ಗುರುವಾರ , ಜನವರಿ 27, 2022
20 °C

ಹೋಟೆಲ್‌ಗಳಲ್ಲಿ ವಾರಾಂತ್ಯದಲ್ಲೂ ಸೇವೆಗೆ ಅವಕಾಶ ನೀಡಿ: ರಾಜ್ಯ ಹೋಟೆಲುಗಳ ಸಂಘ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಸರ್ಕಾರ ಜಾರಿ ಮಾಡಿರುವ ವಾರಾಂತ್ಯ ಕರ್ಫ್ಯೂಗೆ ಹೋಟೆಲ್‌ ಮಾಲೀಕರ ಸಂಪೂರ್ಣ ವಿರೋಧವಿದೆ. ವಾರಾಂತ್ಯ ಕರ್ಫ್ಯೂ ಸಮಯದಲ್ಲಿ ಪಾರ್ಸೆಲ್ ಸೇವೆ ಬದಲಿಗೆ ಶೇ 50ರಷ್ಟು ಪ್ರಮಾಣದಲ್ಲಿ ಸೇವೆ ನೀಡಲು ಅವಕಾಶ ಕಲ್ಪಿಸಬೇಕು’ ಎಂದು ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ್ ಮನವಿ ಮಾಡಿದ್ದಾರೆ.

‘ಹೋಟೆಲ್‌ಗಳಲ್ಲಿ ವಾರಾಂತ್ಯದ ದಿನಗಳಲ್ಲೇ ವ್ಯಾಪಾರ ಹೆಚ್ಚು. ಕೋವಿಡ್‌ ತೀವ್ರಗೊಂಡಿರುವ ಕಾರಣಕ್ಕೆ ಸೋಮವಾರದಿಂದ ಶುಕ್ರವಾರದವರೆಗೆ ಹೋಟೆಲ್‌ಗಳಲ್ಲಿ ಶೇ 50ರಷ್ಟು ಆಸನ ಸಾಮರ್ಥ್ಯದಲ್ಲಿ ಸೇವೆ ನೀಡಲಾಗುತ್ತಿದೆ. ಇದರಿಂದ ಹೋಟೆಲ್‌ಗಳಿಗೆ ಯಾವುದೇ ಲಾಭವಿಲ್ಲ. ಗ್ರಾಹಕರ ಹಿತದೃಷ್ಟಿಯಿಂದ ಸೇವೆ ಒದಗಿಸುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ.

‘ಸರ್ಕಾರದ ನಿರ್ಬಂಧಗಳಿಂದಾಗಿ ಈವರೆಗೆ ಬೆಂಗಳೂರಿನಲ್ಲಿ ಒಂದು ಸಾವಿರಕ್ಕೂ ಹೆಚ್ಚು ಹಾಗೂ ರಾಜ್ಯದಾದ್ಯಂತ 20 ಸಾವಿರಕ್ಕೂ ಹೆಚ್ಚು ಹೋಟೆಲ್‌ಗಳು ಬಾಗಿಲು ಮುಚ್ಚಿವೆ. ಕೋವಿಡ್‌ ನೆಪ‍ವೊಡ್ಡಿ ಹೋಟೆಲ್‌ ಉದ್ಯಮದ ಮೇಲೆ ಮತ್ತೆ ಗದಾಪ್ರಹಾರ ಮಾಡುವುದು ಸರಿಯಲ್ಲ’ ಎಂದು ದೂರಿದ್ದಾರೆ.

‘ಮೂರನೇ ಅಲೆಯು ಹೆಚ್ಚು ಮಾರಣಾಂತಿಕ ಅಲ್ಲ ಎಂದು ತಜ್ಞರು ಹೇಳಿದ್ದಾರೆ. ಆದರೂ ವಾರಾಂತ್ಯದಲ್ಲಿ ಕರ್ಫ್ಯೂ ಜಾರಿ ಹಾಗೂ ಹೋಟೆಲ್‌ಗಳಿಗೆ ನಿರ್ಬಂಧ ಹೇರಿರುವುದು ಅರ್ಥಹೀನ. ನೆಲಕಚ್ಚಲಿರುವ ಹೋಟೆಲ್‌ ಉದ್ಯಮದ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಬೇಕು. ವಾರಾಂತ್ಯದಲ್ಲೂ ಶೇ 50ರಷ್ಟು ಆಸನ ವ್ಯವಸ್ಥೆಯೊಂದಿಗೆ ಸೇವೆ ಒದಗಿಸಲು ಅವಕಾಶ ನೀಡಲೇಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು