ಬುಧವಾರ, ಏಪ್ರಿಲ್ 21, 2021
32 °C

ಒಳನೋಟ ಪ್ರತಿಕ್ರಿಯೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು:‘ವಲಸೆ–ಮಧ್ಯವರ್ತಿಗೆ ಶುಕ್ರದೆಸೆ’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ (ಫೆ.21) ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರು ಪ್ರತಿಕ್ರಿಯಿಸಿದ್ದಾರೆ. ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ.

ಶಿಕ್ಷಣದಿಂದ ವಂಚಿತರಾಗಬಾರದು

ವಲಸೆ ಜನರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ವಲಸೆ ಹೋಗುವವರು ತಮ್ಮ ಮಕ್ಕಳನ್ನು ಜೊತೆಯಲ್ಲಿ ಕರೆದೊಯ್ಯುತ್ತಾರೆ. ಇದರಿಂದ ಮಕ್ಕಳು ಶಾಲೆಗಳಿಂದ ದೂರವಾಗುತ್ತಾರೆ ಹಾಗೂ ಕೆಲಸಗಳಲ್ಲಿ ತೊಡಗಿ, ಶಿಕ್ಷಣವನ್ನೇ ಮರೆಯುತ್ತಾರೆ. ವಲಸೆ ಮಕ್ಕಳ ಭವಿಷ್ಯದ ದೃಷ್ಟಿಯಿಂದಾದರೂ ಸರ್ಕಾರ ಅವರಿಗೆ ಶಿಕ್ಷಣ ನೀಡುವ ವಿಶೇಷ ಕಾಳಜಿ ವಹಿಸಬೇಕು.

ಮಧುಕುಮಾರ್, ಮೈಸೂರು

–––

ಅಭದ್ರತೆಯಲ್ಲೇ ಜೀವನ

ಬಹುಪಾಲು ಬಡವರು ಹೊಟ್ಟೆ ಹೊರೆಯಲು ತಮ್ಮ ಕುಟುಂಬ ಸಮೇತ ಕೂಲಿ ಅರಸುತ್ತಾ ವಲಸೆ ಹೋಗುತ್ತಾರೆ. ವಲಸೆ ಕೂಲಿ ಕಾರ್ಮಿಕರಿಗೆ ಅಭದ್ರತೆಯೇ ಹೆಚ್ಚು. ಇದರ ನಡುವೆ ಮಧ್ಯವರ್ತಿಗಳ ಬಲೆಯಲ್ಲಿ ಸಿಲುಕಿ ನರಳುತ್ತಾರೆ. ಕಡಿಮೆ ಕೂಲಿಗೆ ದಿನವಿಡೀ ದುಡಿಸಿಕೊಂಡರೂ ಕೇಳುವವರಿಲ್ಲ. ಅವರಿಗೂ ನೆಮ್ಮದಿಯ ಜೀವನ ಸಿಗುವಂತಾಗಲಿ. ಸರ್ಕಾರ ಮೂಲ ಸೌಕರ್ಯಗಳನ್ನು ಒಂದೆಡೆ ಕಲ್ಪಿಸಿದರೆ, ವಲಸೆ ಹೋಗುವುದು ತಪ್ಪಲಿದೆ. 

ಶಿವಕುಮಾರ್, ದಾವಣಗೆರೆ

---

ಅನುಕಂಪದಿಂದ ಪ್ರಯೋಜನವಿಲ್ಲ

ವಲಸೆ ಕಾರ್ಮಿಕರು ವಸತಿ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯಗಳಿಂದ ವಂಚಿತರಾಗಿ ಜೀವನ ನಡೆಸುತ್ತಾರೆ. ಸಂಘಟಿತರಾಗಲು ಇವರು ಬಯಸುವುದಿಲ್ಲ. ಇವರನ್ನು ಸಂಘಟಿತರನ್ನಾಗಿ ಮಾಡಿ, ವ್ಯವಸ್ಥೆಯ ಅನ್ಯಾಯಗಳ ವಿರುದ್ಧ ನಿಲ್ಲುವಂತೆ ಮಾಡಬೇಕು. ವಲಸೆ ಕಾರ್ಮಿಕರಿಗೆ ಕೇವಲ ಅನುಕಂಪ ತೋರುವುದರಿಂದ ಸಮಾಜಕ್ಕೆ ಏನೂ ಪ್ರಯೋಜನವಿಲ್ಲ.

ಅಮ್ಮಪ್ಪ, ಯಾದಗಿರಿ

---

ಅನುದಾನ ನೀಡದ ದುರಾಡಳಿತ

ಸಂಕಷ್ಟಗಳ ಸರಮಾಲೆಯಲ್ಲಿ ಜೀವನದ ಬಂಡಿ ಎಳೆಯುವ ವಲಸೆ ಕಾರ್ಮಿಕರಿಗೆ ದುಡಿಮೆಗೆ ತಕ್ಕ ದುಡ್ಡು ಸಿಗದು. ವಾಸಕ್ಕೆ ಸೂಕ್ತ ನೆಲೆ ಸಿಗುವುದಿಲ್ಲ. ಮಕ್ಕಳ ಶಿಕ್ಷಣಕ್ಕೆ ಅವಕಾಶ ಇರುವುದಿಲ್ಲ. ಇಂತಹ ಕುಟುಂಬಗಳಲ್ಲಿನ ಹೆಣ್ಣು ಮಕ್ಕಳ ನರಳಾಟ ಹೇಳತೀರದು. ಇವರ ಪರ ನಿಲ್ಲಬೇಕಾದ ಇಲಾಖೆಗಳು ಕೈಕಟ್ಟಿ ಕುಳಿತಿರುವುದು ದುರಂತ. ಮಧ್ಯವರ್ತಿಗಳಿಂದಾಗಿ ಸರ್ಕಾರದ ಯೋಜನೆಗಳು ಇವರ ಬಳಿಗೆ ಸಾಗುತ್ತಿಲ್ಲ. ಇವರ ಸಂಕಷ್ಟಕ್ಕೆ ಮಿಡಿಯಲು ಸರ್ಕಾರದಲ್ಲಿ ಅನುದಾನದ ಕೊರತೆ ಎಂದರೆ ರಾಜ್ಯದಲ್ಲಿ ಎಂತಹ ದುರಾಡಳಿತ?

ಪ್ರಭಾವತಿ, ಹುಬ್ಬಳ್ಳಿ

---

ವಲಸಿಗರನ್ನು ತಲುಪದ ಯೋಜನೆ

ವಲಸೆ ಎಂಬುದು ಮೇಲ್ನೋಟಕ್ಕೆ ಸುಲಭವಾಗಿ ಕಂಡರೂ, ಅದರ ಪರಿಣಾಮಗಳು ಹಲವಾರು. ಬದುಕೇ ಕಷ್ಟವಾಗುವ ಇವರು ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಮತ್ತಷ್ಟು ಕುಗ್ಗಿ ಹೋಗುತ್ತಾರೆ. ಒಂದು ದೇಶ–ಒಂದು ಪಡಿತರ ಕೇಳಲು ಚೆನ್ನಾಗಿದೆ. ಆದರೆ, ಜ್ಞಾನ ಇಲ್ಲದ ಇವರಿಗೆ ಈ ಯೋಜನೆಗಳ ಫಲ ಸಿಗದ ಸಾಧ್ಯತೆಗಳೇ ಹೆಚ್ಚು. ರೂಪಿಸಿದ ಯೋಜನೆಗಳನ್ನು ತಲುಪಿಸುವ ಕೆಲಸ ಸರಿಯಾಗಿ ನಡೆಯಲಿ.

ರಮೇಶ, ಧಾರವಾಡ

---

ಆಹಾರಕ್ಕಾಗಿ ಅಲೆದಾಟ

ವಲಸಿಗರು ಹೆಚ್ಚಾಗುತ್ತಿರಲು ಸರ್ಕಾರಗಳೇ ಪರೋಕ್ಷ ಕಾರಣ. ಬಡಜನರು ಮೂರು ಹೊತ್ತಿನ ಆಹಾರಕ್ಕೆ ಅಲೆದಾಡುತ್ತಾರೆ ಎಂದರೆ ಇನ್ನೂ ಎಂತಹ ಸ್ಥಿತಿಯಲ್ಲಿದ್ದೇವೆ? ಸರ್ಕಾರಗಳು ದೇಶದ ಅಭಿವೃದ್ಧಿ ಎನ್ನುತ್ತಲೇ ಯೋಜನೆಗಳನ್ನು ಘೋಷಿಸುತ್ತಿವೆ. ಆದರೂ, ಒಪ್ಪೊತ್ತಿನ ಊಟಕ್ಕಾಗಿ ಅಲೆಮಾರಿ ಜೀವನ ಅನಿವಾರ್ಯ. ಮಧ್ಯವರ್ತಿ ಕುಳಗಳಿಂದ ಗ್ರಾಮೀಣ ಭಾಗಗಳಲ್ಲಿ ಅಭಿವೃದ್ಧಿ ಕಾಣಲಾಗುತ್ತಿಲ್ಲ. ಈ ವ್ಯವಸ್ಥೆಯೇ ಬದಲಾಗಬೇಕು.

ರೇಖಾ ಜಾವೂರ, ಬಾದಾಮಿ

--

ಬದುಕು ಬದಲಾಗಲಿ

ಸ್ವಾತಂತ್ರ್ಯ ನಂತರವೂ ದೇಶವನ್ನು ಅಭಿವೃದ್ಧಿಗೊಳಿಸಲು ಎಷ್ಟೋ ಯೋಜನೆಗಳು ಹೊರಬಂದವು. ಈ ಎಲ್ಲ ಯೋಜನೆಗಳಿಂದ ಬಡವರ, ವಲಸಿಗರ, ಶೋಷಿತರ ಬದುಕು ಬದಲಿಸಲು ಸಾಧ್ಯವಾಗಲಿಲ್ಲ‌. ಕೋಟಿಗಟ್ಟಲೆ ಬರುವ ಸಂಪತ್ತನ್ನು ನುಂಗುವಲ್ಲಿ ರಾಜಕೀಯ ವ್ಯಕ್ತಿಗಳು ಹಾಗೂ ಭ್ರಷ್ಟ ಅಧಿಕಾರಿಗಳು ಯಶಸ್ವಿಯಾದರು. ಬಡಜನರಿಗೆ ಕೆಲಸ ನೀಡುವಲ್ಲಿ ಸರ್ಕಾರಗಳು ಸೋತಿವೆ.

ಬಸವರಾಜ, ಚಿತ್ರದುರ್ಗ

---

ಸೂರು ಕಲ್ಪಿಸಿ, ಅಲೆದಾಟ ತಪ್ಪಿಸಿ

ಹಿಂದುಳಿದ ಗ್ರಾಮೀಣ ಭಾಗಗಳಲ್ಲಿ ಜೀವನ ನಡೆಸುವವರು ಕುಟುಂಬದ ನಿರ್ವಹಣೆಗಾಗಿ ವಲಸೆ ತೆರಳುವುದು ಅನಿವಾರ್ಯ. ಹಣಕ್ಕಾಗಿ ಅರಿವಿಲ್ಲದ ಊರುಗಳನ್ನು ಸುತ್ತುತ್ತಾ ಎಲ್ಲೂ ನೆಲೆ ಕಾಣಲು ಸಾಧ್ಯವಾಗುವುದಿಲ್ಲ. ಅವರ ದುಡಿಮೆಗೂ ಮತ್ತು ಕೈಸೇರುವ ಕಾಂಚಾಣಕ್ಕೂ ಅರ್ಥವೇ ಇರುವುದಿಲ್ಲ. ವಲಸಿಗರಿಗಾಗಿ ಸೂರು ಕಲ್ಪಿಸಿದರೆ, ನೆಮ್ಮದಿಯಿಂದಾದರೂ ನಿದ್ರಿಸುತ್ತಾರೆ.

ಮಲ್ಲಿಕಾರ್ಜುನ, ವಿಜಯಪುರ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು