ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಜಾಬ್‌‍ | ರಾಜಕೀಯ ‘ಅಮಲು’: ಕಾಂಗ್ರೆಸ್‌–ಬಿಜೆಪಿ ಮಧ್ಯೆ ವಾಕ್ಸಮರ

Last Updated 4 ಫೆಬ್ರುವರಿ 2022, 20:03 IST
ಅಕ್ಷರ ಗಾತ್ರ

ಬೆಂಗಳೂರು: ಕರಾವಳಿ ಜಿಲ್ಲೆಗಳಿಗೆ ಸೀಮಿತವಾಗಿದ್ದ ಹಿಜಾಬ್‌ ಮತ್ತು ಕೇಸರಿ ಶಾಲು ತಿಕ್ಕಾಟ ಈಗ ಇತರ ಜಿಲ್ಲೆಗಳಿಗೂ ವ್ಯಾಪಿಸಿದ್ದು, ಈ ವಿಷಯ ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ವಾಗ್ವಾದಕ್ಕೆ ತಿರುಗಿದ್ದು ರಾಜಕೀಯ ಬಣ್ಣವನ್ನೂ ಪಡೆದುಕೊಂಡಿದೆ.

ಹಿಜಾಬ್‌ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿದ ಪ್ರಾಂಶುಪಾಲರ ವರ್ತನೆ ಅಮಾನವೀಯ ಎಂದು ಪ್ರತಿಪಾದಿಸಿದ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಸರ್ಕಾರವನ್ನು ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿ ಶಾಸಕರು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

ಈ ಬೆಳವಣಿಗೆಯ ಮಧ್ಯೆಯೇ ಉಡುಪಿ, ಕುಂದಾಪುರ ತಾಲ್ಲೂಕಿಗೆ ಸೀಮಿತವಾಗಿದ್ದ ಕೇಸರಿ ಶಾಲು ರಾಜಕೀಯ ಬೆಳಗಾವಿಗೂ ಪಸರಿಸಿದೆ. ಈ ವಿವಾದ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿರುವ ಬೆನ್ನಲ್ಲೇ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅಧಿಕಾರಿಗಳ ಜತೆ ಶುಕ್ರವಾರ ಮಾತುಕತೆ ನಡೆಸಿದರು. ಆ ಬಳಿಕ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನಾ ಎನ್.ಕೆ. ಷಫಿ ಸಾ–ಆದಿ ಅವರ ಜತೆಗೂ ಪ್ರತ್ಯೇಕ ಸಭೆ ನಡೆಸಿದರು.

‘ಹೈಕೋರ್ಟ್‌ನಿಂದ ಸ್ಪಷ್ಟ ನಿರ್ದೇಶನ ಬರುವವರೆಗೆ ಹಾಲಿ ನಿಯಮವನ್ನು ಎಲ್ಲರೂ ಪಾಲಿಸಬೇಕು. ನ್ಯಾಯಾಲಯದ ತೀರ್ಪಿನ ಬಳಿಕ ಹೊಸ ನಿಯಮ ರೂಪಿಸಲಾಗುವುದು’ ಎಂದು ಸಚಿವ ನಾಗೇಶ್ ತಿಳಿಸಿದರು.

ಈ ಕುರಿತು ಪ್ರತಿಕ್ರಿಯಿಸಿರುವ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, 'ಶಾಲೆ, ಕಾಲೇಜುಗಳಲ್ಲಿ ಹಿಜಾಬ್ ಧರಿಸಬಾರದು ಎಂಬ ನಿಯಮವೇ ಇಲ್ಲ. ಹಿಜಾಬ್ ಧರಿಸಿ ಬರುವವರಿಗೆ ತರಗತಿ ಕೊಠಡಿ ಪ್ರವೇಶಿಸದಂತೆ ತಡೆಯುತ್ತಿರುವುದು ಮೂಲಭೂತ ಹಕ್ಕುಗಳ ಉಲ್ಲಂಘನೆ’ ಎಂದು ಕಿಡಿಕಾರಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಎಚ್ಚರಿಕೆಯ ಹೇಳಿಕೆ ನೀಡಿದ್ದು, ‘ಪಕ್ಷದ ಅಧ್ಯಕ್ಷನಾಗಿ ಮಾತನಾಡುವುದು ಸರಿಯಲ್ಲ. ಎಲ್ಲರಿಗೂ ಅವರದೇ ಆದ ಜೀವನ ಪದ್ಧತಿ, ಸಂಸ್ಕೃತಿ ಇದೆ. ಈ ಬಗ್ಗೆ ಬಹಿರಂಗ ಚರ್ಚೆ ಮಾಡಬೇಕಿಲ್ಲ. ಮಕ್ಕಳು, ಧಾರ್ಮಿಕ ಆಚರಣೆ ವಿಚಾರವನ್ನು ಒಂದು ಚೌಕಟ್ಟಿನಲ್ಲಿ ಚರ್ಚೆ ಮಾಡಬೇಕಿದೆ’ ಎಂದಿದ್ದಾರೆ.

ಈ ಮಧ್ಯೆ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಅವರು ‘‍ಈ ವಿಷಯ ಹೈಕೋರ್ಟ್‌ನಲ್ಲಿ ಇರುವುದರಿಂದ ಅಲ್ಲಿಂದ ನಿರ್ದೇಶನ ಬರುವವರೆಗೆ ಯಥಾಸ್ಥಿತಿ ಕಾಯ್ದುಕೊಂಡು ಹೋಗಬೇಕು’ ಎಂದು ಶಿಕ್ಷಣ ಇಲಾಖೆಗೆ ಸೂಚನೆ ನೀಡಿದ್ದಾರೆ.ವಕ್ಫ್‌ ಮಂಡಳಿ ಅಧ್ಯಕ್ಷಷಫಿ ಅವರು, ‘ಹಿಜಾಬ್‌ ಧರಿಸುವುದಕ್ಕೆ ವಿರೋಧ ವ್ಯಕ್ತವಾಗುತ್ತಿರುವುದರಿಂದ ಸಮುದಾಯದವರು ಆತಂಕಕ್ಕೆ ಒಳಗಾಗಿದ್ದಾರೆ. ಸಚಿವರು ಮಧ್ಯಪ್ರವೇಶಿಸಬೇಕು’ ಎಂದು ಮನವಿ ಮಾಡಿದ್ದಾರೆ.

‘ಹಿಜಾಬ್–ಶಾಲು ಧರಿಸಿದವರಿಗೆ ಅವಕಾಶ ಇಲ್ಲ’

‘ಹಿಜಾಬ್ ಅಥವಾ ಕೇಸರಿ ಶಾಲು ಧರಿಸಿಕೊಂಡು ತರಗತಿಗೆ ಬರಲು ಅವಕಾಶವಿಲ್ಲ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ಈಗ ಇರುವ ಶಾಲಾ ಸಮವಸ್ತ್ರ ನಿಯಮ ಕರ್ನಾಟಕ ಶಿಕ್ಷಣ ಕಾಯ್ದೆಯ ಅನ್ವಯ 2013 ಮತ್ತು 2018 ಲ್ಲೇ ರೂಪಿಸಿದ್ದು, ಅದರಲ್ಲಿರುವ ಅಂಶಗಳನ್ನೇ ಪಾಲಿಸಲಾಗುತ್ತಿದೆ. ಅದನ್ನು ಆಧರಿಸಿ ಸುತ್ತೋಲೆ ಹೊರಡಿಸಲಾಗಿದೆ’ ಎಂದರು.

‘ಇವತ್ತಿನ ಸಭೆಯಲ್ಲಿ ಅಡ್ವೊಕೇಟ್‌ ಜನರಲ್, ಕಾನೂನು ಇಲಾಖೆ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಬಗ್ಗೆ ಮುಖ್ಯಮಂತ್ರಿಯವರಿಗೆ ಮಾಹಿತಿ ನೀಡಿದ್ದಾರೆ. ಸರ್ಕಾರದ ನಿಲುವನ್ನು ಹೈಕೋರ್ಟ್‌ನಲ್ಲಿ ಮಂಡಿಸಲಾಗುವುದು. ನ್ಯಾಯಾಲಯದ ತೀರ್ಪು ಬಂದ ನಂತರ ಹೊಸ ನಿಯಮ ರೂಪಿಸಲಾಗುವುದು’ ಎಂದು ಹೇಳಿದರು.

‘ಶಿರವಸ್ತ್ರದ ವಿಚಾರವಾಗಿ ಕೇರಳ ಮತ್ತು ಮುಂಬೈ ಹೈಕೋರ್ಟ್‌ಗಳೂ ಈ ಹಿಂದೆಯೇ ತೀರ್ಪು ನೀಡಿವೆ. ಆ ತೀರ್ಪುಗಳ ಪ್ರಕಾರ ಶಿಕ್ಷಣ ಸಂಸ್ಥೆಗಳಲ್ಲಿ ಶಿರವಸ್ತ್ರ ಧರಿಸುವುದಕ್ಕೆ ಅವಕಾಶವಿಲ್ಲ. ಸಂವಿಧಾನ ಗೊತ್ತಿಲ್ಲವೇ ಎಂದು ನಮ್ಮನ್ನು ಪ್ರಶ್ನಿಸುವ ಸಿದ್ದರಾಮಯ್ಯ ಅವರಿಗೆ ಈ ವಿಚಾರ ಗೊತ್ತೆ? ಅವರ ಪ್ರಕಾರ ಹೈಕೋರ್ಟ್‌ಗಳಿಗೇ ಸಂವಿಧಾನ ಗೊತ್ತಿಲ್ಲ. ನ್ಯಾಯಾಲಯಗಳಿಗಿಂತ ಇವರೇ ಅತೀತರು ಎಂದಾಯಿತು’ ಎಂದು ನಾಗೇಶ್‌ ಲೇವಡಿ ಮಾಡಿದರು.

‘ರಾಜ್ಯ ಸರ್ಕಾರ 2013 ಮತ್ತು 2018 ರಲ್ಲಿ ರೂಪಿಸಿದ ನಿಯಮದ ಪ್ರಕಾರ ಶಾಲಾ–ಕಾಲೇಜು ಅಭಿವೃದ್ಧಿ ಸಮಿತಿಗಳು ಸಮವಸ್ತ್ರವನ್ನು ಜಾರಿ ಮಾಡಿವೆ. ಉಡುಪಿಯಲ್ಲಿ ಜನವರಿವರೆಗೆ ಯಾವುದೇ ಸಮಸ್ಯೆ ಇರಲಿಲ್ಲ. ಆ ಬಳಿಕ ಇದ್ದಕ್ಕಿದ್ದಂತೆ ಈ ಸಮಸ್ಯೆ ಸೃಷ್ಟಿಯಾಗಿದೆ. ಇದರ ಹಿಂದೆ ಯಾರದ್ದೋ ಕುಮ್ಮಕ್ಕಿದೆ. ವಿದ್ಯಾರ್ಥಿಗಳು ಯಾರದ್ದೋ ಪ್ರೇರಣೆಗೆ ಒಳಗಾಗಿ ಬಲಿಪಶುಗಳಾಗಬಾರದು. ಮಕ್ಕಳು ಶಾಲೆಗೆ ಬರಬೇಕು. ಸಾಮರಸ್ಯದಿಂದ ಶಿಕ್ಷಣ ಪಡೆಯಬೇಕು’ ಎಂದು ನಾಗೇಶ್‌ ಹೇಳಿದರು.

ಉಡುಪಿ ಎಸ್‌ಡಿಎಂಸಿ ಅಧ್ಯಕ್ಷರಾಗಿರುವ ಶಾಸಕ ರಘುಪತಿ ಭಟ್‌ ಅವರು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗಿಂತ ಉತ್ತಮವಾಗಿ ಅಭಿವೃದ್ಧಿ ಪಡಿಸಿದ್ದಾರೆ. ಅವರನ್ನು ಯಾರು ಎಂದು ಸಿದ್ದರಾಮಯ್ಯ ಪ್ರಶ್ನಿಸುವುದು ಅವರಿಗೆ ಶೋಭೆ ತರುವುದಿಲ್ಲ.

‘ಶಾಲೆಯ ಆರಂಭದಲ್ಲಿ ಸಮವಸ್ತ್ರವೂ ಸೇರಿದಂತೆ ಶಾಲೆಯ ನಿಯಮಾವಳಿಗಳ ಬಗ್ಗೆ ಲಿಖಿತ ಪತ್ರ ನೀಡಲಾಗಿತ್ತು. ಅದನ್ನು ಓದಿ, ಒಪ್ಪಿಕೊಂಡು ಸಹಿಯನ್ನು ಮಾಡಿದ್ದಾರೆ. ಈಗ ಬೇರೆಯೇ ವರಸೆ ಆರಂಭವಾಗಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT