ಶನಿವಾರ, ಜೂನ್ 12, 2021
28 °C

ಹೊಸಪೇಟೆ: ತುಂಗಭದ್ರಾ ನದಿಯಲ್ಲಿ ಪ್ರವಾಹದ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ‘ತುಂಗಭದ್ರಾ ಜಲಾಶಯ ತುಂಬುವ ಹಂತಕ್ಕೆ ಬಂದಿದ್ದು, ಯಾವುದೇ ಸಂದರ್ಭದಲ್ಲಿ ನದಿಗೆ ನೀರು ಹರಿಸಲಾಗುವುದು. ನದಿ ಪಾತ್ರದ ಜನ ಎಚ್ಚರಿಕೆಯಿಂದ ಇದ್ದು, ಸುರಕ್ಷಿತ ಸ್ಥಳಗಳಿಗೆ ತೆರಳಬೇಕು’ ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಶುಕ್ರವಾರ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.

‘ಯಾರು ಕೂಡ ಜಾನುವಾರುಗಳನ್ನು ಮೇಯಿಸುತ್ತ ನದಿ ಪಾತ್ರ ಹಾಗೂ ನದಿಯ ಆಳ ಪ್ರದೇಶದಲ್ಲಿ ಓಡಾಡಬಾರದು. ಈ ಕುರಿತು ಬಳ್ಳಾರಿ, ಕೊಪ್ಪಳ, ರಾಯಚೂರು, ಅವಿಭಜಿತ ಆಂಧ್ರ ಪ್ರದೇಶದ ಕರ್ನೂಲ್‌, ಮೆಹಬೂಬ್‌ ನಗರದ ಜಿಲ್ಲಾಡಳಿತ ಅಗತ್ಯ ಕ್ರಮ ತೆಗೆದುಕೊಳ್ಳಬೇಕು’ ಎಂದು ತಿಳಿಸಲಾಗಿದೆ.

‘1,633 ಅಡಿ (101 ಟಿಎಂಸಿ) ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಶುಕ್ರವಾರ 1,630.66 ಅಡಿ (91.98 ಟಿಎಂಸಿ) ನೀರಿನ ಸಂಗ್ರಹವಿದೆ. 51,177 ಕ್ಯುಸೆಕ್‌ ಒಳಹರಿವು ದಾಖಲಾಗಿದೆ. 9,187 ಕ್ಯುಸೆಕ್‌ ನೀರು ಕಾಲುವೆಗಳಿಗೆ ಹರಿಸಲಾಗುತ್ತಿದೆ. ಈಗಿನ ಒಳಹರಿವು ನೋಡಿದರೆ ಜಲಾಶಯ ಎರಡರಿಂದ ಮೂರು ದಿನಗಳಲ್ಲಿ ಸಂಪೂರ್ಣ ಭರ್ತಿಯಾಗಲಿದೆ. ಆಗ ನೀರು ಹರಿಸುವುದು ಅನಿವಾರ್ಯವಾಗುತ್ತದೆ’ ಎಂದು ಮಂಡಳಿ ತಿಳಿಸಿದೆ.

ಒಳಹರಿವು ಅಲ್ಪ ಏರಿಕೆ

ಗುರುವಾರಕ್ಕೆ ಹೋಲಿಸಿದರೆ ಶುಕ್ರವಾರ ಒಳಹರಿವು ಅಲ್ಪ ಏರಿಕೆ ಕಂಡಿದೆ. ಗುರುವಾರ 50,609 ಕ್ಯುಸೆಕ್‌ ಒಳಹರಿವು ದಾಖಲಾಗಿತ್ತು. ಶುಕ್ರವಾರ 51,177 ಕ್ಯುಸೆಕ್‌ಗೆ ಹೆಚ್ಚಾಗಿದೆ. ಸತತ ಇಳಿಮುಖಗೊಂಡಿದ್ದ ಒಳಹರಿವು ಐದು ದಿನಗಳ ಬಳಿಕ ಮತ್ತೆ ಏರಿಕೆಯಾಗಿದೆ. 

ಆ. 15ಕ್ಕೆ ನೀರು ಬಿಡುಗಡೆ?

ಪ್ರತಿ ವರ್ಷ ಸ್ವಾತಂತ್ರ್ಯ ದಿನವಾದ ಆ. 15ರಂದು ಎಲ್ಲ ಕ್ರಸ್ಟ್‌ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸಲಾಗುತ್ತದೆ. ಎಲ್ಲ ಕ್ರಸ್ಟ್ ಗೇಟ್‌ಗಳಿಗೆ ತ್ರಿವರ್ಣ ಧ್ವಜ ಹೋಲುವ ವಿದ್ಯುದ್ದೀಪಗಳಿಂದ ಅಲಂಕರಿಸಲಾಗುತ್ತದೆ. ಈ ವರ್ಷವೂ ಅದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಶನಿವಾರ (ಆ.15) ಸಂಜೆ 5ಕ್ಕೆ ನೀರು ಹರಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. 

ಕ್ರಸ್ಟ್‌ಗೇಟ್‌ ತೆರೆದು ನದಿಗೆ ನೀರು ಹರಿಸುವ ಘಟನೆಗೆ ಸಾಕ್ಷಿಯಾಗಲು ರಾಜ್ಯ ಸೇರಿದಂತೆ ನೆರೆಯ ಆಂಧ್ರ ಪ್ರದೇಶ, ತೆಲಂಗಾಣದ ವಿವಿಧ ಭಾಗಗಳಿಂದ ಜನ ಬರುತ್ತಾರೆ. ಆದರೆ, ಈ ವರ್ಷ ಕೊರೊನಾ ಕಾರಣಕ್ಕಾಗಿ ಜಲಾಶಯಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.
 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು