ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಕ್ಕೂರು: 75 ಎಕರೆ ಖಾಸಗಿಗೆ?

ವೈಮಾನಿಕ ತರಬೇತಿ ಶಾಲೆಯ ₹1,500 ಕೋಟಿ ಮೌಲ್ಯದ ಜಮೀನು l ರಾಜ್ಯಪಾಲರಿಗೆ ದೂರು
Last Updated 16 ಸೆಪ್ಟೆಂಬರ್ 2022, 19:08 IST
ಅಕ್ಷರ ಗಾತ್ರ

ಬೆಂಗಳೂರು: ಜಕ್ಕೂರಿನಲ್ಲಿರುವ ಸರ್ಕಾರಿ ವೈಮಾನಿಕ ತರಬೇತಿ ಶಾಲೆಗೆ ಸೇರಿದ ಸುಮಾರು ₹1,500 ಕೋಟಿ ಮೌಲ್ಯದ 75 ಎಕರೆ ಜಾಗವನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದ (ಪಿಪಿಪಿ) ಹೆಸರಿನಲ್ಲಿ ಖಾಸಗಿಯವರಿಗೆ ವಹಿಸಲು ಕ್ರೀಡಾ ಇಲಾಖೆ ಸಿದ್ಧತೆ ನಡೆಸಿದೆ ಎಂಬ ದೂರು ರಾಜ್ಯಪಾಲರಿಗೆ ಸಲ್ಲಿಕೆಯಾಗಿದೆ.

ಬಡ ಮತ್ತು ಮಧ್ಯಮ ವರ್ಗದವರಿಗೆ ವಿಮಾನ ಚಾಲನೆ ತರಬೇತಿ (ಪೈಲಟ್‌) ನೀಡಬೇಕೆಂಬ ಆಶಯದಿಂದ ಮೈಸೂರು ಮಹಾರಾಜರು 211 ಎಕರೆ ವಿಸ್ತೀರ್ಣದ ಈ ಜಾಗವನ್ನು ಸರ್ಕಾರಕ್ಕೆ ದಾನವಾಗಿ ನೀಡಿದ್ದರು. ಈ ಜಾಗದಲ್ಲಿ 25 ಎಕರೆ (1,01,196 ಚದರ ಮೀಟರ್‌) ಯಷ್ಟು ಜಾಗವನ್ನು ಏರೋ ಕ್ಲಬ್ ಏರಿಯಾ ಹಾಗೂ 50 (2,02,358 ಚದರ ಮೀಟರ್‌) ಎಕರೆಯನ್ನು ಕಮರ್ಷಿಯಲ್ ಕಾಂಪ್ಲೆಕ್ಸ್ ಏರಿಯಾ ಎಂದು ಅಭಿವೃದ್ಧಿ ಪಡಿಸಲು ಕ್ರೀಡೆ ಮತ್ತು ಯುವಜನ ಸಬಲೀಕರಣ ಇಲಾಖೆ ಪ್ರಸ್ತಾವ ಸಿದ್ಧಪಡಿಸಿದೆ ಎಂದು ಗೊತ್ತಾಗಿದೆ.

ಬಹುಕೋಟಿ ರೂಪಾಯಿ ಬೆಲೆಬಾಳುವ ಈ ಜಾಗವನ್ನು ಪಿಪಿಪಿ ಮಾದರಿಯಲ್ಲಿ ಖಾಸಗಿಯವರಿಗೆ ಹಸ್ತಾಂತರಿಸುವ ಯತ್ನವನ್ನು ತಡೆಯುವಂತೆ ರಾಜ್ಯಪಾಲರಿಗೆ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ದಾಖಲೆ ಸಹಿತ ದೂರನ್ನೂ ಸಲ್ಲಿಸಿದೆ. ಈ ಜಾಗದಲ್ಲಿ ಪ್ರತಿ ಎಕರೆ ಜಮೀನಿನ ಮಾರುಕಟ್ಟೆ ದರ ಕನಿಷ್ಠ ₹20 ಕೋಟಿಯಷ್ಟಿದೆ.

ಯೋಜನೆಗೆ ಸಿದ್ಧತೆ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಬಳ್ಳಾರಿ ರಸ್ತೆಯಲ್ಲಿನ ಈ ಪ್ರದೇಶ ಬಹುಬೇಡಿಕೆ ಹೊಂದಿದೆ. ಮೇಲ್ಸೇತುವೆ ನಿರ್ಮಾಣವಾದ ಮೇಲೆ ಜಕ್ಕೂರು ಏರೋಡ್ರಂನಲ್ಲಿ ಸಣ್ಣ ವಿಮಾನಗಳ ಹಾರಾಟಕ್ಕೆ ಇದ್ದ ರನ್‌ವೇ ಉದ್ದ ಕುಗ್ಗಿತ್ತು. ಇದರಿಂದಾಗಿ, ವೈಮಾನಿಕ ಹಾರಾಟಕ್ಕೆ ಇದು ಸೂಕ್ತ ಪ್ರದೇಶವಲ್ಲ ಎಂಬ ಬಗ್ಗೆ ವೈಮಾನಿಕ ಶಾಲೆಯೇ ಪ್ರತಿಪಾದಿಸಿತ್ತು.

ಈ ಕಾರಣ ಮುಂದಿಟ್ಟು, ಆಯಕಟ್ಟಿನ ಜಾಗವನ್ನು ಬಳಸಿಕೊಂಡು ವಿವಿಧ ಉದ್ದೇಶದ ಹೆಸರಿನಲ್ಲಿ ಜಂಟಿಯಾಗಿ ಅಭಿವೃದ್ಧಿಪಡಿಸಿ, ಸರ್ಕಾರಕ್ಕೆ ನೀಡುವುದಾಗಿ ಖಾಸಗಿ ಕಂಪೆನಿಗಳು ಮುಂದೆ ಬಂದಿದ್ದವು. ಈ ಯೋಜನೆಯ ರೂಪುರೇಷೆ ಸಿದ್ಧಪಡಿಸಿಕೊಡುವಂತೆ ಕ್ರೀಡಾ ಇಲಾಖೆಯು ‘ಕ್ಯಾಡ್
(ಸಿಎಡಿಡಿ) ಫೋರಂ’ ಸಂಸ್ಥೆಯನ್ನು ಸಮಾಲೋಚಕರಾಗಿ ನಿಯೋಜಿಸಿತ್ತು. ಈ ಸಂಸ್ಥೆ ಸಿದ್ಧ‍ಪಡಿಸಿರುವ ಪ್ರಸ್ತಾವವನ್ನು ದೂರಿನಲ್ಲಿ ಲಗತ್ತಿಸಲಾಗಿದೆ.

‘ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುವ ಬಗ್ಗೆ ಕ್ಯಾಡ್ ಸಂಸ್ಥೆ ಯೋಜನಾ ವರದಿ ಸಲ್ಲಿಸಿದೆ. ಈ ಸಂಬಂಧ ನಾಲ್ಕು ಸುತ್ತಿನ ಸಮಾಲೋಚನಾ ಸಭೆಗಳು ನಡೆದಿವೆ. ಪ್ರಸ್ತಾವ ಸರ್ಕಾರದ ಮುಂದಿದೆ. ಅದಕ್ಕೆ ಇನ್ನೂ ಒಪ್ಪಿಗೆ ದೊರೆತಿಲ್ಲ. ಯಾವುದೇ ಜಾಗವನ್ನು ಪಿಪಿಪಿ ಮಾದರಿಯಡಿ ಅಭಿವೃದ್ಧಿಪಡಿಸಬೇಕಾದರೆ ಮುಖ್ಯ ಕಾರ್ಯದರ್ಶಿ ನೇತೃತ್ವದ ಉನ್ನತ ಮಟ್ಟದ ಸಮಿತಿ ಒಪ್ಪಿಗೆ ನೀಡಬೇಕು. ಬಳಿಕ ಕಡತವು ಸಚಿವ ಸಂಪುಟದ ಮುಂದೆ ಸಲ್ಲಿಕೆಯಾಗಿ ಅನುಮೋದನೆ ಪಡೆಯಬೇಕು’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ರನ್‌–ವೇಗೆ ಜಾಗ ಇಲ್ಲ!

ಬಳ್ಳಾರಿ ರಸ್ತೆಯಲ್ಲಿ ಎತ್ತರಿಸಿದ ಮೇಲ್ಸೇತುವೆ ನಿರ್ಮಾಣವಾದ ಬಳಿಕ ರನ್‌–ವೇ ಉದ್ದ ಕುಗ್ಗಿದ್ದು, ತರಬೇತಿ ವಿಮಾನಗಳ ಹಾರಾಟಕ್ಕೆ ಅಡಚಣೆಯಾಗಿದೆ. ರನ್‌–ವೇ ಉದ್ದೇಶಕ್ಕೆ ಖಾಸಗಿ ಜಾಗ ಪಡೆಯುವ ಪ್ರಕ್ರಿಯೆಯನ್ನೂ ವೈಮಾನಿಕ ಶಾಲೆ ಕೈಬಿಟ್ಟಿದೆ.

ಮೇಲ್ಸೇತುವೆಯಿಂದಾಗಿ 950 ಮೀಟರ್‌ನಷ್ಟಿದ್ದ ರನ್‌ ಉದ್ದ 450 ಮೀಟರ್‌ಗೆ ಇಳಿಕೆಯಾಗಿತ್ತು. ಏರೋಡ್ರಂ ಉಳಿಸಿಕೊಳ್ಳುವ ಬಗ್ಗೆ 2014ರಲ್ಲಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಚರ್ಚೆ ನಡೆದಿತ್ತು. ಉಳಿದಿರುವ 450 ಮೀಟರ್ ರನ್ ವೇಯನ್ನು ಪೂರ್ವದ ಕಡೆಗೆ ಮತ್ತೆ 170 ಮೀಟರ್ ಉದ್ದಕ್ಕೆ ವಿಸ್ತರಿಸುವುದಕ್ಕಾಗಿ ಖಾಸಗಿ ಜಮೀನಿನನ್ನು ಸ್ವಾಧೀನಕ್ಕೆ ಪಡೆಯುವ ನಿರ್ಣಯ ಕೈಗೊಳ್ಳಲಾಗಿತ್ತು.

ರನ್‌–ವೇ ಉದ್ದವನ್ನು ವಿಸ್ತರಿಸಲು 3 ಎಕರೆ 14 ಗುಂಟೆ ಜಮೀನು ಅಗತ್ಯವಿತ್ತು. ಇದಕ್ಕಾಗಿ ಖಾಸಗಿ ಜಮೀನನ್ನು ಭೂಸ್ವಾಧೀನ ಪಡಿಸಿಕೊಳ್ಳುವ ಬದಲು, ಏರೋ ಮ್ಯೂಸಿಯಂ ನಿರ್ಮಿಸಲು ಉದ್ದೇಶಿಸಿರುವ ಜಮೀನಿನ ಭಾಗದಲ್ಲಿ ಲಭ್ಯ ಇರುವ ನಿವೇಶನ ವಿನಿಮಯ ಮಾಡಿಕೊಳ್ಳಲು ಶಾಲೆ ಮುಂದಾಗಿತ್ತು. ಆದರೆ, ಖಾಸಗಿಯವರು 10 ಎಕರೆ 23ಗುಂಟೆಯಲ್ಲಿ 3 ಎಕರೆ 14 ಗುಂಟೆ ನೀಡಲಾಗದು. ಪೂರ್ಣ ಜಮೀನು ಪಡೆಯುವುದಾದರೆ ಸಿದ್ಧ ಎಂದು ಪಟ್ಟು ಹಿಡಿದರು. ಈ ವಿಷಯದಲ್ಲಿ ಒಮ್ಮತಕ್ಕೆ ಬಾರದೇ ಇರುವುದರಿಂದ ಇಡೀ ಪ್ರಕ್ರಿಯೆಯನ್ನು ಕೈಬಿಡಲಾಗಿದೆ ಎಂದು 2019ರ ನವೆಂಬರ್‌ 19ರಂದೇ ಶಾಲೆಯ ನಿರ್ದೇಶಕರು ಆದೇಶ ಹೊರಡಿಸಿದ್ದರು.

ವಿಮಾನ ಹಾರಲು–ಇಳಿಯಲು ಅಗತ್ಯವಿರುವ ರನ್‌–ವೇ ಇಲ್ಲದೇ ಇರುವಾಗ ವೈಮಾನಿಕ ಶಾಲೆಯ ಉನ್ನತೀಕರಣ ಎಂಬುದೇ ಅಸಾಧ್ಯದ ಸಂಗತಿ. ಅದರ ಹೆಸರಿನಲ್ಲಿ ಖಾಸಗಿ ಯವರಿಗೆ ಅನುಕೂಲ ಮಾಡಿಕೊಡುವ ಯತ್ನ ನಡೆದಿದೆ ಎಂದೂ ದೂರಲಾಗಿದೆ.

ಉನ್ನತೀಕರಣಕ್ಕೆ ಆದ್ಯತೆ: ನಾರಾಯಣಗೌಡ

‘ವೈಮಾನಿಕ ಶಾಲೆಯ ಉನ್ನತೀಕರಣಕ್ಕೆ ಆದ್ಯತೆ ನೀಡುವುದು ನಮ್ಮ ಆಶಯ. ಅಲ್ಲಿ ವಾಣಿಜ್ಯೀಕರಣಕ್ಕೆ ಅವಕಾಶ ಕೊಡುವುದಿಲ್ಲ’ ಎಂದು ಕ್ರೀಡಾ ಸಚಿವ ಕೆ.ಸಿ. ನಾರಾಯಣಗೌಡ ಹೇಳಿದರು.

‘ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ವೈಮಾನಿಕ ಶಾಲೆಯನ್ನು ಅಭಿವೃದ್ಧಿಪಡಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ವಿವಿಧ ವಿಮಾನ ಸಂಸ್ಥೆಗಳಲ್ಲಿ ಕೆಲಸ ಮಾಡುವ ವಿಮಾನ ಚಾಲಕರಿಗೆ ಆರು ತಿಂಗಳಿಗೊಮ್ಮೆ ಉನ್ನತ ತರಬೇತಿ ನೀಡಲಾಗುತ್ತದೆ. ಅದು ಅತ್ಯಂತ ದುಬಾರಿಯಾದ ತರಬೇತಿಯಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಈ ತರಬೇತಿ ನೀಡುವ ಪ್ರಸ್ತಾವ ಸರ್ಕಾರದ ಮುಂದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT