ಭಾನುವಾರ, ಆಗಸ್ಟ್ 14, 2022
28 °C

ಕಾಂಗ್ರೆಸ್‌ನಲ್ಲಿ ಮಧ್ಯಂತರ ಚುನಾವಣೆ ಲೆಕ್ಕಾಚಾರ:ಕಾರ್ಯಕರ್ತರ ಸನ್ನದ್ಧತೆಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಮುನ್ನೆಲೆಗೆ ಬಂದಿರುವ ನಡುವೆಯೇ, ‘ಮಧ್ಯಂತರ ಚುನಾವಣೆ’ ಸಾಧ್ಯತೆಯ ಲೆಕ್ಕಾಚಾರದಲ್ಲಿರುವ ಕಾಂಗ್ರೆಸ್‌ ಹೈಕಮಾಂಡ್‌, ಪಕ್ಷದ ಕಾರ್ಯಕರ್ತರನ್ನು ಸನ್ನದ್ಧಗೊಳಿಸುವಂತೆ ರಾಜ್ಯ ಮುಖಂಡರಿಗೆ
ಸೂಚಿಸಿದೆ.

‘ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟ ಯಾವ ಹಂತ ತಲುಪಲಿದೆಯೋ’ ಎಂಬ ಜಿಜ್ಞಾಸೆ ಮುಂದುವರಿದಿದ್ದು, ಚುನಾವಣೆಯ ಸ್ಪರ್ಧಾಕಾಂಕ್ಷಿಗಳು, ಮುಖಂಡರು, ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಕ್ರಿಯವಾಗುವಂತೆ ಸೂಚಿಸಲಾಗಿದೆ ಎಂದು ಕಾಂಗ್ರೆಸ್‌ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಕೊರೊನಾ ಹಾಗೂ ಲಾಕ್‌ಡೌನ್‌ನಿಂದಾಗಿ ಎದುರಾಗಿರುವ ಸಂಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸುವ ಮೂಲಕ ಭರವಸೆ ಮೂಡಿಸುವಂತೆಯೂ ಸೂಚಿಸಲಾಗಿದೆ ಎಂದು ಪಕ್ಷದಲ್ಲಿ ಪ್ರಮುಖರಾಗಿರುವ ರಾಜ್ಯ ಮುಖಂಡರೊಬ್ಬರು ಹೇಳಿದರು.

ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಬಡ ಜನತೆಗೆ, ಕೊರೊನಾದಿಂದ ಮೃತಪಟ್ಟವರ ಕುಟುಂಬಗಳಿಗೆ ನೆರವಿನ ಹಸ್ತ ಚಾಚಬೇಕು. ದಿನಸಿ, ಬಟ್ಟೆ, ಪುಸ್ತಕ ಮತ್ತಿತರ ಅಗತ್ಯ ವಸ್ತುಗಳ ಉಚಿತ ವಿತರಣಾ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ವರಿಷ್ಠರು ಮೌಖಿಕವಾಗಿ ಆದೇಶಿಸಿದ್ದಾರೆ ಎಂದು ಅವರು ವಿವರಿಸಿದರು.

ಬಿಜೆಪಿ ಆಡಳಿತದ ಅವಧಿಯಲ್ಲಿ ದೇಶದಾದ್ಯಂತ ನಿರುದ್ಯೋಗ ಸಮಸ್ಯೆ ತಲೆದೋರಿದೆ. ಪೆಟ್ರೋಲ್‌– ಡೀಸೆಲ್‌ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಇಂಥ ಹತ್ತು– ಹಲವು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವುದಲ್ಲದೆ, ಯುವ ಜನರನ್ನು ಪಕ್ಷದತ್ತ ಸೆಳೆದು, ಜಾಗೃತಿ ಮೂಡಿಸಬೇಕು ಎಂಬ ಸಂದೇಶವನ್ನೂ ರವಾನಿಸಲಾಗಿದೆ ಎಂದು ಅವರು ಹೇಳಿದರು.

ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಅಂತರದಲ್ಲಿ ಸೋಲು ಎದುರಾಗಿರುವ ಕ್ಷೇತ್ರಗಳಲ್ಲಿ ಬಿಜೆಪಿ ವಿರೋಧಿ ಅಭಿಯಾನವನ್ನೇ ಹಮ್ಮಿಕೊಳ್ಳುವಂತೆಯೂ ತಿಳಿಸಿದ್ದಾರೆ ಎಂದು ಅವರು ವಿವರಿಸಿದರು.

ಈ ಹಿಂದೆ ಕಾಂಗ್ರೆಸ್‌ ಪಕ್ಷ ನೀಡಿರುವ ಜನಪರ ಆಡಳಿತ ಹಾಗೂ ಕಾರ್ಯ ವೈಖರಿಯನ್ನು ಜನ ನೆನಪಿಸಿಕೊಳ್ಳುತ್ತಿದ್ದಾರೆ. ಪಕ್ಷವು ಮತ್ತೆ ಕರ್ನಾಟಕದಲ್ಲಿ ಅಧಿಕಾರ ಹಿಡಿಯುವ ಸಂಬಂಧ ಕೆಲವೇ ದಿನಗಳಲ್ಲಿ ಎಐಸಿಸಿಯ ನಿಯೋಗವನ್ನು ರಾಜ್ಯಕ್ಕೆ ಕಳುಹಿಸುವ ಚಿಂತನೆ ನಡೆದಿದೆ ಎಂದು ಅವರು
ಹೇಳಿದರು.

ವಿಮುಖರಾಗುತ್ತಿರುವ ಜನ: ನಿರಂತರ ಕಚ್ಚಾಟ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಭಿವೃದ್ಧಿ ಕಾರ್ಯದಲ್ಲಿ ಹಿನ್ನಡೆ, ಕೊರೊನಾದಿಂದ ರಾಜ್ಯವೇ ತತ್ತರಿಸಿದರೂ ಗಮನಹರಿಸದ ಬಿಜೆಪಿಯಿಂದಾಗಿ ಜನತೆ ರೋಸಿ ಹೋಗಿದ್ದು, ಆ ಪಕ್ಷದಿಂದ ವಿಮುಖರಾಗುತ್ತಿದ್ದಾರೆ. ಉತ್ತಮ ಆಡಳಿತ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂಬುದು ಜನರ ಅಭಿಪ್ರಾಯವಾಗಿದೆ. ಅವರ ಆಶೋತ್ತರಗಳಿಗೆ ಸ್ಪಂದಿಸಲು ಪಕ್ಷ ಕಾರ್ಯಕರ್ತರನ್ನು ಹುರಿದುಂಬಿಸುತ್ತಿದೆ ಎಂದೂ ಅವರು ಒತ್ತಿ
ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು