ಗುರುವಾರ , ಮೇ 19, 2022
24 °C

ಹಿಂದಿ ಹೇರಿಕೆಗೆ ಮುನ್ನುಡಿ ಬರೆದಿದ್ದೇ ಕಾಂಗ್ರೆಸ್‌: ಜೆಡಿಎಸ್‌ ಆಕ್ರೋಶ 

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತದಲ್ಲಿ ಹಿಂದಿ ಹೇರಿಕೆಯ ಮುನ್ನುಡಿ ಬರೆದಿದ್ದೇ ಕಾಂಗ್ರೆಸ್‌ ಎಂದು ಜೆಡಿಎಸ್‌ ಆರೋಪಿಸಿದೆ. ಅಲ್ಲದೇ,  'ಹಿಂದಿಗೆ ನೀಡಿರುವ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುತ್ತೇವೆ' ಎಂದು ಕಾಂಗ್ರೆಸ್‌ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಲಿ ಎಂದು ಸವಾಲು ಹಾಕಿದೆ. 

ದೇಶದಲ್ಲಿ ವಿವಿಧ ರಾಜ್ಯಗಳ ಜನರು ಸಂವಹನ ಭಾಷೆಯಾಗಿ ಇಂಗ್ಲಿಷ್‌ ಬದಲಿಗೆ ಹಿಂದಿ ಬಳಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಗುರುವಾರ ಹೇಳಿದ್ದರು. ಶಾ ಅವರ ಈ ಹೇಳಿಕೆಗೆ ಕಾಂಗ್ರೆಸ್‌ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. 

ಕಾಂಗ್ರೆಸ್‌ ನಾಯಕರ ಹೇಳಿಕೆಗಳ ಕುರಿತು ಜೆಡಿಎಸ್‌ ಶನಿವಾರ ಟ್ವೀಟ್‌ ಮಾಡಿ ಟೀಕೆ ಮಾಡಿದೆ. 'ಹಿಂದಿ ಹೇರಿಕೆಯ ವಿಚಾರದಲ್ಲಿ ಕಾಂಗ್ರೆಸ್ಸಿನ ತಪ್ಪುಗಳು ಬಿಜೆಪಿಗೆ ಸಮರ್ಥನೆಯಾಗಿವೆ. ಈ ದೇಶದಲ್ಲಿ ಹಿಂದಿ ಹೇರಿಕೆಗೆ ಮುನ್ನುಡಿ ಬರೆದು ಅಡಿಪಾಯ ಹಾಕಿದ್ದೇ ಕಾಂಗ್ರೆಸ್. ಈಗ ಬಿಜೆಪಿ ಅದನ್ನು ಇನ್ನೂ ಸಮರ್ಥವಾಗಿ ಮುನ್ನೆಡೆಸಿಕೊಂಡು ಬರುತ್ತಿದೆ' ಎಂದು ಜೆಡಿಎಸ್‌ ಹೇಳಿದೆ.  

'ಇಂದು ರಾಜ್ಯದ ಕಾಂಗ್ರೆಸ್ ನಾಯಕರು ಪುಂಖಾನುಪುಂಖವಾಗಿ ಹಿಂದಿ ಹೇರಿಕೆಯ ವಿಚಾರದಲ್ಲಿ ಭಾಷಣ ಬಿಗಿಯುತ್ತಿದ್ದಾರೆ. ಆದರೆ, ಒಂದು ವೇಳೆ ಇವರು ಅಧಿಕಾರಕ್ಕೆ ಬಂದರೆ ಮತ್ತೆ ಹಿಂದಿ ಹೇರಿಕೆಯನ್ನು ಮುಂದುವರೆಸುತ್ತಾರೆ ಎನ್ನುವುದರಲ್ಲಿ ನಮಗಂತೂ ಯಾವುದೇ ಸಂಶಯವಿಲ್ಲ' ಎಂದಿದೆ. 

'ಕಾಂಗ್ರೆಸ್ ನಾಯಕರ ಹಿಂದಿ ಹೇರಿಕೆಯ ವಿಚಾರಗಳು ಕೇವಲ ಟ್ವಿಟ್ಟರ್‌ಗೆ ಸೀಮಿತವಾಗುವ ಬದಲು ಮುಂದಿನ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ 'ಹಿಂದಿಗೆ ನೀಡಿರುವ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುತ್ತೇವೆ' ಎಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿ ತಮ್ಮ ಬದ್ಧತೆಯನ್ನು ಪ್ರದರ್ಶಿಸಲಿ' ಎಂದು ಜೆಡಿಎಸ್‌ ಸವಾಲೆಸೆದಿದೆ. 

'ಕಾಂಗ್ರೆಸ್ ಮಾಡುವ ಯೋಜನೆಗಳನ್ನೆಲ್ಲಾ ವಿರೋಧಿಸುವ ಬಿಜೆಪಿ ಪಕ್ಷ ಕಾಂಗ್ರೆಸ್ ಮಾಡಿರುವ ಈ ಹಿಂದಿ ಹೇರಿಕೆಯ ತಪ್ಪನ್ನು ಸರಿಪಡಿಸಿ ದೇಶದ ಹಿಂದಿಯೇತರ ಭಾಷಿಕರಿಗೆ ನ್ಯಾಯ ಒದಗಿಸಿ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಿ ಭಾಷಾ ಸಮಾನತೆಯನ್ನು ಸ್ಥಾಪಿಸಲಿ' ಎಂದು ಸಲಹೆ ನೀಡಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು