ಭಾನುವಾರ, ಆಗಸ್ಟ್ 14, 2022
20 °C

ಸೇನೆಯ ಬಗ್ಗೆ ಸೇನಾ ಮುಖ್ಯಸ್ಥರೇ ಮಾತನಾಡಬೇಕೆ ಹೊರತು ಕಾಂಗ್ರೆಸ್ಸಿಗರಲ್ಲ: ಬಿಜೆಪಿ 

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸೇನೆಯ ಆಗು–ಹೋಗು, ಅನಿವಾರ್ಯತೆಗಳ ಬಗ್ಗೆ ಮಾತನಾಡಬೇಕಿರುವುದು ಸೇನಾ ಮುಖ್ಯಸ್ಥರೇ ಹೊರತು ಕಾಂಗ್ರೆಸ್ ನಾಯಕರಲ್ಲ ಎಂದು ಬಿಜೆಪಿ ಟೀಕಿಸಿದೆ. 

‘ಅಗ್ನಿಪಥ’ ಯೋಜನೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್‌ ನಡೆಯನ್ನು ಪ್ರಶ್ನಿಸಿರುವ ಬಿಜೆಪಿ ಟ್ವಿಟರ್‌ನಲ್ಲಿ ಅಸಮಾಧಾನ ಹೊರಹಾಕಿದೆ.

‘ಅಗ್ನಿಪಥ ಯೋಜನೆಯಿಂದ ಸೇನೆಯ ರೆಜಿಮೆಂಟ್ ವ್ಯವಸ್ಥೆಗೆ ಯಾವುದೇ ಧಕ್ಕೆಯಾಗುವುದಿಲ್ಲವೆಂದು ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ ಸ್ಪಷ್ಟನೆ ನೀಡಿದ್ದಾರೆ. ಕಾಂಗ್ರೆಸ್ಸಿಗರೇ, ಸೇನೆಯ ವಿಚಾರದಲ್ಲಿ ರಾಜಕೀಯವೇಕೆ’ ಎಂದು ಬಿಜೆಪಿ ಪ್ರಶ್ನಿಸಿದೆ. 

‘ಅಗ್ನಿಪಥ ಯೋಜನೆಯನ್ನು ಯಾವುದೇ ಕಾರಣಕ್ಕೂ ಹಿಂತೆಗೆದುಕೊಳ್ಳುವುದಿಲ್ಲ. ದೇಶದ ಯುವಶಕ್ತಿಗೆ ಪ್ರೇರಣೆ ನೀಡಬಲ್ಲ ಏಕೈಕ ಮಾರ್ಗವಿದು ಎಂದು ಅನಿಲ್ ಪುರಿ ಹೇಳಿದ್ದಾರೆ. ಕಾಂಗ್ರೆಸ್ಸಿಗರೇ, ಮೂರು ಸೇನಾಪಡೆಗಳ ಮುಖ್ಯಸ್ಥರು ಅಗ್ನಿಪಥ ಯೋಜನೆ ಸ್ವಾಗತಿಸಿದ್ದಾರೆ, ನೀವೇಕೆ ದೇಶದ ವಿರುದ್ಧ ಹೋಗುತ್ತಿದ್ದೀರಿ’ ಎಂದು ಪ್ರಶ್ನಿಸಿರುವ ಬಿಜೆಪಿ #CONgressAgnipathToolKit ಎಂಬ ಹ್ಯಾಷ್‌ಟ್ಯಾಗ್‌ ಅನ್ನು ಉಲ್ಲೇಖಿಸಿದೆ. 

‘ಅಗ್ನಿವೀರರಿಂದ ಸೇನೆಯ ಸಾಮರ್ಥ್ಯ ಕುಂದುವುದಿಲ್ಲ. ಬದಲಾಗಿ ತಾರುಣ್ಯ ತುಂಬುತ್ತದೆ. ಅಗ್ನಿವೀರ್ ಎಂಬ ಪದನಾಮವೇ ಶೌರ್ಯ ಪ್ರಶಸ್ತಿಗೆ ಅರ್ಹತೆಯಾಗಬಲ್ಲದು. ಅಗ್ನಿಪಥ ಯೋಜನೆಯ ಮೂಲಕ ಸೇನಾಪಡೆಗೆ ಅತ್ಯುತ್ತಮ ಪ್ರತಿಭೆಗಳು ಸೇರಿಕೊಳ್ಳಲಿದ್ದಾರೆ. ಸೇನೆಯನ್ನು ದುರ್ಬಲವಾಗಿಸುವುದು ಕಾಂಗ್ರೆಸ್‌ ಆಶಯವೇ’ ಎಂದು ಬಿಜೆಪಿ ಕಿಡಿಕಾರಿದೆ. 

‘ಸೇನೆಗೆ ಸೇರಲಿಚ್ಛಿಸುವವರು ಅಗ್ನಿಪಥ ಯೋಜನೆ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗಿಲ್ಲ. ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟವುಂಟು ಮಾಡಿಲ್ಲ ಎಂದು ಪ್ರಮಾಣಪತ್ರ ನೀಡುವುದು ಕಡ್ಡಾಯ ಎಂದು ಅನಿಲ್‌ ಪುರಿ ತಿಳಿಸಿದ್ದಾರೆ. ಯುವಜನತೆಯನ್ನು ಪ್ರತಿಭಟನೆ, ಗಲಭೆ, ದೊಂಬಿಯ ಹಾದಿ ಹಿಡಿಸಿದ ಕಾಂಗ್ರೆಸ್‌ ಇವರೆಲ್ಲರ ಅವಕಾಶ ಕಿತ್ತುಕೊಂಡಿದೆ’ ಎಂದು ಬಿಜೆಪಿ ಗುಡುಗಿದೆ. 

‘ಅಗ್ನಿಪಥ ಯೋಜನೆಯ ಮೂಲಕ ಸೇವೆ ಸಲ್ಲಿಸಿ ಹೊರಬರುವ ಅಗ್ನಿವೀರರಿಗೆ ದೇಶಕ್ಕೆ ದೇಶವೇ ಉದ್ಯೋಗಾವಕಾಶಗಳ ಭರವಸೆ ನೀಡುತ್ತಿದೆ. ಭಾರತದ ದೈತ್ಯ ಉದ್ಯಮ ಸಂಸ್ಥೆಗಳು, ಕಾರ್ಪೊರೇಟ್ ಕಂಪನಿಗಳು ಉದ್ಯೋಗದ ಭರವಸೆ ನೀಡಿವೆ. ಆದರೂ, ಕಾಂಗ್ರೆಸ್ ಸುಳ್ಳು ಸುದ್ದಿ ಹಬ್ಬಿಸುವುದರಲ್ಲಿ ನಿರತವಾಗಿದೆ’ ಎಂದು ಬಿಜೆಪಿ ಆರೋಪಿಸಿದೆ. 

ಓದಿ... ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಕೋವಿಡ್ ಪಾಸಿಟಿವ್ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು