಲ್ಲಿ ಹಿಜಾಬ್‌ ವಿವಾದ ಹುಟ್ಟುಹಾಕಿದ್ದೇ ಬಿಜೆಪಿಯವರು ಎಂದು ವಾಗ್ದಾಳಿ

ಸ್ವಾಮೀಜಿಗಳು ತಲೆಗೆ ಬಟ್ಟೆ ಹಾಕಲ್ವಾ: ಸಿದ್ದರಾಮಯ್ಯ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಜೈನ ಹೆಣ್ಣುಮಕ್ಕಳು, ಕೆಲವೆಡೆ ಹಿಂದೂ ಮಹಿಳೆಯರು ತಲೆ ಮೇಲೆ ಸೆರಗು ಹಾಕಲ್ವಾ, ಸ್ವಾಮೀಜಿಗಳು ಕೂಡಾ ತಲೆ ಮೇಲೆ ಬಟ್ಟೆ ಹಾಕಲ್ವಾ, ಮುಸ್ಲಿಂ ಹೆಣ್ಣುಮಕ್ಕಳು ತಲೆ ಮೇಲೆ ಬಟ್ಟೆ ಹಾಕಿಕೊಂಡರೆ ನಿಮಗೇನು ತೊಂದರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಮುಸ್ಲಿಂ ಹೆಣ್ಣುಮಕ್ಕಳು ಶಾಲಾ ಸಮವಸ್ತ್ರದ ಬಣ್ಣದ ದುಪ್ಪಟ್ಟಾ ಧರಿಸಿ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಬೇಕೇಂದು ಕೇಳುತ್ತಿದ್ದಾರೆ. ಅದರಲ್ಲಿ ತಪ್ಪೇನಿದೆ?’ ಎಂದರು.

‘ರಾಜ್ಯದಲ್ಲಿ ಹಿಜಾಬ್‌ ವಿವಾದ ಹುಟ್ಟುಹಾಕಿದ್ದೇ ಬಿಜೆಪಿಯವರು. ಎರಡೂ ಧರ್ಮದವರನ್ನು ಕರೆದು ಚರ್ಚಿಸಿ ಗೊಂದಲಕ್ಕೆ ತೆರೆ ಎಳೆಯಬಹುದಿತ್ತು. ಉದ್ದೇಶಪೂರ್ವಕವಾಗಿ ದೊಡ್ಡದಾಗಿಸಿದ್ದಾರೆ’ ಎಂದು ದೂರಿದರು.

ಅಮಾನವೀಯ: ‘ಜಾತ್ರೆಗಳಲ್ಲಿ ಯಾರಿಗೆ ಬೇಕಾದರೂ ವ್ಯಾಪಾರ ಮಾಡಲು ಸಂವಿಧಾನ ಅವಕಾಶ ನೀಡಿದೆ. ಮುಸ್ಲಿಮರ ವ್ಯಾಪಾರಕ್ಕೆ ನಿರ್ಬಂಧ ಹೇರುತ್ತಿರುವುದು ಅಮಾನವೀಯ. ಮುಸ್ಲಿಂ ವರ್ತಕರನ್ನು ಬಹಿಷ್ಕರಿಸುವಂತೆ ಬಿಜೆಪಿಯವರೇ ವಿವಿಧ ಸಂಘಟನೆಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಶಸ್ತ್ರಕ್ರಿಯೆ ವೇಳೆ ರಕ್ತದ ಅಗತ್ಯ ಬಿದ್ದಾಗ ಜೀವ ಉಳಿಸಿಕೊಳ್ಳಲು ಯಾವುದೇ ಜಾತಿಯವನ ರಕ್ತವನ್ನಾದರೂ ದೇಹಕ್ಕೆ ಸೇರಿಸಿಕೊಳ್ಳುತ್ತೇವೆ. ನಮ್ಮ ಜಾತಿಯವನ ರಕ್ತವೇ ಬೇಕು ಎಂದು ಕೇಳುತ್ತೇವಾ? ಆದರೆ ಗುಣಮುಖವಾದ ಬಳಿಕ ನೀನು ಹಿಂದೂ, ಮುಸ್ಲಿಂ, ಸಿಖ್ ಎಂದು ಹೇಳುವುದು ಅಮಾನವೀಯ. ನಮಗೆ ಬೇಕಿರುವುದು ಮನುಷ್ವತ್ವ’ ಎಂದರು.

ಮುಂದಿನ ಚುನಾವಣೆಯೇ ಕೊನೆ: ‘ಮುಂದಿನ ಚುನಾವಣೆಯೇ ನನ್ನ ಕೊನೆಯ ಚುನಾವಣೆ.‌ ಮತ್ತೆ ಚುನಾವಣಾ ರಾಜಕಾರಣ ಮಾಡುವುದಿಲ್ಲ. ಆದರೆ, ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ’ ಎಂದು ಸಿದ್ದರಾಮಯ್ಯ ಅವರು ಹೇಳಿದರು.

ಕೊನೆಯ ಚುನಾವಣೆಯಲ್ಲಿ ಎಲ್ಲಿಂದ ಸ್ಪರ್ಧಿಸುತ್ತೀರಿ ಎಂಬ ಪ್ರಶ್ನೆಗೆ, ‘ವರುಣಾ, ಹುಣಸೂರು, ಚಾಮರಾಜಪೇಟೆ, ಬಾದಾಮಿ, ಕೋಲಾರ, ಹೆಬ್ಬಾಳ, ಕೊಪ್ಪಳ, ಚಾಮುಂಡೇಶ್ವರಿ... ಹೀಗೆ ವಿವಿಧೆಡೆ ಸ್ಪರ್ಧಿಸುವಂತೆ ಜನ ಆಹ್ವಾನಿಸುತ್ತಿದ್ದಾರೆ. ಎಲ್ಲಿಂದ ಸ್ಪರ್ಧಿಸಬೇಕೆಂದು ತೀರ್ಮಾನಿಸಿಲ್ಲ. ಚುನಾವಣೆಗೆ ಇನ್ನೂ ಒಂದು ವರ್ಷ ಇದ್ದು, ಮುಂದೆ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ’ ಎಂದು ಉತ್ತರಿಸಿದರು.

‘ಸಿದ್ದರಾಮಯ್ಯ ಹೇಳಿಕೆಯಿಂದ ಕಾಂಗ್ರೆಸ್‌ ಘನತೆಗೆ ಧಕ್ಕೆ’
ದಾವಣಗೆರೆ:
‘ಹಿಜಾಬ್‌ಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರು ಆಡಿರುವ ಮಾತು ಕಾಂಗ್ರೆಸ್‌ ಪಕ್ಷದ ಘನತೆಗೆ ಧಕ್ಕೆ ತರುವಂತಿದೆ. ಈ ಹಿಂದೆ ವೀರಶೈವ ಲಿಂಗಾಯತ ಧರ್ಮವನ್ನು ಇಬ್ಭಾಗ ಮಾಡಲು ಪ್ರಯತ್ನಿಸಿದಾಗ ಕಾಂಗ್ರೆಸ್‌ ಬಹಳ ದೊಡ್ಡ ಪೆಟ್ಟನ್ನು ತಿಂದಿತ್ತು. ಮತ್ತೆ ಇಂತಹ ವಿವಾದಗಳ ಮೂಲಕ ಜನರ ಭಾವನೆಗಳನ್ನು ಕೆಡಿಸುವುದು ಒಳ್ಳೆಯದಲ್ಲ’ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ.

ಜಿಲ್ಲೆಯ ಹೂವಿನಮಡು ಗ್ರಾಮದಲ್ಲಿ ಶುಕ್ರವಾರ ಮಾತನಾಡಿದ ಸ್ವಾಮೀಜಿ, ‘ಒಂದು ವರ್ಷದಲ್ಲಿ ಮತ್ತೆ ಚುನಾವಣೆ ಬರಲಿದೆ. ಹೀಗಾಗಿ ತಮ್ಮ ಮಾತಿನ ಬಗ್ಗೆ ಸಿದ್ದರಾಮಯ್ಯ ಆತ್ಮಾವಲೋಕನ ಮಾಡಿಕೊಂಡು ಮತ್ತೆ ಇಂಥ ತಪ್ಪು ಆಗದಂತೆ ಎಚ್ಚರ ವಹಿಸಲಿ’ ಎಂದು ಎಚ್ಚರಿಸಿದರು.

‘ರಾಜಕೀಯ ಲಾಭಕ್ಕಾಗಿ ಹಾಗೂ ಜನರನ್ನು ಓಲೈಸುವುದಕ್ಕಾಗಿ ಇಂತಹ ಕ್ಷುಲ್ಲಕ ಹೇಳಿಕೆಗಳನ್ನು ಕೊಡುವುದರಿಂದ ಸಮಾಜದಲ್ಲಿ ಜಾತಿ–ಜಾತಿಗಳ ಮಧ್ಯೆ ಸಂಘರ್ಷ ನಡೆಯಲಿಕ್ಕೆ ಕಾರಣವಾಗುತ್ತಿದೆ. ಇದಕ್ಕೆ ಖಂಡಿತವಾಗಿಯೂ ಅವಕಾಶ ಕೊಡಬಾರದು’ ಎಂದು ಹೇಳಿದರು. 

‘ಅವರವರ ಧರ್ಮದ ಆಚರಣೆ ಅವರಿಗೆ ಬಿಟ್ಟಿದ್ದು. ಮನೆಯಲ್ಲಿ ಧರ್ಮದ ಆಚರಣೆ ಮಾಡುವುದಕ್ಕೆ ಯಾರದ್ದೂ ಅಭ್ಯಂತರವಿಲ್ಲ. ಆದರೆ, ಸಾರ್ವಜನಿಕ ಬದುಕಿನಲ್ಲಿ, ಶೈಕ್ಷಣಿಕ ವ್ಯವಸ್ಥೆಯಲ್ಲಿ ನಿಗದಿಪಡಿಸಿದ ಸಮವಸ್ತ್ರ ಧರಿಸಿ ಬರಬೇಕು ಎಂದು ಸರ್ಕಾರ, ನ್ಯಾಯಾಲಯದ ಆದೇಶ ಇದ್ದಾಗಲೂ ಕೆಲವರು ಪ್ರಚೋದನಕಾರಿ ಹೇಳಿಕೆ ಕೊಡುತ್ತಿರುವುದು ಒಳ್ಳೆಯದಲ್ಲ’ ಎಂದು ಅಭಿಪ್ರಾಯಪಟ್ಟರು.

‘ರುಮಾಲು ಗೊಡವೆ ನಿಮಗೇಕೆ’
ಕೊಪ್ಪಳ:
‘ಈ ರೀತಿಯ ವ್ಯಂಗ್ಯದ ಮಾತುಗಳು ಸಿದ್ದರಾಮಯ್ಯ ಅವರಿಗೆ ಶೋಭೆ ತರುವುದಿಲ್ಲ’ ಎಂದು ಕನಕಗಿರಿಯ ಸುವರ್ಣಗಿರಿ ವಿರಕ್ತಮಠದ ಡಾ.ಚನ್ನಮಲ್ಲ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

ಶುಕ್ರವಾರ ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಹಿಜಾಬ್ ಸಮರ್ಥಿಸಿಕೊಳ್ಳುವ ಭರದಲ್ಲಿ ಆಡಬಾರದ ಮಾತು ಆಡುತ್ತಾರೆ. ನಮ್ಮ ತಲೆಯ ಮೇಲಿನ ಬಟ್ಟೆ ತೆಗೆಯಲು ನಾವೇನು ಶಾಲೆಗೆ ಹೊರಟು ನಿಂತಿಲ್ಲ. ಶಿಸ್ತು ಪಾಲಿಸಲು ಸಮವಸ್ತ್ರ ಕಡ್ಡಾಯ ಮಾಡಿದೆ. ಅದನ್ನು ಪಾಲಿಸಬೇಕು. ನ್ಯಾಯಾಂಗ, ಸಂವಿಧಾನಕ್ಕೆ ಗೌರವ ಕೊಡಬೇಕು‘ ಎಂದರು.

ಹೆಬ್ಬಾಳದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಮೈನಳ್ಳಿಯ ಶಿವಸಿದ್ಧೇಶ್ವರ ಶ್ರೀ, ಬಸಲಿಂಗೇಶ್ವರ ಸ್ವಾಮೀಜಿ, ಚಳಿಗೇರಿಯ ವೀರ ಸಂಗಮೇಶ್ವರ ಶಿವಾಚಾರ್ಯರು ಸಿದ್ದರಾಮಯ್ಯನವರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದರು.

ಕಿಷ್ಕಿಂದ ಸ್ವಾಮೀಜಿ ಆಕ್ರೋಶ
ಕುಂದಾಪುರ:
ಸ್ವಾಮೀಜಿಗಳ ಶಿರವಸ್ತ್ರದ ಬಗ್ಗೆ ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯ ಅವರು ನೀಡುರುವ ಹೇಳಿಕೆಗೆ ಕಿಷ್ಕಿಂದದ ಗೋವಿಂದ ಸರಸ್ವತಿ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೊಲ್ಲೂರಿನಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರಿಗೆ ಹಿಜಾಬ್ ಹಾಗೂ ಸನ್ಯಾಸಿಗಳ ಶಿರವಸ್ತ್ರದ ನಡುವಿನ ವ್ಯತ್ಯಾಸ ಗೊತ್ತಿಲ್ಲವೇ? ತಲೆಯ ಮೇಲಿನ ಬಟ್ಟೆ ತೆಗೆಯಲು ಸನ್ಯಾಸಿಗಳು ಕಾಲೇಜಿಗೆ ಹೋಗುವವರೇ’ ಎಂದು ಪ್ರಶ್ನಿಸಿದ್ದಾರೆ.

5,000 ವರ್ಷಗಳಿಗೂ ಕಡಿಮೆ ಇತಿಹಾಸವಿರುವ ಇಸ್ಲಾಂ ಮತದವರು ಮಾಡುವ ನಾಟಕಕ್ಕೆ ಇವರೆಲ್ಲ ಸೂತ್ರಧಾರರಾಗುತ್ತಿದ್ದಾರೆ ಎಂದೂ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು