ಬುಧವಾರ, ಮೇ 18, 2022
27 °C
ದಾಖಲೆ ಕೇಳಿದ ಸಿಎಂ ಬಸವರಾಜ ಬೊಮ್ಮಾಯಿಗೆ ಪ್ರಜಾವಾಣಿ ವರದಿ ಉಲ್ಲೇಖಿಸಿ ತಿರುಗೇಟು

ಸರ್ಕಾರಿ ಹುದ್ದೆಗಳ ‘ಕಾಸ್‌’ಗೀಕರಣ: ಸರ್ಕಾರಕ್ಕೆ ಎಚ್.ಡಿ. ಕುಮಾರಸ್ವಾಮಿ ಚಾಟಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಿಎಸ್‌ಐ ಅಕ್ರಮ ನೇಮಕಾತಿ ಹಗರಣಕ್ಕೆ ಸಂಬಂಧಿಸಿ ಮಾಡಿದ ಆರೋಪಕ್ಕೆ ದಾಖಲೆ ಕೇಳಿದ್ದಕ್ಕೆ ‘ಪ್ರಜಾವಾಣಿ’ಯಲ್ಲಿ ಪ್ರಕಟಗೊಂಡ ವರದಿ ಉಲ್ಲೇಖಿಸಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಅಕ್ರಮದಲ್ಲಿ ಪ್ರಭಾವಿಗಳ ಪಾತ್ರ ಇದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಆರೋಪ ಮಾಡುವವರು ಆಧಾರವಿಲ್ಲದೇ ಮಾತನಾಡಬಾರದು. ಯಾರು ಏನು ಬೇಕಾದರೂ ಹೇಳಿಕೆ ಕೊಡಲಿ. ಆದರೆ, ಆರೋಪಕ್ಕೆ ಪೂರಕವಾದ ದಾಖಲೆಗಳನ್ನು ನೀಡಲಿ’ ಎಂದಿದ್ದರು.

ಒಳನೋಟ | ಕಾಸಿದ್ದರಷ್ಟೇ ಸರ್ಕಾರಿ ಹುದ್ದೆ: ಪರೀಕ್ಷೆ ಹಂತದಲ್ಲಿ ಅಕ್ರಮ

‘ಪ್ರಜಾವಾಣಿ’ಯಲ್ಲಿ ಪ್ರಕಟಗೊಂಡ ‘ಕಾಸಿದ್ದರಷ್ಟೇ ಸರ್ಕಾರಿ ಹುದ್ದೆ’ ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ‘ಸರ್ಕಾರಿ ನೇಮಕದ ಅಕ್ರಮವನ್ನು ಪ್ರಜಾವಾಣಿಯ ವರದಿ ಕಣ್ಣಿಗೆ ಕಟ್ಟುವಂತೆ ತೆರೆದಿಟ್ಟಿದೆ. ರಾಜ್ಯ ಸರ್ಕಾರಕ್ಕೆ ಇದಕ್ಕಿಂತ ಸಾಕ್ಷ್ಯ ಬೇಕೆ? ಸರ್ಕಾರಿ ಕೆಲಸಗಳ ‘ಕಾಸ್‌’ಗೀಕರಣ ಎಗ್ಗಿಲ್ಲದೆ ನಡೆದಿದೆ ಎನ್ನುವುದು ಇದರಿಂದ ವೇದ್ಯವಾಗುತ್ತಿದೆ’ ಎಂದು ಬರೆದಿದ್ದಾರೆ.

‘ಹಿಂದೆ ಶಿಫಾರಸು ಅಭ್ಯರ್ಥಿಗಳಿಗೆ ಅರ್ಹತೆ ಇಲ್ಲದಿದ್ದರೆ ಮುಖ್ಯಮಂತ್ರಿ ಹೇಳಿದರೂ ಕೆಲಸ ಆಗುತ್ತಿರಲಿಲ್ಲ. ಯಾವಾಗ ಹಣ, ಜಾತಿಗಳ ಪ್ರಭಾವ ಹೆಚ್ಚಾಯಿತೋ ಸರ್ಕಾರಿ ಕೆಲಸಗಳ ‘ಕಾಸ್‌’ಗೀಕರಣ’ವೂ ಶುರುವಾಯಿತು. ಪಿಎಸ್ಐ ಅಕ್ರಮದ ಬಗ್ಗೆ ಕಹಿಸತ್ಯಗಳನ್ನು ಹೇಳಿದ ನನ್ನನ್ನೇ ದಾಖಲೆ ಕೊಡಿ ಎನ್ನುವ ಸರ್ಕಾರಕ್ಕೆ ‘ಸಾಚಾತನ’ದ ಕೊರತೆ ಇದೆ. ಹಿಟ್ ಆಂಡ್ ರನ್ ಎನ್ನುವ ಮೂಲಕ ಕೆಲವರು ಅಕ್ರಮದ ಬಲೆಯಿಂದ ಅಕ್ಕಪಕ್ಕ ಸರಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಕುಮಾರಸ್ವಾಮಿ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

‘ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ, ಸ್ವಜನ ಪಕ್ಷಪಾತ, ಕಳ್ಳಮಾರ್ಗ, ಭ್ರಷ್ಟಾಚಾರಗಳು ತಾಂಡವವಾಡುತ್ತಿವೆ. ಕರ್ನಾಟಕ ಲೋಕಸೇವಾ ಆಯೋಗ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಪೊಲೀಸ್ ನೇಮಕಾತಿ ಮಂಡಳಿಗಳು ಲಂಚಗುಳಿತನದ ಕೂಪಗಳಾಗಿವೆ. ಪ್ರತಿ ಹುದ್ದೆಗೂ ರೇಟ್ ಫಿಕ್ಸ್ ಮಾಡಿರುವ ರಾಜ್ಯ ಸರ್ಕಾರವು ‘ಉದ್ಯೋಗ ವ್ಯಾಪಾರೀಕಣ’ವನ್ನೇ ‘ಅಧಿಕೃತ ಕಸುಬು’ ಮಾಡಿಕೊಂಡಿದೆ. ‘ಸರ್ಕಾರಿ ಕೆಲಸದ ರೇಟ್ ಕಾರ್ಡ್’ ಬಗ್ಗೆ ನಾನು ಪದೆಪದೇ ಹೇಳುತ್ತಲೇ ಇದ್ದೆ. ಕೆಪಿಎಸ್ಸಿ ಹುದ್ದೆಗಳ ‘ಮುಕ್ತ ಮಾರಾಟ’ದ ಬಗ್ಗೆಯೂ ಹೇಳಿದ್ದೆ. ಆದರೆ, ಸರ್ಕಾರದ್ದು ಜಾಣನಿದ್ದೆ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಅವರು ಉಲ್ಲೇಖಿಸಿದ್ದಾರೆ.

ಸಿದ್ದರಾಮಯ್ಯಗೂ ಪರೋಕ್ಷ ಚಾಟಿ:

‘ನಾನು 2 ಸಲ ಮುಖ್ಯಮಂತ್ರಿ ಆಗಿದ್ದಾಗ ಕೆಪಿಎಸ್ಸಿ ಅಕ್ರಮಗಳಿಗೆ ಕಡಿವಾಣ ಹಾಕಿದ್ದೆ. ಕೆಪಿಎಸ್ಸಿಯನ್ನು ತೊಳೆಯುತ್ತೇನೆಂದ ‘ಸಿದ್ದಹಸ್ತ’ರೊಬ್ಬರು ಬಿಡಿಎಯನ್ನು ಗುಡಿಸಿಗುಂಡಾಂತರ ಮಾಡಿದ್ದ, ‘ರೀಡೂ ಋಣ’ದ ‘ತಿಮಿಂಗಿಲ’ವನ್ನೇ ತಂದು ಕೆಪಿಎಸ್ಸಿಯಲ್ಲಿ ಕೂರಿಸಿದ್ದರು. ಆದರೆ, ನಾನು ಭ್ರಷ್ಟರು ಉದ್ಯೋಗಸೌಧದ ಮೆಟ್ಟಿಲು ಹತ್ತಲು ಬಿಟ್ಟಿರಲಿಲ್ಲ’ ಎಂದು ಕುಮಾರಸ್ವಾಮಿ ಪರೋಕ್ಷವಾಗಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಚಾಟಿ ಬೀಸಿದ್ದಾರೆ.

2018ರಲ್ಲಿ ನಾನು ಸಿಎಂ ಆಗಿದ್ದಾಗ ‘ಸಿದ್ದಹಸ್ತರು’ ತಮಗೆ ಬೇಕಾದವರ ಹೆಸರನ್ನು ಶಿಫಾರಸು ಮಾಡಿ, ಕೆಪಿಎಸ್ಸಿಯಲ್ಲಿ ಪ್ರತಿಷ್ಠಾಪಿಸಿ ಎಂದು ಒತ್ತಡ ಹೇರಿದ್ದರು. 2006ರಲ್ಲೂ ಕೆಲ ಶಾಸಕರು ತಮ್ಮ ಸಮುದಾಯದವರನ್ನು ಕರೆತಂದು ಕೆಪಿಎಸ್ಸಿ ಸದಸ್ಯರನ್ನಾಗಿ ಮಾಡಿ ಎಂದು ದುಂಬಾಲು ಬಿದ್ದಿದ್ದರು. ಅವರಿಗೆ ಬುದ್ಧಿ ಹೇಳಿ ವಾಪಸ್ ಕಳಿಸಿದ್ದೆ. ನನ್ನ ಅಧಿಕಾರಾವಧಿಯಲ್ಲಿ ಒಮ್ಮೆಯೂ ಯಾವುದೇ ಇಲಾಖೆಯಲ್ಲಿ ನೇಮಕದ ಅಕ್ರಮ ನಡೆದಿಲ್ಲ. ಸಚ್ಚಾರಿತ್ರ್ಯ, ಅರ್ಹತೆ ಇದ್ದವರನ್ನೇ ಕೆಪಿಎಸ್ಸಿಗೆ ನೇಮಕ ಮಾಡಿದ್ದೆ. ಅಂಥ ನೇಮಕಾತಿ ಅಥವಾ ಉದ್ಯೋಗ ನೀಡಿಕೆಯಲ್ಲಿ ಸಣ್ಣ ಲೋಪವೂ ಆಗಿಲ್ಲ. ಒಂದು ವೇಳೆ ಲೋಪವಾಗಿದ್ದರೆ ಯಾವುದೇ ತನಿಖೆಗೂ ನಾನು ಸಿದ್ಧ ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು