ಬುಧವಾರ, ಮೇ 25, 2022
28 °C
₹4,600 ಕೋಟಿ ವೆಚ್ಚದ ಡಿಪಿಆರ್‌ ಪ್ರಕಟಿಸಿದ ತಮಿಳುನಾಡು ಸಿಎಂ

ಹೊಗೇನಕಲ್‌ ಯೋಜನೆ 2ನೇ ಹಂತ: ತಮಿಳುನಾಡು ಸಿಎಂ ಡಿಪಿಆರ್‌ಗೆ ಕರ್ನಾಟಕ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೊಗೇನಕಲ್‌ ಯೋಜನೆಯ 2ನೇ ಹಂತವನ್ನು ಕೈಗೆತ್ತಿಕೊಳ್ಳಲು ತಮಿಳುನಾಡು ಮುಖ್ಯಮಂತ್ರಿ ₹4,600 ಕೋಟಿ ವೆಚ್ಚದಲ್ಲಿ ಡಿಪಿಆರ್‌ ಸಿದ್ಧಪಡಿಸಿರುವುದನ್ನು ಕರ್ನಾಟಕ ಸರ್ಕಾರ ತೀವ್ರವಾಗಿ ವಿರೋಧಿಸಿದ್ದು, ಕಾನೂನು ರೀತಿಯಲ್ಲಿ ಇದಕ್ಕೆ ಆಕ್ಷೇಪ ಸಲ್ಲಿಸಲು ತೀರ್ಮಾನಿಸಿದೆ.

ಈ ಸಂಬಂಧ ತುರ್ತು ಸುದ್ದಿಗೋಷ್ಠಿ ನಡೆಸಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು, ತಮಿಳುನಾಡು ಮುಖ್ಯಮಂತ್ರಿ ಡಿಪಿಆರ್‌ ಸಿದ್ಧಪಡಿಸಿರುವ ವಿಚಾರ ಪ್ರತಿಕಾ ವರದಿಗಳ ಮೂಲಕ ಗಮನಕ್ಕೆ ಬಂದಿದೆ ಎಂದು ಹೇಳಿದರು.

ಈ ಯೋಜನೆಯ ವಿವರಗಳನ್ನು ನ್ಯಾಯಮಂಡಳಿ ಅಥವಾ ಸರ್ವೋಚ್ಛ ನ್ಯಾಯಾಲಯದ ಮುಂದೆ ಪ್ರಸ್ತುತಪಡಿಸದೇ ಇರುವ ತಮಿಳುನಾಡಿನ ಯಾವುದೇ ಯೋಜನೆಯನ್ನು ಕರ್ನಾಟಕ ಸರ್ಕಾರ ವಿರೋಧಿಸುತ್ತದೆ ಎಂದು ತಿಳಿಸಿದ್ದಾರೆ.

ಕಾವೇರಿ ಕಣಿವೆಯಲ್ಲಿ ನ್ಯಾಯಮಂಡಳಿ ಮತ್ತು ಸರ್ವೋಚ್ಛ ನ್ಯಾಯಾಲಯದ ತೀರ್ಪುಗಳಲ್ಲಿನ ನೀರಿನ ಹಂಚಿಕೆಗಳ ಅನ್ವಯವಾಗಿ ತಮಿಳುನಾಡು ರಾಜ್ಯವು ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದಿದ್ದಾರೆ.

ಈ ಯೋಜನೆಯನ್ನು ಕರ್ನಾಟಕ ಸರ್ಕಾರ ಎಲ್ಲಾ ಕಾನೂನಾತ್ಮಕ ಕ್ರಮಗಳ ಮೂಲಕ ಆಕ್ಷೇಪಿಸಲಿದೆ. ತಮಿಳುನಾಡು ಪ್ರಕಟಿಸಿರುವ ಯೋಜನೆ ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳ ಭೌಗೋಳಿಕ ವ್ಯಾಪ್ತಿಯಲ್ಲಿ ಇರುವುದರಿಂದ ಯಾವುದೇ ಯೋಜನೆಯನ್ನು ಕೈಗೆತ್ತಿಕೊಳ್ಳುವ ಮುನ್ನ ವಿವಿಧ ಆಯಾಮಗಳಲ್ಲಿ ಮತ್ತು ಕಾನೂನಾತ್ಮಕ ಪರಿಶೀಲನೆಗೆ ಒಳಪಡಬೇಕಾಗುತ್ತದೆ ಎಂದು ಕಾರಜೋಳ ಹೇಳಿದ್ದಾರೆ.

ತಮಿಳುನಾಡು ಏಕಪಕ್ಷೀಯವಾಗಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಹೊಗೇನಕಲ್‌ ಪ್ರದೇಶವು ಕರ್ನಾಟಕ ಮತ್ತು ತಮಿಳುನಾಡಿನ ಜಂಟಿ ಗಡಿ ಪ್ರದೇಶದಲ್ಲಿ 64 ಕಿ.ಮೀ ಉದ್ದದ ಭೂಪ್ರದೇಶದ ವ್ಯಾಪ್ತಿಯನ್ನು ಹೊಂದಿದೆ. ಕಾವೇರಿ ನ್ಯಾಯಮಂಡಳಿ ಐತೀರ್ಪಿನ ಕಲಂ 13 ರ ಅನ್ವಯ ಈ ಯೋಜನೆಯನ್ನು ರಾಷ್ಟ್ರೀಯ ಜಲ ವಿದ್ಯುತ್‌ (ಎನ್‌ಎಚ್‌ಪಿಸಿ) ಮೂಲಕ ಕೈಗೆತ್ತಿಕೊಳ್ಳಬೇಕಾಗುವುದು ಎಂದಿದ್ದಾರೆ.

ಕರ್ನಾಟಕ ಮತ್ತು ತಮಿಳುನಾಡಿನ ಹೊಗೇನಕಲ್‌ ಜಂಟಿ ಗಡಿ ರೇಖೆಯನ್ನು ಸರ್ವೇ ಆಫ್‌ ಇಂಡಿಯಾ ಮೂಲಕ ಇನ್ನೂ ಅಂತಿಮಗೊಳಿಸಿಲ್ಲ ಎಂದು ಕಾರಜೋಳ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು