ಶನಿವಾರ, ಜನವರಿ 29, 2022
17 °C

ನಕಲಿ ಜಾತ್ಯತೀತ ಶೂರನ ಅಸಲಿರೂಪ ಕಳಚಿದೆ: ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಕಲಿ ಜಾತ್ಯತೀತ ಶೂರನ ಅಸಲಿರೂಪ ಕಳಚಿದೆ ಎಂದು ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ʼಸುಳ್ಳು ಸ್ಲೋಗನ್‌ʼಗಳ ಸೃಷ್ಟಿಕರ್ತ, ಟರ್ಮಿನೇಟರ್‌, ಸಿದ್ದಕಲೆಯ ನಿಪುಣಾಗ್ರೇಸರು ಈಗ ʼJDFʼ ಎಂಬ ಹೊಸ ಜಪ ಮಾಡಿಕೊಂಡು ತಮ್ಮ ಜಾತ್ಯತೀತ ತತ್ವಾದರ್ಶಗಳಿಗೆ ಮಂಡ್ಯದಲ್ಲಿ ಎಳ್ಳುನೀರು ಬಿಟ್ಟಿದ್ದಾರೆ. ಸಹಕಾರ ಸಚಿವರ ಸಹಾಯಕನನ್ನು ಗೆಲ್ಲಿಸಿಕೊಳ್ಳಲು ʼಜಾತಿ ಸಹಕಾರʼಕ್ಕೆ ಮೊರೆ ಹೋಗಿದ್ದಾರೆ!! ಅಯ್ಯೋ, ಎಂಥಾ ದುರ್ವಿಧಿ' ಎಂದು ಕಿಡಿಕಾರಿದ್ದಾರೆ.

'ಮತಫಸಲಿಗಾಗಿ ಜಾತಿ ರಾಜಕೀಯ ಮಾಡುತ್ತಿರುವ ನಕಲಿ ಜಾತ್ಯತೀತ ಶೂರನ ಅಸಲಿರೂಪ ಕಳಚಿದೆ. ಸಮುದಾಯದ ಅಧ್ಯಕ್ಷರೊಬ್ಬರು, ನೀವು ಮತ ಹಾಕುವುದು ಕಾಂಗ್ರೆಸ್‌ ಪಕ್ಷಕ್ಕಲ್ಲ, ನಮ್ಮ ಸಮುದಾಯದ ಸಿದ್ದಕಲಾಕೋವಿದನಿಗೆ ಎಂದು ಮನೆಮನೆಗೂ ಹೋಗಿ ಪ್ರಚಾರ ಮಾಡುತ್ತಿರುವುದು ಮಂಡ್ಯದಲ್ಲಿ ಮಜಭೂತಾಗಿ ನಡೆಯುತ್ತಿದೆ. ಹೇಳುವುದು ಒಂದು, ಮಾಡುವುದು ಇನ್ನೊಂದು' ಎಂದು ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ.

ಇದನ್ನೂ ಓದಿ: 

ಮತ್ತೊಂದು ಟ್ವೀಟ್‌ನಲ್ಲಿ, 'ಅವರಿಗೆ ಜೆಡಿಎಸ್‌ ಫೋಬಿಯಾ ಕಾಡುತ್ತಿದೆ. ಚುನಾವಣೆ ಬಂದರೆ ಜೆಡಿಎಸ್‌ ಚಳಿ-ಜ್ವರ ಹತ್ತುತ್ತದೆ. ಈ ಜ್ವರ ಬಿಡಿಸಿಕೊಳ್ಳಲು ಸಿದ್ದಸೂತ್ರದಾರ ಬಳಸುವ ಹೊಸ ಔಷಧವೇ ʼJDFʼ. ಅವರನ್ನು ಉಳಿಸುವ ಟಾನಿಕ್‌‌ನ ಹೆಸರೇ ಜೆಡಿಎಸ್‌ ಕುಟುಂಬ ರಾಜಕಾರಣ. ಹಾಗಾದರೆ, ಅವರದ್ದು #SCF (#ಸಿದ್ದಸೂತ್ರದಾರಕಾಂಗ್ರೆಸ್‌ಫ್ಯಾಮಿಲಿ) ಅಲ್ಲವೆ?' ಎಂದು ಪ್ರಶ್ನಿಸಿದ್ದಾರೆ.

'ರಾಜಕೀಯ ಆರಂಭಿಸಿದ ಮಾತೃಪಕ್ಷವನ್ನೇ ಕ್ರೂರವಾಗಿ ಮುಳುಗಿಸಲು ಹೊರಟ ಆ ನಾಯಕರು, ಕೈ ಹಿಡಿದ ಸ್ವಪಕ್ಷವನ್ನೂ ಸ್ವಾಹ ಮಾಡುತ್ತಿದ್ದಾರೆ. ʼವಿನಾಶಕಾಲೇ ವಿಪರೀತ ಸುಳ್ಳು!ʼ. ಆ ಸುಳ್ಳುಗಳೇ ಅವರನ್ನು ಸುಡುತ್ತವೆ. ಆಟ ಈಗ ಆರಂಭ' ಎಂದು ತಿಳಿಸಿದರು.

ಅಪ್ಪ, ಮಕ್ಕಳು, ಮೊಮ್ಮಕ್ಕಳ ಕುಟುಂಬ ರಾಜಕಾರಣಕ್ಕೆ ಸೀಮಿತವಾಗಿರುವ  ಜೆಡಿಎಸ್‌ ಅನ್ನು ಇನ್ನು ಮುಂದೆ 'ಜೆಡಿಎಫ್‌' (ಫ್ಯಾಮಿಲಿ) ಎಂದು ಕರೆಯುವುದು ಉತ್ತಮ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಾಖ್ಯಾನಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು