ಮಂಗಳವಾರ, ಜೂನ್ 15, 2021
22 °C

ರಾಜ್ಯದಲ್ಲಿ ಉತ್ಪಾದಿಸುವ ಆಮ್ಲಜನಕ ಬಳಕೆಗೆ ಕೇಂದ್ರದ ತಾತ್ವಿಕ ಒಪ್ಪಿಗೆ: ಶೆಟ್ಟರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ರಾಜ್ಯದಲ್ಲಿ ಉತ್ಪಾದನೆ ಆಗುವ ಆಮ್ಲಜನಕವನ್ನು ರಾಜ್ಯದಲ್ಲೇ ಬಳಕೆ ಮಾಡಲು ಕೇಂದ್ರ ಸರ್ಕಾರ ತಾತ್ವಿಕವಾಗಿ ಒಪ್ಪಿಗೆ ನೀಡಿದೆ. ಶೀಘ್ರದಲ್ಲಿ ಅಧಿಕೃತ ಆದೇಶ ಹೊರಬೀಳಲಿದೆ’ ಎಂದು ರಾಜ್ಯದ ಆಮ್ಲಜನಕ ಉತ್ಪಾದನೆ ಹಾಗೂ ಪೂರೈಕೆಯ ‘ಉಸ್ತುವಾರಿ’ಯನ್ನೂ ವಹಿಸಿಕೊಂಡಿರುವ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ತಿಳಿಸಿದರು.

ಆಮ್ಲಜನಕ ಉತ್ಪಾದನೆ ಹಾಗೂ ಸರಬರಾಜು ಕುರಿತಂತೆ ಅಧಿಕಾರಿಗಳ ಜೊತೆ ಬುಧವಾರ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ‘ರಾಜ್ಯದಲ್ಲಿ ಉತ್ಪಾದನೆ ಆಗುವ ಆಮ್ಲಜನಕವನ್ನು ರಾಜ್ಯದಲ್ಲೇ ಬಳಸಿಕೊಳ್ಳಲು ಅವಕಾಶ ನೀಡುವಂತೆ ಕೇಂದ್ರ ಸಚಿವರಾದ ಪೀಯೂಷ್‌ ಗೋಯೆಲ್‌, ಪ್ರಲ್ಹಾದ ಜೋಶಿ ಮತ್ತು ಸದಾನಂದಗೌಡ ಅವರ ಜೊತೆ ನಡೆಸಿದ ಮಾತುಕತೆಗೆ ಫಲ ದೊರೆತಿದೆ’ ಎಂದರು.

‘ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬಹಳಷ್ಟು ನೆರವು ದೊರಕುತ್ತಿದೆ. ಕೇಂದ್ರ ಸರ್ಕಾರ ಬಹ್ರೇನ್‌ ಮತ್ತು ಕುವೈತ್‌ನಿಂದ 180 ಟನ್‌ ಆಮ್ಲಜನಕವನ್ನು ರಾಜ್ಯಕ್ಕೆ ನೀಡಿದೆ. ಅಲ್ಲದೆ, ರೈಲು ಮೂಲಕ ಮೇ 11 ರಂದು ಜಮ್‌ಶೆಡ್‌ಪುರದಿಂದ 120 ಟನ್‌, ಮೇ 15ರಂದು ಕಳಿಂಗನಗರದಿಂದ 180 ಟನ್‌ ಆಮ್ಲಜನಕ ಸರಬರಾಜು ಆಗಿದೆ. ಮುಂದಿನ ಒಂದು ವಾರದಲ್ಲಿ ಸುಮಾರು 320 ಟನ್‌ ದ್ರವೀಕೃತ ಆಮ್ಲಜನಕ ರವಾನೆಯಾಗುವ ನಿರೀಕ್ಷೆ ಇದೆ’ ಎಂದರು.

‘ರಾಜ್ಯಕ್ಕೆ 200 ಸಿಲಿಂಡರ್‌ಗಳನ್ನು ಕೇಂದ್ರ ಸರ್ಕಾರ ನೀಡಿದೆ. ರಾಜ್ಯದಿಂದ ತೆಲಂಗಾಣಕ್ಕೆ 145 ಟನ್‌, ಆಂಧ್ರಪ್ರದೇಶಕ್ಕೆ 63 ಟನ್‌ ಮತ್ತು ಮಹಾರಾಷ್ಟ್ರಕ್ಕೆ 40 ಟ್‌ನ್ ಆಮ್ಲಜನಕ ರವಾನೆ ಮಾಡಲಾಗುತ್ತಿದೆ. ಇದನ್ನು ರಾಜ್ಯದಲ್ಲೇ ಬಳಸಿಕೊಳ್ಳಲು ಅವಕಾಶ ಮಾಡಿಕೊಡಲು ಕೇಂದ್ರ ಸರ್ಕಾರ ತಾತ್ವಿಕವಾಗಿ ಒಪ್ಪಿಗೆ ನೀಡಿದೆ’ ಎಂದು ಹೇಳಿದರು.

‘ಆಯಾ ಜಿಲ್ಲೆಗಳಲ್ಲಿರುವ ಸಕ್ರಿಯ ಪ್ರಕರಣಗಳ ಆಧಾರದ ಮೇಲೆ ಆಮ್ಲಜನಕ  ಹಂಚಿಕೆ ಮಾಡಲಾಗುತ್ತಿದೆ. ರಾಜ್ಯಕ್ಕೆ 1,400 ಟನ್‌ನಿಂದ 1,700 ಟನ್‌ಗಳಷ್ಟು ಆಮ್ಲಜನಕದ ಅವಶ್ಯಕತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ. ಏಳು ದಿನಗಳಲ್ಲಿ ಸರಾಸರಿ 880 ಟನ್‌ನಷ್ಟು ಬಳಕೆ ಆಗಿದೆ. ಅಲ್ಲದೆ, ಮಂಗಳವಾರ (ಮೇ 18) 66.7 ಟನ್‌ ಕೊರತೆ ಉಂಟಾಗಿದೆ’ ಎಂದರು.

ಉತ್ಪಾದನೆ ಹೆಚ್ಚಿಸಲು ಕ್ರಮ:‘ರಾಜ್ಯದಲ್ಲಿ ಆಮ್ಲಜನಕ ಉತ್ಪಾದನೆ ಹಾಗೂ ನೈಟ್ರೋಜನ್‌ ಪಿಎಸ್‌ಎ ಉತ್ಪಾದನಾ ಘಟಕಗಳನ್ನು ಆಮ್ಲಜನಕ ಉತ್ಪಾದನೆಗೆ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕೋಲಾರ ಮತ್ತು ಯಾದಗಿರಿ ಜಿಲ್ಲೆಯಲ್ಲಿ 1,000 ದ್ರವೀಕೃತ ಆಮ್ಲಜನಕ ಉತ್ಪಾದನಾ ಘಟಕ ಆರಂಭಿಸಲಾಗಿದೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಸಾರ್ವಜನಿಕ ಉದ್ದಿಮೆಗಳ ಸಹಕಾರದಿಂದ ಒಟ್ಟಾರೆಯಾಗಿ 104 ಆಮ್ಲಜನಕ ಉತ್ಪಾದನಾ ಘಟಕಗಳನ್ನು ಆರಂಭಿಸುತ್ತಿದ್ದೇವೆ. ರಾಯಚೂರಿನಲ್ಲಿ ನೈಟ್ರೋಜನ್‌ ಪಿಎಸ್‌ಎ ಉತ್ಪಾದನಾ ಘಟಕವನ್ನು ಪರಿವರ್ತಿಸಿ ಜಿಲ್ಲಾ ಆಸ್ಪತ್ರೆಗೆ ಅಳವಡಿಸುವ ಕಾರ್ಯ ಅಂತಿಮ ಹಂತದಲ್ಲಿದೆ’ ಎಂದು ಅವರು ವಿವರಿಸಿದರು.

ಇದನ್ನೂ ಓದಿ... ಲಾಕ್‌ಡೌನ್‌: ₹ 1,250 ಕೋಟಿ ಪರಿಹಾರ ಪ್ಯಾಕೇಜ್ ಘೋಷಿಸಿದ ಸಿಎಂ ಯಡಿಯೂರಪ್ಪ

ನಿಷ್ಕ್ರೀಯ ಘಟಕಗಳ ಪುನರುಜ್ಜೀವನ: ‘ನಿಷ್ಕ್ರೀಯವಾಗಿರುವ ಆಮ್ಲಜನಕ ಉತ್ಪಾದನಾ ಘಟಕಗಳ ಪುನರುಜ್ಜೀವನ ಕೆಲಸ ನಡೆಯುತ್ತಿದೆ. ರಾಯಚೂರಿನ ಕೆಪಿಸಿಎಲ್‌ ಬಾಟ್ಲಿಂಗ್‌ ಆಕ್ಸಿಜನ್‌ ಪ್ಲಾಂಟ್‌ ಹಾಗೂ ವಿಐಎಸ್‌ಎಲ್‌ಗೆ ಅಗತ್ಯವಿರುವ ಕಂಪ್ರೆಸ್ಸರ್‌ ಖರೀದಿಸುವ ಕೆಲಸವನ್ನು ಚುರುಕುಗೊಳಿಸುವಂತೆ ಸೂಚನೆ ನೀಡಲಾಗಿದೆ’ ಎಂದರು.

ಆಕ್ಸಿಜನ್‌ ಜನರೇಟರ್‌: ‘ಕೇಂದ್ರ ಸರ್ಕಾರದ ವತಿಯಿಂದ ರಾಜ್ಯಕ್ಕೆ 28, ರಾಜ್ಯ ಸರ್ಕಾರ ವತಿಯಿಂದ 40, ಎನ್‌ಎಚ್‌ಎಐ – ಡಿಆರ್‌ಡಿಓ ಸಹಕಾರದಲ್ಲಿ 26 ಆಕ್ಸಿಜನ್‌ ಜನರೇಟರ್‌ಗಳನ್ನು ರಾಜ್ಯದಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.

ಆಕ್ಸಿಜನ್‌ ಕಾನ್ಸನ್ಟ್ರೇಟರ್‌ಗಳು: ‘ರಾಜ್ಯಕ್ಕೆ 60 ಸಾವಿರ ಆಕ್ಸಿಜನ್‌ ಕಾನ್ಸನ್‌ಟ್ರೇಟರ್‌ಗಳ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. 3 ಸಾವಿರ ಕಾನ್ಸನ್ಟ್ರೇಟರ್‌ಗಳ ಖರೀದಿಗೆ ರಾಜ್ಯ ಸರ್ಕಾರ ಈಗಾಗಲೇ ಟೆಂಡರ್‌ ನೀಡಿದೆ. ಕೇಂದ್ರ ಸರ್ಕಾರ 800 ಕಾನ್ಸನ್‌ಟ್ರೇಟರ್‌ಗಳನ್ನು ನೀಡಿದ್ದು ಹಂತ ಹಂತವಾಗಿ ನೀಡುವ ನಿರೀಕ್ಷೆ ಇದೆ’ ಎಂದೂ ಶೆಟ್ಟರ್‌ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು