ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಹೋರಾಟ ಪೆಟ್ರೋಲ್‌ ದರ ಇಳಿಸಲೋ, ಜಿಎಸ್‌ಟಿಗೆ ಸೇರಿಸಲೋ?: ಎಚ್‌ಡಿಕೆ

ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರ ಪೆಟ್ರೋಲ್‌ ಬೆಲೆ ಏರಿಸುತ್ತಿದೆ ಎಂದು ಕಾಂಗ್ರೆಸ್‌ ದೇಶದಾದ್ಯಂತ ಹೋರಾಟ ನಡೆಸುತ್ತಿದೆ. ಪೆಟ್ರೋಲ್‌ ಬೆಲೆ ಇಳಿಯಬೇಕಿದ್ದರೆ ಅದನ್ನು ಜಿಎಸ್‌ಟಿಗೆ ಸೇರಿಸಬೇಕು ಎಂದು ಕೇಂದ್ರ ಸರ್ಕಾರ ಹೇಳಿದರೆ, ಅದನ್ನೇ ಕಾಂಗ್ರೆಸ್‌ ಕೂಡ ಪ್ರತಿಪಾದಿಸಿದೆ. ಹಾಗಿದ್ದರೆ ಕಾಂಗ್ರೆಸ್‌ ಹೋರಾಡುತ್ತಿರುವುದು ಬೆಲೆ ಇಳಿಸಲೋ, ಪೆಟ್ರೋಲ್‌ಅನ್ನು ಜಿಎಸ್‌ಟಿಗೆ ಸೇರಿಸಲೋ? ಎಂಬ ಪ್ರಶ್ನೆಯನ್ನು ಜೆಡಿಎಸ್‌ ನಾಯಕ, ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಕೇಳಿದ್ದಾರೆ.

ರಾಷ್ಟ್ರದಲ್ಲಿ ಪೆಟ್ರೋಲ್‌ ದರ ತರ್ಕಹೀನವಾಗಿರುವುದಕ್ಕೆ ಕೇಂದ್ರ ಸರ್ಕಾರವೊಂದೇ ಕಾರಣ ಎಂದು ಪೆಟ್ರೋಲಿಯಂ ಖಾತೆಯ ಮಾಜಿ ಸಚಿವ ವೀರಪ್ಪ ಮೊಯ್ಲಿ ಆರೋಪಿಸಿದ್ದರು. ಜೊತೆಗೆ ಪೆಟ್ರೋಲ್‌ ಮತ್ತು ಡೀಸೆಲ್‌ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕೆಂದು ಒತ್ತಾಯ ಮಾಡಿದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್‌ ಹೋರಾಡುತ್ತಿರುವುದು ಯಾವ ಉದ್ದೇಶಕ್ಕೆ ಎಂಬುದನ್ನು ಸ್ಪಷ್ಟಪಡಿಸುವಂತೆ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಪೆಟ್ರೋಲಿಯಂ ಖಾತೆಯ ಮಾಜಿ ಸಚಿವರೂ, ಕಾಂಗ್ರೆಸ್‌ನ ಹಿರಿಯರೂ ಆಗಿರುವ ನಾಯಕರೊಬ್ಬರು ಪೆಟ್ರೋಲ್‌ಅನ್ನು ಜಿಎಸ್‌ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದ್ದಾರೆ. ಪೆಟ್ರೋಲ್‌ ಮೇಲಿನ ಮಿತಿ ಇಲ್ಲದ ತೆರಿಗೆ ಇಳಿಸುವುದು ಕಾಂಗ್ರೆಸ್‌ ಉದ್ದೇಶವಲ್ಲ, ಅದನ್ನು ಜಿಎಸ್‌ಟಿ ವ್ಯಾಪ್ತಿಗೆ ಸೇರಿಸುವುದಷ್ಟೇ ಅವರ ಉದ್ದೇಶ ಎಂಬುದು ಇದರಿಂದ ಸಾಬೀತಾಗಿದೆ. ಆದರೆ ಅದರ ಅಪಾಯ ಕಾಂಗ್ರೆಸ್‌ಗೆ ಗೊತ್ತಿಲ್ಲ ಎಂದು ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದಾರೆ.

ಕೇಂದ್ರದ ಅಧಿಕಾರದ ಮೇಲೆ ಕಣ್ಣಿಟ್ಟು, ಅದರ ಸುತ್ತಲೇ ರಾಜಕಾರಣ ಮಾಡುವುದಷ್ಟೇ ರಾಷ್ಟ್ರೀಯ ಪಕ್ಷಗಳ ಅಜೆಂಡಾ. ಅವುಗಳಿಗೆ ರಾಜ್ಯಗಳ ಹಿತಾಸಕ್ತಿ, ಸ್ಥಳೀಯ ಅಗತ್ಯಗಳು ಲೆಕ್ಕಕ್ಕೇ ಇಲ್ಲ. ಪೆಟ್ರೋಲ್‌ಅನ್ನು ಜಿಎಸ್‌ಟಿಗೆ ಸೇರಿಸುವುದು ರಾಜ್ಯಗಳನ್ನು ಶೋಷಿಸಿದಂತೆ. ಈಗ ಕಾಂಗ್ರೆಸ್‌-ಬಿಜೆಪಿಗಳೆರಡೂ ಆ ಶೋಷಣೆಯ ಪರವಾಗಿ ನಿಂತಿವೆ ಎಂಬುದು ಬಹಿರಂಗವಾಗಿದೆ ಎಂದು ಕುಮಾರಸ್ವಾಮಿ ಸರಣಿ ಟ್ವೀಟ್‌ನಲ್ಲಿ ವಿವರಿಸಿದ್ದಾರೆ.

ಪೆಟ್ರೋಲ್‌ಅನ್ನು ಜಿಎಸ್‌ಟಿಗೆ ತಂದರೆ ಜನರಿಗೆ ತಕ್ಷಣಕ್ಕೆ ಬೆಲೆ ಇಳಿದಂತೆ ಅನ್ನಿಸಬಹುದು. ಆದರೆ, ಪೆಟ್ರೋಲನ್ನು ಜಿಎಸ್‌ಟಿಗೆ ಸೇರಿಸುತ್ತಲೇ ಅದರ ಮೇಲಿನ ತೆರಿಗೆಯಿಂದ ಬರುತ್ತಿದ್ದ ಸಂಪನ್ಮೂಲ ರಾಜ್ಯಗಳ ಕೈತಪ್ಪಿ ಹೋಗುತ್ತದೆ. ಎಲ್ಲ ತೆರಿಗೆಯೂ ಕೇಂದ್ರದ ಪಾಲಾಗಿ ರಾಜ್ಯಗಳು ಸಂಪನ್ಮೂಲ ಬರ ಎದುರಿಸುತ್ತವೆ. ರಾಜ್ಯಗಳ ಅಭಿವೃದ್ಧಿಗೆ ಪೆಟ್ಟು ಬೀಳುತ್ತದೆ. ತೈಲ ಬೆಲೆ ಇಳಿಸುವ ಉದ್ದೇಶದೊಂದಿಗೆ ಪೆಟ್ರೋಲ್‌ಅನ್ನು ಜಿಎಸ್‌ಟಿಗೆ ಸೇರಿಸುವುದು ಪರಿಹಾರವಲ್ಲ. ಅದು ಶೋಷಣೆ ಎಂದು ಕುಮಾರಸ್ವಾಮಿ ಟ್ವೀಟ್‌ನಲ್ಲಿ ಹರಿಹಾಯ್ದಿದ್ದಾರೆ.

ಕೇಂದ್ರ ಮತ್ತು ರಾಜ್ಯಗಳೆರೂ ತೈಲದ ಮೇಲಿನ ಸುಂಕ ಇಳಿಸಲಿ:

ಕೇಂದ್ರ ಈಗ ವಿಧಿಸುತ್ತಿರುವ ಮಿತಿಮೀರಿದ ಸುಂಕ ಕಡಿತ ಮಾಡಲಿ. ರಾಜ್ಯ ಸರ್ಕಾರವೂ ತೆರಿಗೆ ಇಳಿಸಲಿ. ಈಗ ತೈಲದ ಮೇಲೆ ಕೇಂದ್ರ, ರಾಜ್ಯಗಳೆರಡೂ ಶೇ 68ರಷ್ಟು ತೆರಿಗೆ ವಿಧಿಸುತ್ತಿವೆ. ಈ ತೆರಿಗೆ ಪ್ರಮಾಣ ಕಡಿಮೆಯಾಗಬೇಕಾದ್ದು ಅಗತ್ಯ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಈಗ ಒಂದು ಲೀಟರ್‌ ಪೆಟ್ರೋಲ್‌ ಮೇಲೆ ₹60–65 ತೆರಿಗೆ ಹಣ ಸಿಗುತ್ತಿದೆ. ಆದರೆ, ಎರಡೂ ಸರ್ಕಾರಗಳೂ ಲೀಟರ್‌ ಪೆಟ್ರೋಲ್‌ ಮೇಲೆ ಸಂಗ್ರಹಿಸುವ ಹಣ ₹30 ಮೀರಬಾರದು. ಆಗ ಪೆಟ್ರೋಲ್‌ ₹65–70ಗೆ ಬಂದು ನಿಲ್ಲಲಿದೆ. ನಿಜವಾಗಿಯೂ ಆಗಬೇಕಾದ್ದು ಇದು. ಈ ನಿಟ್ಟಿನಲ್ಲಿ ನಾವೆಲ್ಲರೂ ಹೋರಾಡಬೇಕಿದೆ.

ಪೆಟ್ರೋಲ್‌ ಮೇಲೆ ಕೇಂದ್ರ, ರಾಜ್ಯ ಸರ್ಕಾರಗಳೆರಡು ವಿಧಿಸುತ್ತಿರುವ ಅತ್ಯಧಿಕ ತೆರಿಗೆ ಇಳಿಸುವ ಮೂಲಕ ಬೆಲೆ ಏರಿಕೆ ತಗ್ಗಿಸಬೇಕು ಎಂಬುದು ಜೆಡಿಎಸ್‌ ಒತ್ತಾಯ. ಜೊತೆಗೆ ಪೆಟ್ರೋಲ್‌ಅನ್ನು ಜಿಎಸ್‌ಟಿಗೆ ಸೇರಿಸುವ ರಾಷ್ಟ್ರೀಯ ಪಕ್ಷಗಳ ಹುನ್ನಾರದ ವಿರುದ್ಧ ಹೋರಾಡುವುದೂ ನಮ್ಮ ನಿಲುವು. ಇದರ ಸುತ್ತಲೇ ನಾವು ಹೋರಾಟ, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT