ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಸೇರುವ ಇಂಗಿತ; ಜಿ.ಟಿ.ದೇವೇಗೌಡ ಚರ್ಚಿಸಿದ್ದು ನಿಜ– ಸಿದ್ದರಾಮಯ್ಯ

Last Updated 31 ಆಗಸ್ಟ್ 2021, 11:23 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌ ತೆಕ್ಕೆ ಸೇರಲು ಮುಂದಾಗಿರುವ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್‌ ಶಾಸಕ ಜಿ.ಟಿ. ದೇವೇಗೌಡ, ಈ ಬಗ್ಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಜಿ.ಟಿ. ದೇವೇಗೌಡ ಜೊತೆ ಅವರ ಮಗ ಜಿ.ಡಿ. ಹರೀಶಗೌಡ ಕೂಡಾ ಕಾಂಗ್ರೆಸ್‌ ಸೇರುವುದು ಬಹುತೇಕ ಖಚಿತವಾಗಿದೆ.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡುವ ವೇಳೆ ಈ ವಿಷಯವನ್ನು ಖಚಿತಪಡಿಸಿದ ಸಿದ್ದರಾಮಯ್ಯ, ‘ಕಾಂಗ್ರೆಸ್‌ ಸೇರುವ ಇಂಗಿತ ವ್ಯಕ್ತಪಡಿಸಿ ಜಿ.ಟಿ.ದೇವೇಗೌಡ ನಮ್ಮಿಬ್ಬರ ಜೊತೆ ಚರ್ಚಿಸಿದ್ದು ನಿಜ. ಈ ಬಗ್ಗೆ ಪಕ್ಷದ ವರಿಷ್ಠರ ಜೊತೆಗೆ ಚರ್ಚಿಸುವುದಾಗಿ ಅವರಿಗೆ ತಿಳಿಸಿದ್ದೇನೆ’ ಎಂದರು.

‘ಈ ವಿಚಾರದಲ್ಲಿ ಸದ್ಯಕ್ಕೆ ನಡೆದಿರುವುದು ಇಷ್ಟೇ ಬೆಳವಣಿಗೆ. ಹೈಕಮಾಂಡ್ ನಾಯಕರ ಜೊತೆ ಚರ್ಚಿಸಿದ ಬಳಿಕ ಮುಂದಿನ ಬೆಳವಣಿಗೆ ತಿಳಿಸುತ್ತೇನೆ‘ ಎಂದೂ ಹೇಳಿದರು.

ಜೆಡಿಎಸ್‌ ತೊರೆಯುವುದಾಗಿ ಆ. 24ರಂದೇ ಜಿ.ಟಿ.ದೇವೇಗೌಡ ಬಹಿರಂಗವಾಗಿಯೇ ಹೇಳಿದ್ದರು. ಅದೇ ವೇಳೆ, ಕಾಂಗ್ರೆಸ್‌ ಸೇರುವ ಇಂಗಿತವನ್ನು ವ್ಯಕ್ತಪಡಿಸಿದ್ದರು.

2018ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು 36,042 ಮತಗಳ ಅಂತರದಲ್ಲಿ ಸೋಲಿಸಿದ್ದ ಜಿ.ಟಿ.ದೇವೇಗೌಡ, ಇದೀಗ ಅವರ ಮೂಲಕವೇ ಪಕ್ಷ ಸೇರ್ಪಡೆಗೆ ಸಜ್ಜಾಗಿದ್ದಾರೆ. ವಿಪರ್ಯಾಸವೆಂದರೆ, ಸಿದ್ದರಾಮಯ್ಯನವರು 2006ರಲ್ಲಿ ಕಾಂಗ್ರೆಸ್‌ ಸೇರಿದಾಗ ಅವರೊಂದಿಗೆ ಹೋಗದೇ ಜೆಡಿಎಸ್‌ನಲ್ಲೇ ಉಳಿದಿದ್ದರು.

1998ರಲ್ಲಿ ನಡೆದ ವಿಧಾನಸಭೆ ಉಪಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಜನತಾದಳ ಅಭ್ಯರ್ಥಿಯಾಗಿ ಆಯ್ಕೆಯಾಗಿ, ಅದೇ ಕ್ಷೇತ್ರದಿಂದ 2004ರಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಗೆದ್ದಿದ್ದರು. 2008ರಲ್ಲಿ ಬಿಜೆಪಿ ಸೇರಿ ಸ್ಪರ್ಧಿಸಿ ಮೂರನೇ ಸ್ಥಾನಕ್ಕೆ ಇಳಿದಿದ್ದರು. 2013ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿಯೇ ಸ್ಪರ್ಧಿಸಿದ್ದ ಅವರು ಕಾಂಗ್ರೆಸ್‌ನ ಎಂ. ಸತ್ಯನಾರಾಯಣ ಅವರನ್ನು ಸೋಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT