ಶನಿವಾರ, ಆಗಸ್ಟ್ 20, 2022
21 °C

ಪ್ರಜ್ವಲ್, ನಿಖಿಲ್‌ ಸಕ್ರಿಯರಾದರೆ ಪಕ್ಷ ಸಂಘಟನೆಗೆ ದೊಡ್ಡ ಬಲ; ಮುಖಂಡರ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪ್ರಜ್ವಲ್ ರೇವಣ್ಣ ಮತ್ತು ನಿಖಿಲ್ ಕುಮಾರಸ್ವಾಮಿ ಅವರನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳಬೇಕು. ಇವರಿಬ್ಬರೂ ರಾಜ್ಯದಾದ್ಯಂತ ಪ್ರವಾಸ ಮಾಡಿದರೆ ಯುವಕರನ್ನು ಪಕ್ಷದತ್ತ ಸೆಳೆಯಬಹುದು. ಈಗ ಎಲ್ಲ ಕಡೆ ಯುವಕರ ಗಾಳಿ ಬೀಸುತ್ತಿದೆ. ಪಕ್ಷದಲ್ಲೂ ಯುವಕರನ್ನು ಬೆಳೆಸಬೇಕೆಂದರೆ ಪ್ರಜ್ವಲ್, ನಿಖಿಲ್ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು’ ಎಂದು ಜೆಡಿಎಸ್‌ನ ಹಲವು ಜಿಲ್ಲಾ, ತಾಲ್ಲೂಕು ಘಟಕಗಳ ಅಧ್ಯಕ್ಷರು ಸಲಹೆ ನೀಡಿದ್ದಾರೆ.

ಪಕ್ಷ ಸಂಘಟನೆ ಕುರಿತು ರಾಜ್ಯ ಕಚೇರಿ ಜೆಪಿ ಭವನದಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಾತನಾಡಿದ ಹಲವರು ಪಕ್ಷ ಸಂಘಟನೆಗೆ ಸಲಹೆ ನೀಡಿದರೆ, ಕೆಲವರು ನೇರವಾಗಿ ಬೇಸರ ಹೊರ ಹಾಕಿದ್ದಾರೆ. ಸಭೆಯನ್ನು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಉದ್ಘಾಟಿಸಿದರು. ಪಕ್ಷ ಸಂಘಟನೆ, ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಗೆ ತಯಾರಿ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

‘ಯುವ ನಾಯಕರಿಬ್ಬರು ರಾಜ್ಯದ ಎಲ್ಲೆಡೆ ಪ್ರವಾಸ ಮಾಡಬೇಕು. ಆಗ ಪಕ್ಷ ಸಂಘಟನೆಗೆ ದೊಡ್ಡ ಬಲ ಬಂದಂತಾಗಲಿದೆ. ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಯ ದೊಡ್ಡ ಕೊರತೆ ಇದೆ. ಮೊದಲು ಸ್ಥಳೀಯವಾಗಿ ಪಕ್ಷದ ಬೇರುಗಳು ಗಟ್ಟಿಯಾಗಬೇಕು. ಯಾವುದೇ ಚುನಾವಣೆಯಾದರೂ ತಡವಾಗಿ ನಿರ್ಧಾರ ತೆಗೆದುಕೊಳ್ಳಬಾರದು. ಚುನಾವಣೆ ಘೋಷಣೆಗೂ ಮೊದಲೇ ಅಭ್ಯರ್ಥಿಯನ್ನು ಘೋಷಿಸಬೇಕು’ ಎಂದು ಕೆಲವರು ಸಲಹೆ ನೀಡಿದರು.

‘ಪಕ್ಷದಲ್ಲಿ ಹೆಣ್ಣು ಮಕ್ಕಳನ್ನು ಕಡೆಗಣಿಸಲಾಗುತ್ತಿದೆ. ಸಂಘಟನೆಗೆ ಮಹಿಳೆಯರನ್ನೂ ಬಳಸಿಕೊಳ್ಳಬೇಕು. ಪದಾಧಿಕಾರಿಗಳ ಬದಲಾವಣೆ ಮಾಡಬೇಕು’ ಎಂದೂ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರು.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ, ಉಪ ಸಭಾಪತಿ ಧರ್ಮೇಗೌಡ, ಮಾಜಿ ಶಾಸಕ ವೈಎಸ್‌.ವಿ. ದತ್ತಾ, ಕೋನರೆಡ್ಡಿ, ಶಾಸಕ ಶಿವಲಿಂಗೇಗೌಡ, ಶ್ರೀನಿವಾಸ ಗೌಡ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಭೆಯಲ್ಲಿ ಇದ್ದಾರೆ. ಜೆಡಿಎಸ್‌ ವರಿಷ್ಠ, ರಾಜ್ಯ ಎಚ್.ಡಿ ದೇವೇಗೌಡ ಮತ್ತು ಸಂಸದ ಪ್ರಜ್ವಲ್ ರೇವಣ್ಣ ಗೈರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು