ಭಾನುವಾರ, ನವೆಂಬರ್ 1, 2020
19 °C

ಆರು ಕ್ಷೇತ್ರಗಳ ಪ್ರಗತಿಗೆ ಕರಡು ಯೋಜನೆ: ಸಚಿವ ಜಗದೀಶ ಶೆಟ್ಟರ್‌ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದಲ್ಲಿ ಆರು ಪ್ರಮುಖ ಕ್ಷೇತ್ರಗಳಲ್ಲಿ ಉದ್ಯಮಶೀಲತಾ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಕರಡು ಯೋಜನಾ ವರದಿಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ತಿಳಿಸಿದರು.

ನಗರದ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಫ್‌ಕೆಸಿಸಿಐ) ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಉದ್ಯಮಿಗಳಿಗೆ ರಫ್ತು ಉತ್ತೇಜನಾ ಪ್ರಶಸ್ತಿ ವಿತರಿಸಿ ಮಾತನಾಡಿದ ಅವರು, ‘ಈಗ ರಾಜ್ಯವು ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಅದರ ಜತೆಯಲ್ಲೇ ಆರೋಗ್ಯ ಮತ್ತು ಸ್ವಾಸ್ಥ್ಯ ಸೇವೆಗಳು, ಶೈಕ್ಷಣಿಕ ಸೇವೆಗಳು, ಮೂಲಸೌಕರ್ಯ ಮತ್ತು ನಿರ್ಮಾಣ ಕ್ಷೇತ್ರ, ಪಾವತಿ ಹಾಗೂ ವಲಸೆ ನೆರವು ಸೇವೆಗಳು, ಸರಕು ಸಾಗಣೆ ಮತ್ತು ಸಾರಿಗೆ ಸೇವೆಗಳು ಹಾಗೂ ಮನರಂಜನಾ ಸೇವಾ ವಲಯಗಳನ್ನು ಉತ್ತೇಜಿಸಲು ನಿರ್ಧರಿಸಲಾಗಿದೆ’ ಎಂದರು.

ಉತ್ತಮ ರ‍್ಯಾಂಕಿಂಗ್‌ ನಿರೀಕ್ಷೆ: ‘ಸುಲಲಿತ ಉದ್ದಿಮೆ ವಹಿವಾಟಿನ ರ‍್ಯಾಂಕಿಂಗ್‌ ಸಮೀಕ್ಷೆ 2019ರ ನವೆಂಬರ್‌ನಲ್ಲಿ ಆರಂಭವಾಗಿತ್ತು. ಮಾರ್ಚ್‌ನಲ್ಲೇ ವರದಿ ಪ್ರಕಟವಾಗಬೇಕಿತ್ತು. ಹಿಂದಿನ ಸರ್ಕಾರದ ಅವಧಿಯ ಕ್ರಮಗಳನ್ನು ಆಧರಿಸಿ ಈ ವರದಿಯಲ್ಲಿ ಕೆಳಗಿನ ಸ್ಥಾನ ಲಭಿಸಿದೆ’ ಎಂದು ಶೆಟ್ಟರ್‌ ಹೇಳಿದರು.

‘ತಮ್ಮ ಸರ್ಕಾರ ರೂಪಿಸಿರುವ ಹೊಸ ಕೈಗಾರಿಕಾ ನೀತಿ ಮತ್ತು ಕೈಗಾರಿಕಾ ಸೌಲಭ್ಯ ತಿದ್ದುಪಡಿ ಕಾಯ್ದೆಗಳ ಪರಿಣಾಮವಾಗಿ ಕರ್ನಾಟಕ ಉದ್ಯಮ ಸ್ನೇಹಿ ರಾಜ್ಯಗಳ ಸಾಲಿನಲ್ಲಿ ಮುಂಚೂಣಿಯಲ್ಲಿದೆ. ಉದ್ದಿಮೆಗಳ ಪ್ರೋತ್ಸಾಹಕ್ಕಾಗಿ ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಮುಂದಿನ ಬಾರಿ ಸುಲಲಿತ ಉದ್ದಿಮೆ ವಹಿವಾಟಿನ ರ‍್ಯಾಂಕಿಂಗ್‌ನಲ್ಲಿ ಕರ್ನಾಟಕ ಐದರೊಳಗಿನ ಸ್ಥಾನ ಪಡೆಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ರಫ್ತು ವಹಿವಾಟಿನಲ್ಲೂ ರಾಜ್ಯವು ಮುಂಚೂಣಿಯಲ್ಲಿದೆ. ರಫ್ತು ಉತ್ತೇಜನ ಮತ್ತು ಉದ್ಯೋಗ ಸೃಷ್ಟಿಗಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬೇಲೇಕೇರಿ ಬಂದರು ಅಭಿವೃದ್ಧಿ ಯೋಜನೆ ಪ್ರಗತಿಯಲ್ಲಿದೆ. ಈ ಯೋಜನೆಯಿಂದ ರಾಜ್ಯದ ರಫ್ತು ವಹಿವಾಟಿನ ಚಿತ್ರಣ ಬದಲಾಗಲಿದೆ’ ಎಂದರು.

ರಾಜ್ಯದ 40 ಪ್ರಮುಖ ಕೈಗಾರಿಕೋದ್ಯಮಿಗಳಿಗೆ ರಫ್ತು ಉತ್ತೇಜನಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಫ್‌ಕೆಸಿಸಿಐ ಸಿ.ಆರ್‌. ಜನಾರ್ದನ, ನಿಯೋಜಿತ ಅಧ್ಯಕ್ಷ ಪೆರಿಕಾಲ್‌ ಎಂ. ಸುಂದರ್‌, ಎಕ್ಸ್‌ಪೋರ್ಟ್‌ ಎಕ್ಸಲೆನ್ಸ್‌ ಪ್ರಶಸ್ತಿ ಸಮಿತಿಯ ಅಧ್ಯಕ್ಷ ಬಿ.ಪಿ.ಶಶಿಧರ್‌, ನಿಯೋಜಿತ ಹಿರಿಯ ಉಪಾಧ್ಯಕ್ಷ ಐ.ಎಸ್‌. ಪ್ರಸಾದ್‌, ನಿಕಟಪೂರ್ವ ಅಧ್ಯಕ್ಷ ಸುಧಾಕರ ಎಸ್‌. ಶೆಟ್ಟಿ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು