ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಟೆಲ್‌ ಆಹಾರ ದುಬಾರಿ: ಎಷ್ಟಾಗಲಿದೆ ಟೀ-ಕಾಫಿ, ಊಟದ ದರ? ಇಲ್ಲಿದೆ ವಿವರ

Last Updated 8 ನವೆಂಬರ್ 2021, 21:30 IST
ಅಕ್ಷರ ಗಾತ್ರ

ಬೆಂಗಳೂರು: ಅಗತ್ಯ ವಸ್ತುಗಳು ಹಾಗೂ ಎಲ್‌ಪಿಜಿ ದರಗಳ ಏರಿಕೆಯಿಂದಾಗಿ ರಾಜ್ಯದಾದ್ಯಂತ ಹೋಟೆಲ್‌ಗಳಲ್ಲಿ ಆಹಾರ ಹಾಗೂ ಕಾಫಿ–ಟೀ ದರ ಕನಿಷ್ಠ ಶೇ 5ರಿಂದ ಶೇ 10ರವರೆಗೆ ಏರಿಕೆಯಾಗಲಿದೆ.

ಬೆಂಗಳೂರಿನ ಕೆಲವು ಹೋಟೆಲ್‌ಗಳಲ್ಲಿ ಸೋಮವಾರದಿಂದಲೇ ದರ ಏರಿಕೆ ಮಾಡಲಾಗಿದೆ. ಹಲವು ಹೋಟೆಲ್‌ಗಳ ಮಾಲೀಕರು ಬುಧವಾರದಿಂದ ತಮ್ಮ ಹೋಟೆಲ್‌ಗಳಲ್ಲಿ ದರಗಳನ್ನು ಏರಿಸುವುದಾಗಿ ತಿಳಿಸಿದ್ದಾರೆ. ಕೆಲ ಹೋಟೆಲ್‌ನವರು ‘ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ನೀಡುವುದಿಲ್ಲ. ಹಾಗಾಗಿ, ಸದ್ಯಕ್ಕೆ ದರ ಏರಿಕೆ ಮಾಡುವುದಿಲ್ಲ’ ಎಂದೂ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

‘ಅಗತ್ಯ ವಸ್ತುಗಳು ಮಾತ್ರವಲ್ಲದೆ, ಎಲ್‌ಪಿಜಿ ದರವನ್ನೂ ದಿಢೀರ್‌ ಏರಿಕೆ ಮಾಡಿರುವುದರಿಂದ ಹೋಟೆಲ್‌ ಉದ್ಯಮದ ಮೇಲೆ ಭಾರಿ ಹೊಡೆತ ಬಿದ್ದಿದೆ. ಕೋವಿಡ್‌ನಿಂದಾಗಿಕಳೆದ ವರ್ಷದಿಂದ ಹೋಟೆಲ್‌ ಉದ್ಯಮ ಈವರೆಗೆ ಚೇತರಿಸಿಕೊಂಡಿಲ್ಲ. ಜನರ ಸಂಕಷ್ಟ ಮನಗಂಡು ನಾವೂ ದರಗಳನ್ನು ಏರಿಸಿರಲಿಲ್ಲ. ಈಗಿನ ದುಬಾರಿ ಪರಿಸ್ಥಿತಿಯಲ್ಲಿ ದರ ಏರಿಕೆ ಅನಿವಾರ್ಯ’ ಎಂದು ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಹಾರ ಪದಾರ್ಥಗಳ ದರಗಳು ಗಗನಕ್ಕೇರಿವೆ. ದೊಡ್ಡ ಹೋಟೆಲ್‌ವೊಂದರಲ್ಲಿ ದಿನಕ್ಕೆ ಗರಿಷ್ಠ 10 ಸಿಲಿಂಡರ್ ಹಾಗೂ ಸಣ್ಣ ಹೋಟೆಲ್‌ನಲ್ಲಿ 3 ಸಿಲಿಂಡರ್‌ಗಳು ಬಳಕೆಯಾಗುತ್ತವೆ. ಈಗಿನ ದರದಲ್ಲಿ ಹೋಟೆಲ್‌ ಮಾಲೀಕರು ಲಾಭ ಕಾಣುವುದಾದರೂ ಹೇಗೆ’ ಎಂದು ಪ್ರಶ್ನಿಸಿದರು.

‘ಮೊದಲು ಶೇ 20ರಷ್ಟು ದರ ಏರಿಸಲು ಮಾಲೀಕರೆಲ್ಲ ನಿರ್ಧರಿಸಿದ್ದೆವು. ಆದರೆ, ಗ್ರಾಹಕರ ಸ್ಥಿತಿಯನ್ನು ಅವಲೋಕಿಸಿ ಶೇ 5ರಷ್ಟು ಮಾತ್ರ ದರ ಏರಿಸಿದ್ದೇವೆ.ಹೋಟೆಲ್‌ ಮಾಲೀಕರು ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ.ರಾಜ್ಯದಾದ್ಯಂತ ಸೋಮವಾರದಿಂದಲೇ ಹೋಟೆಲ್‌ಗಳಲ್ಲಿ ಆಹಾರದ ದರಗಳನ್ನು ಏರಿಕೆ ಮಾಡಲಾಗಿದೆ. ಗ್ರಾಹಕರಿಗೆ ಇದರಿಂದ ಹೆಚ್ಚೇನೂ ಹೊರೆಯಾಗುವುದಿಲ್ಲ. ಮಾಲೀಕರ ಸಂಕಷ್ಟವನ್ನೂ ಗ್ರಾಹಕರು ಅರ್ಥ ಮಾಡಿಕೊಳ್ಳಬೇಕು’ ಎಂದು ಮನವಿ ಮಾಡಿದರು.

‘ಈಗಿನ ಪರಿಸ್ಥಿತಿಯಲ್ಲಿ ಶೇ10ರಷ್ಟು ದರ ಏರಿಸಿದರೆ ಮಾತ್ರ ಹೋಟೆಲ್‌ಗಳನ್ನು ನಡೆಸಬಹುದು. ಕುಟುಂಬದವರೊಂದಿಗೆ ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಮಲ್ಲೇಶ್ವರದ ವೀಣಾ ಸ್ಟೋರ್ಸ್‌ನ ಪ್ರದೀಪ್ ಮಾಹಿತಿ ನೀಡಿದರು.

‘ಆಹಾರದ ದರಗಳನ್ನು ಈಗಲೇ ಏರಿಸುವ ನಿರ್ಧಾರವಿಲ್ಲ. ಹೋಟೆಲ್‌ ಉದ್ಯಮಕ್ಕೆ ದರ ಏರಿಕೆ ಅನಿವಾರ್ಯ. ಆದರೆ, ಗ್ರಾಹಕರಿಗೂ ಹೊರೆ ನೀಡುವ ಉದ್ದೇಶವಿಲ್ಲ. ಮುಂದಿನ ಬೆಳವಣಿಗೆಗಳನ್ನು ಅವಲೋಕಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಸದ್ಯಕ್ಕೆ ದರಗಳೆಲ್ಲ ಎಂದಿನಂತೆಯೇ ಇರುತ್ತದೆ’ ಎನ್ನುತ್ತಾರೆ ಎಂಪೈರ್‌ ಹೋಟೆಲ್‌ನ ಶಾಕೀರ್.

ದರ ಏರಿಕೆ ಎಷ್ಟು?

₹2:ಹಾಲು, ಕಾಫಿ, ಟೀ

₹5: ದೋಸೆ, ಇಡ್ಲಿ, ವಡೆ, ಪೂರಿ, ರೈಸ್‌ಬಾತ್, ಚಿತ್ರಾನ್ನ, ಪಲಾವ್, ಚೌಚೌಬಾತ್‌, ಚಾಟ್ಸ್‌

₹10: ಊಟ, ದಕ್ಷಿಣ ಮತ್ತು ಉತ್ತರ ಭಾರತ ಶೈಲಿಯ ಊಟ

ನಗರದ ಹೋಟೆಲ್‌ಗಳಲ್ಲಿ ಶೇ 10ರವರೆಗೆ ದರ ಹೆಚ್ಚಳ

‘ಬೆಂಗಳೂರಿನ 100ಕ್ಕೂ ಹೆಚ್ಚು ಹೋಟೆಲ್‌ಗಳಲ್ಲಿ ಸೋಮವಾರದಿಂದಲೇ ಸರಾಸರಿ ಶೇ 10ರವರೆಗೆ ದರ ಏರಿಕೆ ಜಾರಿಯಾಗಿದೆ. ಒಟ್ಟಾರೆ ನಗರದ ಎಲ್ಲ ಹೋಟೆಲ್‌ಗಳಲ್ಲಿ ಡಿಸೆಂಬರ್ 1ರಿಂದ ಪರಿಷ್ಕೃತ ದರ ಜಾರಿಯಾಗಲಿದೆ’ ಎಂದು ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಪಿ.ಸಿ.ರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಂಘದ ವತಿಯಿಂದ ದರ ಏರಿಕೆಗೆ ಸಲಹೆಯಷ್ಟೇ ನೀಡಲಾಗಿದೆ. ಮಾಲೀಕರು ತಮ್ಮ ಅನುಕೂಲಕ್ಕೆ ತಕ್ಕಂತೆ ದರ ಹೆಚ್ಚಳ ಮಾಡುತ್ತಾರೆ. ಏಕಕಾಲಕ್ಕೆ ಎಲ್ಲ ಆಹಾರದ ದರಗಳನ್ನು ಏರಿಸುವುದರಿಂದ ಗ್ರಾಹಕರಿಗೂ ಸಮಸ್ಯೆಯಾಗುತ್ತದೆ. ಹಾಗಾಗಿ, ಹಂತ ಹಂತವಾಗಿ ಕೆಲವು ಆಹಾರ ದರಗಳನ್ನು ಏರಿಸುವ ಚಿಂತನೆ ಮಾಲೀಕರದ್ದು’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT