ಮಂಗಳವಾರ, ಜೂನ್ 15, 2021
25 °C
ಇದು ಅತ್ಯಂತ ಗಂಭೀರ ವಿಷಯ - ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

ಉತ್ತರ ಪತ್ರಿಕೆ ಬದಲು: ವರದಿ ನೀಡಲು ಆಯುಕ್ತರಿಗೆ ಎಸ್‌. ಸುರೇಶ್‌ಕುಮಾರ್‌ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

S Suresh kumar

ಬೆಂಗಳೂರು: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ತರೀಪುರ ಗ್ರಾಮದ ವಿನಾಯಕ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಅಶ್ವಿನಿ ಅವರ ಉತ್ತರ ಪತ್ರಿಕೆಗಳ ಹಾಳೆಗಳು ಬದಲಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌, ತಕ್ಷಣ ಈ ಕುರಿತು ಪರಿಶೀಲಿಸಿ ವರದಿ ನೀಡುವಂತೆ ಇಲಾಖೆಯ ಆಯುಕ್ತರಿಗೆ ಸೂಚಿಸಿದ್ದಾರೆ.

‘ಪ್ರಜಾವಾಣಿ’ಯ ಮಂಗಳವಾರದ ಸಂಚಿಕೆಯಲ್ಲಿ ಪ್ರಕಟಗೊಂಡ ‘ಉತ್ತರ ಪತ್ರಿಕೆಯ ಹಾಳೆಗಳೇ ಬದಲು’ ವರದಿಗೆ ಪ್ರತಿಕ್ರಿಯಿಸಿರುವ ಸಚಿವರು, ‘ಇದು ಅತ್ಯಂತ ಗಂಭೀರ ವಿಷಯ. ಇದಕ್ಕೆ ಕಾರಣರಾದವರ ವಿರುದ್ಧ ತನಿಖೆ ಮಾಡಿ ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು’ ಎಂದೂ ತಿಳಿಸಿದ್ದಾರೆ.

ಇದನ್ನೂ ಓದಿ: 

ಈ ಬಾರಿ ಪರೀಕ್ಷೆಯ ಇಂಗ್ಲಿಷ್‌ ವಿಷಯದಲ್ಲಿ 89 ಅಂಕಗಳನ್ನು ಪಡೆದಿರುವ ಅಶ್ವಿನಿಗೆ, ಕನ್ನಡದಲ್ಲಿ 125ಕ್ಕೆ ಕೇವಲ 4 ಅಂಕಗಳು ಬಂದಿವೆ. ಸಮಾಜ ವಿಜ್ಞಾನದಲ್ಲಿ 7, ಹಿಂದಿ 33, ಗಣಿತ 48 ಹಾಗೂ ವಿಜ್ಞಾನದಲ್ಲಿ 51 ಅಂಕಗಳು ಸಿಕ್ಕಿವೆ. ತರಗತಿಯಲ್ಲಿ ಪ್ರತಿಭಾವಂತೆ ಎನಿಸಿಕೊಂಡಿದ್ದ ಈ ವಿದ್ಯಾರ್ಥಿನಿಗೆ ತೀರಾ ಕಡಿಮೆ ಅಂಕಗಳು ಬಂದಿದ್ದರಿಂದ ಅನುಮಾನಗೊಂಡು ಉತ್ತರ ಪತ್ರಿಕೆಗಳ ನಕಲು ಪ್ರತಿಗೆ ಅರ್ಜಿ ಹಾಕಿ, ತರಿಸಿ ನೋಡಿದಾಗ ಉತ್ತರ ಪತ್ರಿಕೆಯ ಬಹುತೇಕ ಹಾಳೆಗಳು ಬದಲಾಗಿರುವುದು ತಿಳಿದುಬಂದಿದೆ.

‘ಕನ್ನಡ ಮತ್ತು ಸಮಾಜ ವಿಜ್ಞಾನ ವಿಷಯಗಳ ಉತ್ತರ ಪತ್ರಿಕೆಗಳ ಮೊದಲ ಪುಟ ಹೊರತುಪಡಿಸಿ ಉಳಿದ ಪುಟಗಳನ್ನು ಬದಲಿಸಲಾಗಿದೆ. ಹಿಂದಿ ಪತ್ರಿಕೆಯ ಕೆಲವು ಪುಟಗಳು ಬದಲಾಗಿವೆ. ಅಶ್ವಿನಿ ಅವರ ಉತ್ತರ ಪತ್ರಿಕೆಗಳ ಹಾಳೆಗಳನ್ನು ತೆಗೆದು ಬೇರೆಯವರ ಉತ್ತರ ಪತ್ರಿಕೆಯ ಹಾಳೆಗಳನ್ನು ಸೇರಿಸಲಾಗಿದೆ’ ಎಂದು ಮುಖ್ಯಶಿಕ್ಷಕ ನಂಜೇಗೌಡ ತಿಳಿಸಿದ್ದಾರೆ.

‘ಅಶ್ವಿನಿ ಶಾಲೆಗೇ ಪ್ರತಿಭಾವಂತೆ. ಮೂರು ವಿಷಯಗಳಲ್ಲಿ ಅನುತ್ತೀರ್ಣರಾಗಿರುವುದು ಅಚ್ಚರಿ ಮೂಡಿಸಿದೆ. ಎಲ್ಲಿ ಲೋಪವಾಗಿದೆ ಎಂಬುದನ್ನು ಪರೀಕ್ಷಾ ಮಂಡಳಿ ತಿಳಿಸಬೇಕು. ವಿದ್ಯಾರ್ಥಿನಿಗೆ ನ್ಯಾಯ ಕೊಡಿಸಬೇಕು’ ಎಂದು ಪೋಷಕರು ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು