ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯದಾನ: ಕರ್ನಾಟಕಕ್ಕೆ 14ನೇ ಸ್ಥಾನ

Last Updated 28 ಜನವರಿ 2021, 18:47 IST
ಅಕ್ಷರ ಗಾತ್ರ

ಬೆಂಗಳೂರು: ಜನರಿಗೆ ನ್ಯಾಯ ದೊರಕಿಸುತ್ತಿರುವ ರಾಜ್ಯಗಳ ಶ್ರೇಯಾಂಕ ಪಟ್ಟಿಯಲ್ಲಿ ಕರ್ನಾಟಕ 14 ಸ್ಥಾನದಲ್ಲಿದ್ದು, ನೆರೆಯ ಮಹಾರಾಷ್ಟ್ರ ಈ ವರ್ಷವೂ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.

2020ನೇ ಸಾಲಿನ ಭಾರತದ ನ್ಯಾಯ ವರದಿಯನ್ನು ಟಾಟಾ ಟ್ರಸ್ಟ್ ಬಿಡುಗಡೆ ಮಾಡಿದ್ದು, ಪೊಲೀಸ್, ಕಾರಾಗೃಹ, ನ್ಯಾಯಾಂಗ ಮತ್ತು ಕಾನೂನು ಸಹಾಯದ ಸಂಯೋಜಿತ ಶ್ರೇಯಾಂಕ ಇದಾಗಿದೆ ಎಂದು ವರದಿ ತಿಳಿಸಿದೆ.‌

ಭಾರತದ 18 ದೊಡ್ಡ ಮತ್ತು ಮಧ್ಯಮ ಗಾತ್ರದ ರಾಜ್ಯಗಳಲ್ಲಿ (1 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ) ಮಹಾರಾಷ್ಟ್ರ ಅಗ್ರ ಸ್ಥಾನದಲ್ಲಿದೆ. ನಂತರ ತಮಿಳುನಾಡು, ತೆಲಂಗಾಣ, ಪಂಜಾಬ್ ಮತ್ತು ಕೇರಳ ರಾಜ್ಯಗಳಿವೆ. 2019ರ ವರದಿಯಲ್ಲಿ 6ನೇ ಸ್ಥಾನದಲ್ಲಿದ್ದ ಕರ್ನಾಟಕ ಈ ಬಾರಿ ಬಿಹಾರಕ್ಕಿಂತ ಕೆಳಕ್ಕೆ ಕುಸಿದಿದೆ.

ಏಳು ಸಣ್ಣ ರಾಜ್ಯಗಳ ಪಟ್ಟಿಯಲ್ಲಿ (ಒಂದು ಕೋಟಿಗಿಂತ ಕಡಿಮೆ ಜನಸಂಖ್ಯೆ) ತ್ರಿಪುರ, ಸಿಕ್ಕಿಮ್ ಮತ್ತು ಗೋವಾ ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿವೆ.‌

ಭಾರತ ನ್ಯಾಯ ವರದಿಯ ಎರಡನೇ ಆವೃತ್ತಿ ಇದಾಗಿದೆ. ಜನರಿಗೆ ನ್ಯಾಯ ಒದಗಿಸಲು ಶ್ರಮಿಸುತ್ತಿರುವ ನಾಲ್ಕು ಸ್ತಂಭಗಳಾದ ಪೊಲೀಸ್, ನ್ಯಾಯಾಂಗ, ಕಾರಾಗೃಹ ಮತ್ತು ಕಾನೂನು ನೆರವಿನ ಕುರಿತು ಸರ್ಕಾರಿ ಇಲಾಖೆಗಳಲ್ಲಿ ಸಾರ್ವಜನಿಕವಾಗಿ ಲಭ್ಯವಿರುವ ದತ್ತಾಂಶ ಆಧರಿಸಿ ಈ ಶ್ರೇಯಾಂಕ ಸಿದ್ಧಪಡಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‌ಭಾರತದಲ್ಲಿನ ನ್ಯಾಯಾಧೀಶರಲ್ಲಿ ಮಹಿಳೆಯರಿಗೆ ಶೇ 29ರಷ್ಟು ಸ್ಥಾನ ದೊರೆತಿದೆ. ಹೈಕೋರ್ಟ್‌ಗಳಲ್ಲಿ ಮಹಿಳಾ ನ್ಯಾಯಾಧೀಶರ ಸಂಖ್ಯೆ ಶೇ 11ರಿಂದ 13ಕ್ಕೆ ಏರಿಕೆಯಾಗಿದೆ ಎಂದೂ ವರದಿ ಹೇಳಿದೆ.

ಸಾಂಕ್ರಾಮಿಕ ರೋಗದಿಂದಾಗಿ ಕಡಿಮೆ ಪ್ರಕರಣಗಳು ದಾಖಲಾಗಿದ್ದರೂ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆ ಕಡಿಮೆ ಇಲ್ಲ ಎಂದು ವರದಿಯ ಮುನ್ನುಡಿ ಬರೆದಿರುವ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಂ.ಬಿ. ಲೋಕೂರ್ ಅಭಿಪ್ರಾಯಪಟ್ಟಿದ್ದಾರೆ.

‘ಇಡೀ ದೇಶದ ಜಿಲ್ಲಾ ನ್ಯಾಯಾಲಯಗಳಲ್ಲಿ 35.34 ದಶಲಕ್ಷಕ್ಕೂ ಹೆಚ್ಚಿನ ಪ್ರಕರಣಗಳು, ಹೈಕೋರ್ಟ್‌ಗಳಲ್ಲಿ 2.72 ದಶಲಕ್ಷ ಪ್ರಕರಣಗಳು ಸೇರಿ 40 ದಶ ಲಕ್ಷ ಪ್ರಕರಣಗಳು ಬಾಕಿ ಇವೆ. ಈ ಪ್ರಕರಣಗಳ ವಿಲೇವಾರಿಗೆ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ’ ಎಂದು ಅವರು ಪ್ರತಿಪಾದಿಸಿದ್ದಾರೆ. ‌

ಕಾರಾಗೃಹಗಳಲ್ಲಿ ಕೈದಿಗಳಿಗೆ ಮಾಡುತ್ತಿರುವ ಸರಾಸರಿ ಖರ್ಚು ಶೇ 45ರಷ್ಟು ಹೆಚ್ಚಾಗಿದೆ. ಆಂಧ್ರ ಪ್ರದೇಶ ಅತೀ ಹೆಚ್ಚು ಮತ್ತು ಮೇಘಾಲಯ ಅತೀ ಕಡಿಮೆ ಖರ್ಚು ಮಾಡುತ್ತಿದೆ ಎಂದು ವರದಿ ಹೇಳಿದೆ.

25 ವರ್ಷದಲ್ಲಿ 1.5 ಕೋಟಿ ಜನರಿಗೆ ಕಾನೂನಿನ ನೆರವು

ಕಳೆದ 25 ವರ್ಷಗಳಲ್ಲಿ ಕೇವಲ 1.5 ಕೋಟಿ ಜನರು ಮಾತ್ರ ಕಾನೂನು ನೆರವು ಪಡೆದಿದ್ದಾರೆ. ಈ ಉದ್ದೇಶಕ್ಕೆ 2019–20ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ತಲಾ ₹1.05 ಖರ್ಚು ಮಾಡಿದೆ ಎಂದು ವರದಿ ಹೇಳಿದೆ.

2019ರಲ್ಲಿ 12 ಲಕ್ಷಕ್ಕೂ ಹೆಚ್ಚು ಜನರು ಕಾನೂನು ನೆರವು ಮತ್ತು ಸಲಹೆ ಪಡೆದಿದ್ದು, ಈ ಸಂಖ್ಯೆ ಗಮನಾರ್ಹ ಏರಿಕೆ ಎಂದೂ ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT