ಸೋಮವಾರ, ಜುಲೈ 4, 2022
24 °C

ಕನ್ನಡ ಪ್ರಾದೇಶಿಕ ಭಾಷೆ, ಹಿಂದಿ ರಾಷ್ಟ್ರ ಭಾಷೆ: ಸಚಿವ ಮುರುಗೇಶ್ ನಿರಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಕನ್ನಡ ಪ್ರಾದೇಶಿಕ ಭಾಷೆ, ಹಿಂದಿ ರಾಷ್ಟ್ರೀಯ ಭಾಷೆ. ಬೇರೆ ಭಾಷೆ ಕಲಿಯುವುದರಲ್ಲಿ ತಪ್ಪೇನಿಲ್ಲ ಎಂದು ಸಚಿವ‌ ಮುರುಗೇಶ್ ನಿರಾಣಿ ತಿಳಿಸಿದರು.

ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಮಾಡಬೇಕು ಎಂಬುದು ಮೊದಲಿನಿಂದಲೂ ಇದೆ.‌ ಇದರಲ್ಲಿ ತಪ್ಪಿಲ್ಲ. ಆದರೆ‌ ಮೊದಲ ಆದ್ಯತೆ ಕನ್ನಡಕ್ಕೆ‌ ನೀಡಬೇಕು. ನಂತರ ಹಿಂದಿ, ಇಂಗ್ಲಿಷ್ ಕಲಿಯಬೇಕು ಎಂದು ಇಲ್ಲಿ ಗುರುವಾರ ಸುದ್ದಿಗಾರರಿಗೆ‌ ತಿಳಿಸಿದರು.

ಇತ್ತೀಚೆಗೆ ಕಿಚ್ಚ ಸುದೀಪ್ ಅವರು ಕಾರ್ಯಕ್ರಮವೊಂದರಲ್ಲಿ 'ಹಿಂದಿ ರಾಷ್ಟ್ರಭಾಷೆ ಅಲ್ಲ' ಎಂದಿದ್ದರು. ಅದಕ್ಕೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದ ಅಜಯ್ ದೇವಗನ್, 'ಹಿಂದಿ ರಾಷ್ಟ್ರ ಭಾಷೆ' ಎಂದು ಪ್ರತಿಪಾದಿಸಿದ್ದರು. 'ರಾಷ್ಟ್ರಭಾಷೆ' ವಿಚಾರದ ಬಗ್ಗೆ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. 

ಕಿಚ್ಚ ಸುದೀಪ್ ಮತ್ತು ಅಜಯ್‌ ದೇವಗನ್‌ ಅವರ ಮಾತು–ತಿರುಗೇಟಿನ ನಡುವೆ 'ಹಿಂದಿ ರಾಷ್ಟ್ರ ಭಾಷೆ'(?) ಎಂಬುದರ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. 

ನಟ ಸುದೀಪ್‌ ಹೇಳಿದ್ದೇನು?

ಕೆಲ ದಿನಗಳ ಹಿಂದೆ ನಡೆದ ರಾಮ್‌ ಗೋಪಾಲ್‌ ವರ್ಮಾ ನಿರ್ದೇಶನದ, ನಟ ಉಪೇಂದ್ರ ಅವರ ನೂತನ ಪ್ಯಾನ್‌ ಇಂಡಿಯಾ ಚಿತ್ರ 'ಐ ಆ್ಯಮ್‌ ಆರ್‌' ಶೀರ್ಷಿಕೆ ಅನಾವರಣ ಸಂದರ್ಭದಲ್ಲಿ ಸುದೀಪ್‌ ಮಾತನಾಡಿ, ‘ಪ್ರಸ್ತುತ ಹಿಂದಿ ಎನ್ನುವುದು ರಾಷ್ಟ್ರೀಯ ಭಾಷೆಯಾಗಿಲ್ಲ. ಬಾಲಿವುಡ್‌ನವರು ಪ್ಯಾನ್‌ ಇಂಡಿಯಾ ಸಿನಿಮಾಗಳನ್ನು ಮಾಡುತ್ತಿದ್ದು, ಅಲ್ಲಿಂದ ತೆಲುಗು ಮತ್ತು ತಮಿಳು ಭಾಷೆಗೆ ಡಬ್‌ ಮಾಡಿ, ಒದ್ದಾಡುತ್ತಿದ್ದಾರೆ. ದಕ್ಷಿಣದ ಸಿನಿಮಾಗಳು ಡಬ್‌ ಆಗಿ ಅಲ್ಲಿ ಓಡುತ್ತಿವೆ. ನಾವು ಪ್ಯಾನ್‌ ಇಂಡಿಯಾ ಸಿನಿಮಾ ಮಾಡುತ್ತಿಲ್ಲ. ಅದು ಮುಂಬೈನಿಂದ ಬರುತ್ತಿದೆ. ನಾವು ಎಲ್ಲೆಡೆಯೂ ತಲುಪುವ ಸಾಮರ್ಥ್ಯವಿರುವ ಸಿನಿಮಾ ಮಾಡುತ್ತಿದ್ದೇವೆ. ಇವತ್ತು ಚಿತ್ರರಂಗವು ಮುನ್ನುಗುತ್ತಿರುವುದನ್ನು ನೋಡುತ್ತಿರುವಾಗ, ಭಾಷೆ ಎನ್ನುವುದು ಕೇವಲ ತಡೆಯಾಗಿತ್ತಷ್ಟೇ. ಇವತ್ತು ಇದನ್ನು ಒಡೆದು ಮುನ್ನುಗ್ಗಿದೆ’ ಎಂದಿದ್ದರು. ಇತ್ತೀಚೆಗೆ ಸಂದರ್ಶನವೊಂದರಲ್ಲೂ ಇದನ್ನು ಮರು ಉಲ್ಲೇಖಿಸಿದ್ದರು.

ಆ ಹೇಳಿಕೆ ಸಂಬಂಧ ಬುಧವಾರ ಅಜಯ್‌ ದೇವಗನ್‌ ಟ್ವೀಟ್‌ ಮಾಡಿ, 'ನಿಮ್ಮ ಪ್ರಕಾರ, ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲವಾದರೆ, ನೀವೇಕೆ ನಿಮ್ಮ ಪ್ರಾದೇಶಿಕ ಭಾಷೆಯ ಸಿನಿಮಾಗಳನ್ನು ಹಿಂದಿಯಲ್ಲಿ ಡಬ್‌ ಮಾಡಿ ಬಿಡುಗಡೆ ಮಾಡುತ್ತಿರುವಿರಿ? ಹಿಂದಿ ಭಾಷೆಯು ಈ ಹಿಂದೆ, ಈಗ ಮತ್ತು ಯಾವಾಗಲೂ ನಮ್ಮ ಮಾತೃ ಭಾಷೆ ಮತ್ತು ರಾಷ್ಟ್ರ ಭಾಷೆಯಾಗಿದೆ. ಜನ ಗಣ ಮನ' ಎಂದಿದ್ದರು.

ಇವನ್ನೂ ಓದಿ... 

ದೇಶಕ್ಕೆ ಇರುವುದೊಂದೇ ಭಾಷೆ, ಅದು ಮನರಂಜನೆ: ಅಜಯ್‌ಗೆ ಸೋನು ಸೂದ್‌ ತಿರುಗೇಟು

ಹಿಂದಿ ರಾಷ್ಟ್ರ ಭಾಷೆ ಅಲ್ಲ: ಕಿಚ್ಚ ಸುದೀಪ್ ಹೇಳಿಕೆಗೆ ಅಜಯ್ ದೇವಗನ್ ಕಿಡಿ

 

ಹಿಂದಿ ರಾಷ್ಟ್ರ ಭಾಷೆ ಎಂದ ಅಜಯ್ ದೇವಗನ್ ಹೇಳಿಕೆಗೆ ನಟಿ ರಮ್ಯಾ ಕಿಡಿ

ನೀಲಿ ಬಿಕಿನಿಯಲ್ಲಿ ಕತ್ರಿನಾ: ನೆಟ್ಟಿಗರ ಎದೆಬಡಿತ ಹೆಚ್ಚಿಸಿದ ಬಾಲಿವುಡ್ ಬೆಡಗಿ 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು