ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಐಟಿ ಧಾರವಾಡ: ಸೌರಶಕ್ತಿ ಕ್ಷೇತ್ರದ ನಾವಿನ್ಯ ಕೇಂದ್ರ

‘ಸೆಲ್ಕೊ’ ಸೋಲಾರ್ , ‘ಹನಿವೆಲ್‌’ ಕಂಪನಿ ನೆರವು:ಎಲ್ಲರ ಕೈಗೆಟುಕುವ ಇಂಧನ
Last Updated 11 ಫೆಬ್ರುವರಿ 2022, 20:25 IST
ಅಕ್ಷರ ಗಾತ್ರ

ಧಾರವಾಡ: ಸೌರಶಕ್ತಿ ಇಂಧನವನ್ನು ಜನಸಾಮಾನ್ಯರ ಕೈಗೆಟಕುವಂತೆ ಮಾಡುವ ನಿಟ್ಟಿನಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ–ಧಾರವಾಡ) ಆಸಕ್ತರಿಗಾಗಿ ನಾವಿನ್ಯ ಮತ್ತು ಪೋಷಣ ಕೇಂದ್ರವನ್ನು ಆರಂಭಿಸುತ್ತಿದೆ.

ಐಐಟಿ ಧಾರವಾಡದ ಈ ಪ್ರಯತ್ನಕ್ಕೆ ‘ಸೆಲ್ಕೊ’ ಸೋಲಾರ್ ಸಂಸ್ಥೆಯು ಸೌರಶಕ್ತಿಗೆ ಸಂಬಂಧಿಸಿದ ಹೊಸ ಆವಿಷ್ಕಾರಗಳ ಅನುಷ್ಠಾನದಲ್ಲಿ ನೆರವಾಗುತ್ತಿದೆ. ಜತೆಗೆ ಈ ಇಡೀ ಯೋಜನೆಗೆ ‘ಹನಿವೆಲ್’ ಕಂಪನಿಯು ನೆರವಾಗುತ್ತಿದೆ.

ಈ ಕುರಿತು ಮಾಹಿತಿ ನೀಡಿದ ಯೋಜನೆಯ ಸಂಯೋಜಕ ಹಾಗೂ ಐಐಟಿ ಧಾರವಾಡ ಪ್ರಾಧ್ಯಾಪಕ ಪ್ರೊ.ಧೀರಜ್ ಪಾಟೀಲ, ‘ಪ್ರಧಾನಮಂತ್ರಿ ನಿಗದಿಪಡಿಸಿದ ಶೂನ್ಯ ಇಂಧನ ಗುರಿಗೆ ಪೂರಕವಾಗಿ ವಿಶ್ವ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ–7ರ ಅನ್ವಯ, ಶುದ್ಧ ಹಾಗೂ ಎಲ್ಲರ ಕೈಗೆಟುಕುವ ಇಂಧನ ಪೂರೈಕೆಯ ಉದ್ದೇಶದಿಂದ ಕೇಂದ್ರ ಆರಂಭಿಸಲಾಗುತ್ತಿದೆ. ಸೌರಶಕ್ತಿ ಕ್ಷೇತ್ರದಲ್ಲಿನ ಹೊಸ ಸವಾಲುಗಳಿಗೆ ಉತ್ತರ ಕಂಡುಕೊಂಡು,ಅದಕ್ಕೆ ಪೂರಕ ಪ್ರಯೋಗಾಲಯ ವ್ಯವಸ್ಥೆ ಮಾಡಲಾಗುವುದು’ಎಂದರು.

‘ಕೇಂದ್ರದ ನಿರ್ದೇಶಕ ಪ್ರೊ.ಪಿ.ಶೇಷು ಅವರ ಮಾರ್ಗದರ್ಶನದಲ್ಲಿ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ಮೊದಲ ಹಂತದಲ್ಲಿ ಸೌರಶಕ್ತಿ ಆವಿಷ್ಕಾರಗಳ ಅಭಿವೃದ್ಧಿ ಮತ್ತು ಪರೀಕ್ಷೆಗೆ ಅಗತ್ಯವಿರುವ ಸಲಕರಣೆಗಳನ್ನು ಖರೀದಿಸಿ ಸ್ಥಾಪಿಸಲಾಗುತ್ತಿದೆ. ಎರಡನೇ ಹಂತದಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಆವಿಷ್ಕಾರಗಳ ಯೋಜನೆಗಳನ್ನು ಆಹ್ವಾನಿಸಿ ಕ್ಷೇತ್ರದಲ್ಲಿರುವ ಸಮಸ್ಯೆ ಹಾಗೂ ಅದಕ್ಕೆ ಆಸಕ್ತರು ಕಂಡುಕೊಂಡ ಮಾರ್ಗೋಪಾಯಗಳನ್ನು ಪರಿಶೀಲಿಸಲಾಗುವುದು. ಅವುಗಳಲ್ಲಿ ಆಯ್ಕೆಯಾದ ಯೋಜನೆಗಳಿಗೆ ಐಐಟಿ ಧಾರವಾಡದಲ್ಲಿನ ಪ್ರಯೋಗಾಲಯದಲ್ಲಿಸ್ಥಳಾವಕಾಶ ನೀಡಲಾಗುವುದು’ ಎಂದರು.

‘ಇದರ ಭಾಗವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸೌರಶಕ್ತಿ ಕ್ಷೇತ್ರದ ಸಂಶೋಧಕರನ್ನುಪ್ರತಿ 15 ದಿನಗಳಿಗೊಮ್ಮೆ ಆಹ್ವಾನಿಸಿ ಅವರಿಂದ ಉಪನ್ಯಾಸ ನಡೆಸಲಾಗುವುದು. ಸೌರಶಕ್ತಿ ಕ್ಷೇತ್ರದಲ್ಲಿ ಆಸಕ್ತರು ಇದರಲ್ಲಿ ಪಾಲ್ಗೊಳ್ಳಬಹುದು. ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ಮಾರ್ಗೋಪಾಯ ಕಂಡುಕೊಳ್ಳಲು ಸಾಧ್ಯವಾಗಲಿದೆ’ ಎಂದು ಪ್ರೊ. ಧೀರಜ್ ತಿಳಿಸಿದರು.

‘ಸೌರಶಕ್ತಿ ಬಳಸಿದ ಲೇಸರ್ ಕಟ್ಟಿಂಗ್ ಯಂತ್ರ, ಸ್ಕ್ಯಾನರ್, ವೆಲ್ಡಿಂಗ್‌, ಮರಗೆಲಸದ ಸಾಧನಗಳು, ಮೂರು ಆಯಾಮಗಳ ಪ್ರಿಂಟರ್‌ ಸಾಧನಗಳ ಅಭಿವೃದ್ಧಿ ಐಐಟಿ ಧಾರವಾಡದಿಂದಲೂ ನಡೆಯುತ್ತಿದೆ. ಇದರೊಂದಿಗೆ ಸೌರಶಕ್ತಿಯ ಥರ್ಮಲ್, ಫೋಟೊವೋಲ್ಟಾಯಿಕ್ ಕ್ಷೇತ್ರಗಳಲ್ಲೂ ಸಂಶೋಧನೆಗಳು ನಡೆಯುತ್ತಿವೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT