ಶುಕ್ರವಾರ, ಅಕ್ಟೋಬರ್ 22, 2021
29 °C
ಕಲಬುರಗಿ, ಬೀದರ್‌ ಜಿಲ್ಲೆಯಲ್ಲಿ ಅತಿವೃಷ್ಟಿ: ನಷ್ಟದ ದವಡೆಗೆ ಸಿಲುಕಿದ ರೈತರು

2.64 ಲಕ್ಷ ಹೆಕ್ಟೇರ್‌ ಬೆಳೆ ನೀರುಪಾಲು

ಚಂದ್ರಕಾಂತ ಮಸಾನಿ/ಸಂತೋಷ ಈ.ಚಿನಗುಡಿ Updated:

ಅಕ್ಷರ ಗಾತ್ರ : | |

ಕಲಬುರಗಿ: ಕಲಬುರಗಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಈ ಬಾರಿ ಅತಿವೃಷ್ಟಿಯ ಕಾರಣ ರೈತರು ಅಪಾರ ಸಂಕಷ್ಟ ಎದುರಿಸುತ್ತಿದ್ದಾರೆ. ಎರಡೂ ಜಿಲ್ಲೆಗಳಲ್ಲಿ ಈ ವರೆಗೆ 2.64 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾಗಿದೆ.

ಕಲಬುರಗಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 5.3 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದ್ದು, 1.04 ಲಕ್ಷ ಹೆಕ್ಟೇರ್‌ ಬೆಳೆ ಹಾನಿಯಾಗಿದೆ. ಮೊದಲ ಹಂತದ ಬೆಳೆಹಾನಿ ಸಮೀಕ್ಷೆ ಮುಗಿದಿದೆ. ಎರಡನೇ ಹಂತದ ಸಮೀಕ್ಷೆ ನಡೆದಿದ್ದು, ಜಮೀನುಗಳಲ್ಲಿ ನೀರು ನಿಂತಿರುವುದು ಹಾಗೂ ಕೆಸರಿನಿಂದಾಗಿ ಸಮೀಕ್ಷೆಗೆ ಹಿನ್ನಡೆಯಾಗಿದೆ.

ಈ ಬಾರಿ ವಾಡಿಕೆಗಿಂತ ಶೇ 30ರಷ್ಟು ಹೆಚ್ಚು ಮಳೆ ಬಿದ್ದಿದೆ. ಜುಲೈ, ಆಗಸ್ಟ್‌ ಹಾಗೂ ಸೆಪ್ಟೆಂಬರ್‌ನಲ್ಲಿ ಹೆಚ್ಚಿನ ಮಳೆಯಾಗಿದ್ದರಿಂದ ತೊಗರಿ, ಹೆಸರು, ಸಜ್ಜಿ, ಕಬ್ಬು, ಸೊಯಾಬೀನ್, ಸೂರ್ಯಕಾಂತಿ ಬೆಳೆ ಹಾನಿಯಾಗಿದೆ. ಹತ್ತಿ ಹೊಲದಲ್ಲಿ ನೀರು ನಿಂತಿದ್ದರಿಂದ ಕಾಯಿ ಅರಳುತ್ತಿಲ್ಲ. 

‘ಚಿಂಚೋಳಿ, ಕಾಳಗಿ, ಚಿತ್ತಾಪುರ, ಜೇವರ್ಗಿ, ಅಫಜಲಪುರ, ಸೇಡಂ, ಯಡ್ರಾಮಿ ತಾಲ್ಲೂಕುಗಳ ರೈತರೇ ಹೆಚ್ಚು ಸಂಕಷ್ಟ
ಎದುರಿಸುತ್ತಿದ್ದಾರೆ. ಜಿಲ್ಲೆಯ ಕೃಷಿ ಭೂಮಿಯ ಶೇ 80ರಷ್ಟು ಪ್ರದೇಶದಲ್ಲಿ ತೊಗರಿಯನ್ನೇ ಬೆಳೆಯುವುದು ವಾಡಿಕೆ. ಇದು ಶುಷ್ಕ ಪ್ರದೇಶದ ಬೆಳೆ. ಅತಿವೃಷ್ಟಿಯ ಕಾರಣ ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿದ್ದು ಇಳುವರಿ ಕುಂಠಿತವಾಗುವ ಸಾಧ್ಯತೆ ಇದೆ’ ಎನ್ನುವುದು ಕಲಬುರಗಿ ಜಂಟಿ ಕೃಷಿ ನಿರ್ದೆಶಕ ರಿತೇಂದ್ರನಾಥ ಸುಗೂರ‌‌ ಅವರ ಹೇಳಿಕೆ.

ಬೀದರ್‌ ಜಿಲ್ಲೆಯಲ್ಲಿ ಬಿತ್ತನೆ ಮಾಡಿದ್ದ 3.70 ಲಕ್ಷ ಹೆಕ್ಟೇರ್‌ನಲ್ಲಿ 1.60 ಲಕ್ಷ ಹೆಕ್ಟೇರ್‌ ಬೆಳೆ ನೀರು ನಿಂತು ಹಾಳಾಗಿದೆ. ಒಂದೆಡೆ ವಿಪರೀತ ಮಳೆ, ಇನ್ನೊಂದೆಡೆ ಮಹಾರಾಷ್ಟ್ರದ ಧನೇ ಗಾಂವ್‌ ಜಲಾಶಯದಿಂದ ಹರಿದುಬಂದ ಲಕ್ಷಾಂತರ ಕ್ಯುಸೆಕ್‌ ನೀರು ರೈತರನ್ನು ಕಂಗೆಡಿಸಿದೆ.

ಸೆಪ್ಟೆಂಬರ್‌ ತಿಂಗಳಲ್ಲೇ ಸರಾಸರಿ 179 ಮಿ.ಮೀ ಮಳೆಯಾಗಬೇಕಿತ್ತು. ಆದರೆ 261 ಮಿ.ಮೀ ಮಳೆಯಾಯಿತು. ಇದರಿಂದ ಈ ಒಂದೇ ತಿಂಗಳಲ್ಲಿ 1 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಬೆಳೆ ನೆಲಕಚ್ಚಿತು. ಔರಾದ್, ಕಮಲನಗರ, ಬೀದರ್, ಭಾಲ್ಕಿ ತಾಲ್ಲೂಕಿನಲ್ಲಿ ಇಳುವರಿ ನಿರೀಕ್ಷೆಯನ್ನೇ ಕೈಬಿಟ್ಟ ರೈತರು ಈಗ ಪರಿಹಾರಕ್ಕಾಗಿ ಎದುರು ನೋಡುತ್ತಿದ್ದಾರೆ.

‘ಹಾನಿ ಸಮೀಕ್ಷೆ ನಡೆದಿದೆ. ಮುಂಗಾರು ಬಿತ್ತನೆಯಾದ ಪ್ರದೇಶದ ಶೇ 45ರಷ್ಟು ಹಾಳಾಗಿದೆ. ಹೆಸರು, ಉದ್ದು, ಸೋಯಾ, ತೊಗರಿ ಬೆಳೆ ನಾಶವಾಗಿವೆ’ ಎನ್ನುತ್ತಾರೆ ಬೀದರ್‌ನ ಜಂಟಿ ಕೃಷಿ ನಿರ್ದೇಶಕಿ ಜಿ.ಎಚ್‌. ತಾರಾಮಣಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು