ಬೆಂಗಳೂರು: ತಾಳಗುಪ್ಪ– ಹೊನ್ನಾವರ ರೈಲ್ವೆ ಮಾರ್ಗ ನಿರ್ಮಾಣ ಯೋಜನೆಯನ್ನು ವೆಚ್ಚ ಹಂಚಿಕೆ ಆಧಾರದಲ್ಲಿ ಅನುಷ್ಠಾನಕ್ಕೆ ತರುವ ಸಂಬಂಧ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಯಾವುದೇ ಪ್ರಸ್ತಾವ ಬಂದಿಲ್ಲ ಎಂದು ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ವಿ. ಸೋಮಣ್ಣ ತಿಳಿಸಿದರು.
ವಿಧಾನ ಪರಿಷತ್‌ನಲ್ಲಿ ಬುಧವಾರ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್ ಪ್ರಶ್ನೆಗೆ ಉತ್ತರಿಸಿದ ಅವರು, ‘82 ಕಿ.ಮೀ. ಉದ್ದದ ತಾಳಗುಪ್ಪ– ಹೊನ್ನಾವರ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ನೈರುತ್ಯ ರೈಲ್ವೆಯು 2010ರಲ್ಲಿ ಸಮೀಕ್ಷೆ ನಡೆಸಿತ್ತು. ಬಳಿಕ ಯೋಜನೆಯ ಮಂಜೂರಾತಿಗಾಗಿ ರೈಲ್ವೆ ಮಂಡಳಿಗೆ ಪ್ರಸ್ತಾವ ಸಲ್ಲಿಸಿದ್ದು, ಅಲ್ಲಿಯೇ ಬಾಕಿ ಇದೆ’ ಎಂದರು.
ಹುಬ್ಬಳ್ಳಿ– ಅಂಕೋಲಾ ರೈಲು ಮಾರ್ಗ ಯೋಜನೆಯು ಪರಿಸರ ಸಂಬಂಧಿ ತೊಡಕುಗಳಿಂದ ನನೆಗುದಿಗೆ ಬಿದ್ದಿದೆ. ತಾಳಗುಪ್ಪ– ಹೊನ್ನಾವರ ರೈಲು ಮಾರ್ಗ ನಿರ್ಮಾಣವಾದರೆ ಉತ್ತರ ಕರ್ನಾಟಕ, ಮಲೆನಾಡು ಮತ್ತು ಕರಾವಳಿಯನ್ನು ಸಂಪರ್ಕಿಸಲು ಉತ್ತಮ ಮಾರ್ಗ ಲಭಿಸುತ್ತದೆ. ಈ ಯೋಜನೆಗೂ ಪರಿಸರವಾದಿಗಳ ವಿರೋಧ ಬರಬಹುದು. ಆದ್ದರಿಂದ ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯುವುದಕ್ಕಾಗಿ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಪರಿಸರವಾದಿಗಳ ಜತೆ ಶೀಘ್ರದಲ್ಲಿ ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಹೊನ್ನಾವರ– ತಾಳಗುಪ್ಪ ಯೋಜನೆಯಿಂದ ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಜನರಿಗೆ ಹೆಚ್ಚು ಅನುಕೂಲವಾಗುತ್ತದೆ. ಆ ಭಾಗದ ಅಭಿವೃದ್ಧಿ ಸಹಕಾರಿಯಾಗಿರುವ ಯೋಜನೆಯ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಹೆಚ್ಚು ಕಾಳಜಿ ವಹಿಸಬೇಕು ಎಂದು ಹರಿಪ್ರಸಾದ್ ಆಗ್ರಹಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.