ಗುರುವಾರ , ಜುಲೈ 7, 2022
23 °C

ನಾನು ಕೇಜ್ರಿವಾಲ್ ಅಭಿಮಾನಿ: ಶಾಸಕ ರಮೇಶ್ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಆರೋಗ್ಯ ಸಚಿವನಾಗಿದ್ದಾಗ ದೆಹಲಿಯ ಮೊಹಲ್ಲಾ ಕ್ಲಿನಿಕ್‌‌ ಮತ್ತು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಆಶ್ಚರ್ಯಗೊಂಡೆ. ಅರವಿಂದ್ ಕೇಜ್ರಿವಾಲ್ ಅವರ ಕ್ರಾಂತಿಕಾರಕ ಬದಲಾವಣೆಗಳನ್ನು ನೋಡಿ ಅವರ ದೊಡ್ಡ ಅಭಿಮಾನಿಯಾದೆ’ ಎಂದು ಕಾಂಗ್ರೆಸ್‌ ಶಾಸಕ ಕೆ.ಆರ್‌. ರಮೇಶ್ ಕುಮಾರ್ ಹೇಳಿದರು.

ಶಾಂತಿನಗರದ ಬಸಪ್ಪ ರಸ್ತೆಯಲ್ಲಿರುವ ಆಮ್ ಆದ್ಮಿ ಕ್ಲಿನಿಕ್‌ ವೀಕ್ಷಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಅರವಿಂದ್ ಕೇಜ್ರಿವಾಲ್ ಅವರಿಗೆ ದೆಹಲಿ ಮತದಾರರು ಅವಕಾಶ ಕೊಟ್ಟರು. ಅದನ್ನು ಬಳಸಿಕೊಂಡ ಅವರು ಜನಪರ ಸೇವೆ ಮಾಡಿದ್ದಾರೆ. ಕೇಜ್ರಿವಾಲ್ ಅವರು ಬದಲಾವಣೆ ತಂದಿರುವ ಆರೋಗ್ಯ, ಶಿಕ್ಷಣ, ಉಚಿತ ನೀರು, ವಿದ್ಯುತ್, ಅಗತ್ಯ ಮೂಲಸೌಕರ್ಯಗಳು ಇತರ ರಾಜ್ಯಗಳಿಗೆ ಮಾದರಿ’ ಎಂದರು.

ಆಮ್ ಆದ್ಮಿ ಪಕ್ಷ ಸೇರುತ್ತೀರಾ ಎಂಬ ಪ್ರಶ್ನೆಗೆ ‘ನಾನೂ ಒಬ್ಬ ಆಮ್ ಆದ್ಮಿ. ಅಂದರೆ, ಜನ ಸಾಮಾನ್ಯ. ಜನಸಾಮಾನ್ಯರಿಗೆ ಯಾರು ಒಳ್ಳೆಯದನ್ನು ಮಾಡುತ್ತಾರೊ ಅವರ ಜೊತೆ ನಾನು ಸದಾ ಇರುತ್ತೇನೆ’ ಎಂದರು.

‘ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ನಗರದಲ್ಲಿ ಆರಂಭಿಸಿರುವ ದೆಹಲಿ ಮಾದರಿಯ ಮೊಹಲ್ಲಾ ಕ್ಲಿನಿಕ್ ನೋಡಿ ಸಂತೋಷವಾಗಿದೆ. ಯಾವುದೇ ರೀತಿಯ ಅಂತಸ್ತು, ಆದಾಯ, ಜಾತಿ ಕೇಳದೆ ಎಲ್ಲರಿಗೂ ಈ ಸೌಲಭ್ಯ ವಿಸ್ತರಿಸಿರುವುದು ಮೆಚ್ಚುಗೆ ಅಂಶ’ ಎಂದರು.

‘ಕೊರೊನಾ ಸಂಕಷ್ಟದ ನಂತರ ಸಣ್ಣ ಪುಟ್ಟ ಕಾಯಿಲೆಗಳಿಗೂ ಮಾತ್ರೆ ತೆಗೆದುಕೊಳ್ಳಲು ಜನಸಾಮಾನ್ಯರು ಕಷ್ಟಪಡುತ್ತಿದ್ದಾರೆ. ಆಮ್ ಆದ್ಮಿ ಕ್ಲಿನಿಕ್‌ ಒಳಗೆ ಬಂದರೆ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳೇ ಇದ್ದಾರೆ. ಅವರೆಲ್ಲ ಮನೆಗೆಲಸಕ್ಕೆ ಹೋಗುವಂಥ ಹೆಣ್ಣುಮಕ್ಕಳು. ಇಂತಹ ಕಟ್ಟಕಡೆಯ ಜನರ ಸೇವೆಗೆ ನಿಂತಿರುವ ಆಮ್ ಆದ್ಮಿಗಳಿಗೆ ವಂದನೆ’ ಎಂದರು.

ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ, ರಾಜ್ಯ ಕಾರ್ಯದರ್ಶಿ ಸಂಚಿತ್ ಸಹಾನಿ, ಮುಖಂಡರಾದ ಗೋಪಾಲ್ ರೆಡ್ಡಿ, ಹರಿಹರನ್, ರೇಣುಕಾ ವಿಶ್ವನಾಥನ್, ಜಂಟಿ ಕಾರ್ಯದರ್ಶಿ ದರ್ಶನ್, ಮುಖ್ಯ ವಕ್ತಾರ ಶರತ್ ಖಾದ್ರಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು