ಸೋಮವಾರ, ಅಕ್ಟೋಬರ್ 25, 2021
25 °C

ಇನ್ನೊಂದು ದಿನ ಇದ್ದಿದ್ದರೆ 3 ಜೀವ ಉಳಿಯುತ್ತಿದ್ದವು: ಮೃತಪಟ್ಟ ಸುಮಾ ತಂಗಿ ಹೇಳಿಕೆ

ಡಿ.ಕೆ.ಬಸವರಾಜು Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘10 ದಿನಗಳಿಂದ ಜತೆಯಲ್ಲೇ ಇದ್ದೇ. ಭಾನುವಾರ ಒಂದು ದಿವಸ ಈ ಮನೆಯಲ್ಲೇ ಇದ್ದಿದ್ದರೆ ಮೂರು ಜೀವಗಳೂ ಉಳಿಯುತ್ತಿದ್ದವು..’

ಇಲ್ಲಿನ ಶೇಖರಪ್ಪ ನಗರದಲ್ಲಿ ಮೃತಪಟ್ಟಿರುವ ಸುಮಾ ಅವರ ತಂಗಿ ನೇತ್ರಾವತಿ ಅವರು ನೋವಿನಿಂದ ಹೇಳಿದ ಮಾತುಗಳಿವು.

‘ನನ್ನ ಅಕ್ಕನಿಗೆ ಮೂಲವ್ಯಾಧಿ ಸಮಸ್ಯೆ ಇತ್ತು. ಹಲವು ದಿನಗಳಿಂದ ಈ ಸಮಸ್ಯೆ ಇದ್ದು, ನಾನು ಆರೈಕೆ ಮಾಡಿದೆ. ಆದರೆ, ನನ್ನನ್ನು ಊರಿಗೆ ಕಳುಹಿಸಿದ್ದ ಕಾರಣ ಗೊತ್ತಾಗಲಿಲ್ಲ‘ ಎಂದು ಕಣ್ಣಾಲಿ ತುಂಬಿಕೊಂಡರು.

ನೇತ್ರಾವತಿ ಅವರನ್ನು ಅವರ ಭಾವ ಕೃಷ್ಣ ನಾಯ್ಕ ಭಾನುವಾರ ಬೆಳಿಗ್ಗೆ ಸ್ವಂತ ಗ್ರಾಮವಾದ ಚಿತ್ರದುರ್ಗ ಜಿಲ್ಲೆಯ ಭರಮಸಾಗರದ ಅರಭಗಟ್ಟಕ್ಕೆ ಕಳುಹಿಸಿದ್ದರು. ಅವರು ಊರಿಗೆ ಹೋದ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ.

ನವೋದಯ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದ ಏಳು ವರ್ಷದ ಪುತ್ರ ಧ್ರುವನನ್ನು ನಿಟುವಳ್ಳಿಯಲ್ಲಿರುವ ಕೃಷ್ಣ ನಾಯ್ಕ ಅವರ ಅಕ್ಕನ ಮನೆಯಲ್ಲಿ ಬಿಡಲಾಗಿತ್ತು. ಭಾನುವಾರ ರಾತ್ರಿ 8.30ರ ವೇಳೆಗೆ ಆಟವಾಡುತ್ತಿದ್ದ ಮಗನನ್ನು ಶೇಖರಪ್ಪ ನಗರದ ಮನೆಗೆ ಕರೆದುಕೊಂಡು ಬರಲಾಗಿತ್ತು. ಲಾಕ್‌ಡೌನ್ ಇದ್ದುದರಿಂದ ಒಂದು ವರ್ಷದಿಂದ ನಿಟುವಳ್ಳಿಯಲ್ಲಿಯೇ ಬಿಟ್ಟಿದ್ದ ಪುತ್ರನನ್ನು ಭಾನುವಾರ ದಿಢೀರನೆ ಕರೆದುಕೊಂಡು ಬಂದಿದ್ದು ಏಕೆ ಎನ್ನುವುದು ನಿಗೂಢವಾಗಿದೆ.

ಕೆಲಸದಿಂದ ತೆಗೆದು ಹಾಕಿದ್ದರು: ‘ಆವರಗೆರೆಯ ಕಾರ್ಖಾನೆಯೊಂದರಲ್ಲಿ 15 ವರ್ಷಗಳಿಂದ ಲಾರಿ ಚಾಲಕರಾಗಿದ್ದ ಕೃಷ್ಣ ನಾಯ್ಕ ಅವರು ಪತ್ನಿಯ ಆರೈಕೆಗಾಗಿ ಆಗಾಗ್ಗೆ ರಜಾ ತೆಗೆದುಕೊಳ್ಳುತ್ತಿದ್ದಾರೆ ಎಂಬ ಕಾರಣಕ್ಕೆ ಅವರನ್ನು 3 ತಿಂಗಳ ಹಿಂದೆ ಕೆಲಸದಿಂದ ತೆಗೆದುಹಾಕಲಾಗಿತ್ತು’ ಎಂದು ಮಹಾನಗರ ಪಾಲಿಕೆಯ ಸದಸ್ಯ ಆರ್.ಎಲ್. ಶಿವಪ್ರಕಾಶ್ ತಿಳಿಸಿದರು.

ಆರ್ಥಿಕ ಸಮಸ್ಯೆ: ‘ಆರ್ಥಿಕ ಸಮಸ್ಯೆಯಿಂದಾಗಿ ಕೃಷ್ಣ ನಾಯ್ಕ ಕಾರ್ಖಾನೆಯ ಮಾಲೀಕರ ಬಳಿ ₹2 ಲಕ್ಷ ಕೊಡಿಸುವಂತೆ ನನ್ನ ಬಳಿ ಮನವಿ ಮಾಡಿದ್ದರು. ನಾನು ಮಾಲೀಕರ ಜೊತೆ ಮಾತನಾಡಿದ್ದೆ. ಮೂರು ದಿನಗಳ ಹಿಂದೆ ₹ 20 ಸಾವಿರವನ್ನು ಕೊಟ್ಟಿದ್ದರು. ಅವರಿಗೆ ಹಣಕಾಸಿನ ಸಮಸ್ಯೆ ಇತ್ತು’ ಎಂದು ಶಿವಪ್ರಕಾಶ್‌ ಹೇಳಿದರು.

ಪತ್ನಿ, ಮಗನಿಗೆ ವಿಷವುಣಿಸಿರುವ ಶಂಕೆ
ದಾವಣಗೆರೆ:
ಇಲ್ಲಿನ ಶೇಖರಪ್ಪ ನಗರದಲ್ಲಿ ಪತ್ನಿ ಅನಾರೋಗ್ಯ ಕಾರಣದಿಂದ ಬೇಸತ್ತು ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಲಾರಿ ಚಾಲಕ ಕೃಷ್ಣ ನಾಯ್ಕ (44), ಪತ್ನಿ ಸುಮಾ (32) ಹಾಗೂ ಪುತ್ರ ಧ್ರುವ ನಾಯ್ಕ (7) ಮೃತಪಟ್ಟವರು.

‘ಪತ್ನಿ ಹಾಗೂ ಪುತ್ರನಿಗೆ ಊಟದಲ್ಲಿ ವಿಷ ಬೆರೆಸಿ ಕೊಂದ ಬಳಿಕ ಕೃಷ್ಣ ನಾಯ್ಕ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು’ ಎಂದು ಅಕ್ಕಪಕ್ಕದ ನಿವಾಸಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

‘ತನಿಖೆಯ ಬಳಿಕವೇ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಪ್ರತಿಕ್ರಿಯಿಸಿದ್ದಾರೆ.

ಸುಮಾ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದರೂ ಗುಣಮುಖರಾಗಿರಲಿಲ್ಲ. ಚಿಕಿತ್ಸೆ ವೆಚ್ಚ ಭರಿಸಲು ಹಣವಿಲ್ಲದೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆರ್‌.ಎಂ.ಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು