ಶನಿವಾರ, ಮೇ 28, 2022
31 °C
ಮೌನವಾಗಿ ಮರುಗಿದ ಅಭಿಮಾನಿಗಳು

ಪೃಥ್ವಿ ಮಡಿಲಿಗೆ ಅಪ್ಪು: ಭಾವುಕ ಸನ್ನಿವೇಶದಲ್ಲಿ ಅಂತ್ಯಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಆಡಿಸುವಾತನ ಕರುಣೆಯ ಮೇಲೆ ನಮ್ಮ ಪಾತ್ರವು. ಸಮಯದ ಸೂತ್ರ ಅವನದು...’ ಪುನೀತ್ ರಾಜಕುಮಾರ್ ಅಭಿನಯದ ‘ರಾಜಕುಮಾರ’ ಚಿತ್ರದ ಈ ಹಾಡು ಅಲ್ಲಿ ಸೇರಿದವರ ಮನಸ್ಸಲ್ಲೇ ಗುನುಗುನಿಸುತ್ತಿತ್ತು ಎಂಬಂತಹ ವಾತಾವರಣ ಕಂಠೀರವ ಸ್ಟುಡಿಯೊ ಆವರಣವನ್ನೇ ತುಂಬಿಕೊಂಡಂತೆ ಇತ್ತು. ಬೆಳಕು ನಿಧಾನವಾಗಿ ಹರಡುತ್ತಿದ್ದರೂ ನೋವಿನ ಕತ್ತಲೆಯೇ ಮುಸುಕಿಕೊಂಡಂತೆ ಜನ ನಡೆದುಕೊಳ್ಳುತ್ತಿದ್ದರು.

ಹೃದಯಸ್ತಂಭನದಿಂದ ಶುಕ್ರವಾರ ಬೆಳಗ್ಗೆ ನಿಧನರಾದ ಕನ್ನಡಿಗರ ನೆಚ್ಚಿನ ‘ಅಪ್ಪು’ವಿನ ಹಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುತ್ತಿಟ್ಟು ಕಂಠೀರವ ಕ್ರೀಡಾಂಗಣದಿಂದ ಭಾವುಕರಾಗಿ ಬೀಳ್ಕೊಟ್ಟಾಗ ಇನ್ನೂ ಬೆಳಕು ಹರಿದಿರಲಿಲ್ಲ. ‘ಅಪ್ಪು..ಅಪ್ಪು..’ ಎನ್ನುವ ಸಾವಿರಾರು ಜನರ ಪ್ರೀತಿಯ ಕರೆಗೂ ಓಗೊಡದೆ ಡಾ. ರಾಜ್ ಸ್ಮಾರಕದಲ್ಲೇ ನೆಲದ ಮರೆಯ ನಿದಾನದಂತೆ ಮಲಗಿದ್ದ ಅಪ್ಪ–ಅಮ್ಮನ ಮಡಿಲು ಸೇರಿಕೊಳ್ಳಲು ಹೊರಟೇ ಬಿಟ್ಟರು ಪುನೀತ್‌ .

ವರನಟ ಡಾ.ರಾಜ್‌ಕುಮಾರ್‌ ಅವರ ಸಮಾಧಿಯ ಪಕ್ಕದಲ್ಲೇ ಇರುವ ಅವರ ಪತ್ನಿ ಪಾರ್ವತಮ್ಮ ರಾಜ್‌
ಕುಮಾರ್‌ ಸಮಾಧಿಯ ಪಕ್ಕದಲ್ಲೇ, ಅಪ್ಪು ಅವರಿಗೆ ಕೊನೆಯ ಅಪ್ಪುಗೆ ನೀಡಿ  ವಿದಾಯ ಹಾಡಲು ಅಪಾರ ಜನಸ್ತೋಮ, ಒಡಲೊಳಗೆ ಇಳಿಬಿಟ್ಟುಕೊಳ್ಳಲು ಭೂಮಿತಾಯಿ ಸಜ್ಜುಗೊಂಡಂತಿತ್ತು ಅಲ್ಲಿನ ವಾತಾವರಣ. ಎರಡು ದಿನ ಶೋಕತಪ್ತರಾಗಿಯೇ ದಿನ ದೂಡಿದ್ದ ನಾಡಿನ ಅಸಂಖ್ಯಾತ ಅಭಿಮಾನಿ ವೃಂದದ ನೋವಿನ ಮಧ್ಯೆಯೇ, ಪುನೀತ್  ಅಂತ್ಯಕ್ರಿಯೆ ಭಾನುವಾರ ಬೆಳಿಗ್ಗೆ ನಡೆಯಿತು.

‘ವೀರಕನ್ನಡಿಗ’ನಿಗೆ ಮುಖ್ಯಮಂತ್ರಿ ಬೊಮ್ಮಾಯಿ ಸರ್ಕಾರಿ ಗೌರವ ಅರ್ಪಿಸಿ, ಪುನೀತ್‌ ಪಾರ್ಥಿವ ಶರೀರದ ಮೇಲಿದ್ದ ರಾಷ್ಟ್ರಧ್ವಜವನ್ನು ಪುನೀತ್‌ ಪತ್ನಿ ಅಶ್ವಿನಿ ಅವರಿಗೆ ಹಸ್ತಾಂತರಿಸಿದರು. ಈ ವೇಳೆ ‘ಭಾರತ್‌ ಮಾತಾ ಕಿ ಜೈ’ ಎಂಬ ಜೈಕಾರ ಮುಗಿಲುಮುಟ್ಟಿತ್ತು. ರಾಘವೇಂದ್ರ ರಾಜ್‌ಕುಮಾರ್‌ ಅವರ ಪುತ್ರ ವಿನಯ್‌ ಅವರು ಎದೆಯಲ್ಲಿ ನೋವಿನ ಬಂಡೆಯನ್ನೇ ಇಟ್ಟುಕೊಂಡು ಸಂಪ್ರದಾಯದಂತೆ ಚಿಕ್ಕಪ್ಪನ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. 

ಮಡುಗಟ್ಟಿದ ಮೌನ, ಕಣ್ಣೊಳಗೆ ತುಂಬಿಕೊಂಡ ಜಲಪಾತವನ್ನೇ ಅದುಮಿಟ್ಟುಕೊಂಡಂತಿದ್ದ ಅಪ್ಪು ಕುಟುಂಬ ಹಾಗೂ ಚಿತ್ರರಂಗದ ಸ್ನೇಹಿತರು ತದೇಕಚಿತ್ತದಿಂದ ನೋಡುತ್ತಿದ್ದರು. ಮುಖಗವಸಿನಡಿ ಪುನೀತ್‌ ಪುತ್ರಿಯರಾದ ಧೃತಿ, ವಂದಿತಾ ಕಣ್ಣಂಚಿನಲ್ಲಿದ್ದ ಹನಿಗಳೇ ನೋವು, ಒಳಗೊಳಗಿನ ಸಂಕಟ, ತಳಮಳವನ್ನು ಅಮ್ಮನ ಬಳಿ ಹೇಳಿಕೊಳ್ಳುವಂತಿತ್ತು. ಪರಸ್ಪರ ಸಂತೈಸುತ್ತಾ, ಸಾಂತ್ವನ ಹೇಳುತ್ತಾ ಪರಸ್ಪರ ಕೈಹಿಡಿದುಕೊಂಡೇ ಅಶ್ವಿನಿ, ಧೃತಿ ಹಾಗೂ ವಂದಿತಾ ಅನಾಥ ಭಾವವನ್ನು ಮರೆಯಲು ಯತ್ನಿಸುತ್ತಿದ್ದರು. ನೋವು ನುಂಗಿಕೊಂಡಿದ್ದರೂ ಅಪ್ಪುವಿನ ಮುಖವನ್ನು ನೋಡಿದ ಪ್ರತಿಕ್ಷಣವೂ ಶಿವರಾಜ್‌ ಕುಮಾರ್‌ ಕಣ್ಣೀರಾಗುತ್ತಿದ್ದರು. 

ಒಂದು ಕ್ಷಣ ಮೌನ. ಮತ್ತೊಂದು ಕ್ಷಣ ದುಃಖ ಉಮ್ಮಳಿಸಿ ಕಟ್ಟೆಯೊಡೆಯುವ ಭಾವನೆ ಇಡೀ ಆವರಣವನ್ನೇ ತುಂಬಿಕೊಂಡಿತ್ತು. ಪುನೀತ್‌ ಪಾರ್ಥಿವ ಶರೀರ ಕಂಠೀರವ ಸ್ಟುಡಿಯೊಗೆ ಆಗಮಿಸುತ್ತಿದ್ದಂತೆಯೇ ಅಶ್ವಿನಿ ಅವರು, ಪುನೀತ್‌ ಹಣೆಗೆ ಮುತ್ತಿಕ್ಕಿ ಕಣ್ತುಂಬಿಕೊಂಡರು. ಧೃತಿ ಹಾಗೂ ವಂದಿತಾ ಅಪ್ಪನನ್ನು ಕೊನೆಗೊಮ್ಮೆ ಬಿಗಿದಪ್ಪಿಹಿಡಿದರು. ಇತ್ತ ಶಿವರಾಜ್‌ಕುಮಾರ್‌ ತಮ್ಮನ ನೆರಳಿನಿಂದ ಕದಲಲಿಲ್ಲ. ಕೊನೆಯ ಅಪ್ಪುಗೆ ನೀಡಲು ಮುಂದಾದ ಅವರು, ಸುಮಾರು ಹೊತ್ತು ತಮ್ಮನ ಪಾರ್ಥಿವ ಶರೀರವನ್ನು ಎದೆಗವಚಿಕೊಂಡು ನೋವನ್ನು ಬಸಿದೇ ಬಿಟ್ಟಂತೆ ಅಲ್ಲಿಂದ ಎದ್ದು ಬಂದ ದೃಶ್ಯ ಹೃದಯ ಕಿವುಚವಂತಿತ್ತು. ರಾಘವೇಂದ್ರ ರಾಜ್‌ಕುಮಾರ್‌ ಮೌನವಾಗಿಯೇ ಅಪ್ಪುವಿನೊಂದಿಗೆ ಸಂವಾದ ನಡೆಸುವಂತೆ ಕುಳಿತು ಬಿಟ್ಟಿದ್ದರು.

ಹೂವಿನ ಪಲ್ಲಕ್ಕಿಯಲ್ಲಿ ‘ಅರಸು’ ಮಲಗಿದಾಗ, ‘ಯುವರತ್ನ’ ‘ಪೃಥ್ವಿ’ ಸೇರಿದಾಗ ‘ಆಕಾಶ್‌’ದಲ್ಲಿ ಕಾರ್ಮೋಡ ಕವಿದಿತ್ತು. ‘ಪರಮಾತ್ಮ’ನೊಂದಿಗೆ ‘ರಾಜಕುಮಾರ’ನ ‘ಮೈತ್ರಿ’ಯಾಗಿತ್ತು. ಒಂದು ಹಿಡಿ ಮಣ್ಣು ಬೆಟ್ಟದಷ್ಟು ಭಾರವಾಗಿತ್ತು.

ಸಮಾಧಿಯ ಮೇಲೆ ತುಳಸಿಗಿಡ ನೆಟ್ಟು, ಪೂಜೆ ಸಲ್ಲಿಸಿ ತಿರುಗಿ ಹೊರಟ ಕುಟುಂಬದ ಮನಸ್ಸಿನಲ್ಲಿ ಅಪ್ಪುವಿನ ನಿಷ್ಕಲ್ಮಶ ನಗುವಿನ ಚಿತ್ರವಿತ್ತು. 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ಶಾಸಕ ಬಿ.ಎಸ್‌.ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಸೇರಿ ರಾಜಕೀಯ ಹಾಗೂ ಚಿತ್ರರಂಗದ ಪ್ರಮುಖರು ಇವೆಲ್ಲವುದಕ್ಕೂ ಸಾಕ್ಷಿಯಾದರು.

ಮಂಗಳವಾರದ ನಂತರ ಸಾರ್ವಜನಿಕರಿಗೆ ದರ್ಶನ

ಮಂಗಳವಾರ ಪುನೀತ್‌ ಸಮಾಧಿಗೆ ಹಾಲು–ತುಪ್ಪ ಬಿಡುವ ಕಾರ್ಯ ನಡೆಸಲು ಕುಟುಂಬದ ಸದಸ್ಯರು ನಿರ್ಧರಿಸಿದ್ದಾರೆ. ಹೀಗಾಗಿ ಅಲ್ಲಿಯವರೆಗೂ ಪುನೀತ್‌ ಅವರ ಸಮಾಧಿ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶವಿಲ್ಲ.  ಈ ಕುರಿತು ಮಾತನಾಡಿದ ನಟ ರಾಘವೇಂದ್ರ ರಾಜ್‌ಕುಮಾರ್‌, ‘ಮಂಗಳವಾರ ಹಾಲು–ತುಪ್ಪ ಬಿಡುವ ಕಾರ್ಯ ನಡೆಯಲಿದ್ದು, ಇದಾದ ಬಳಿಕ ಸಾರ್ವಜನಿಕರಿಗೆ ಕಂಠೀರವ ಸ್ಟುಡಿಯೊ ಒಳಗಡೆ ಪುನೀತ್‌ ಸಮಾಧಿ ನೋಡಲು ಅವಕಾಶ ನೀಡಲಾಗುವುದು ಎಂದರು.

‘ಈ ಭಾರ ನಮ್ಮ ಕೊನೆಯವರೆಗೂ ಇರಲಿದೆ. ತಂದೆ– ತಾಯಿಯನ್ನು ಇಷ್ಟಪಟ್ಟು ಅಪ್ಪು ಬೇಗ ಹೋಗಿದ್ದಾನೆ ಎನಿಸುತ್ತಿದೆ. ಅಭಿಮಾನಿಗಳ ಪ್ರೀತಿಗೆ ಏನೂ ಹೇಳಲು ಸಾಧ್ಯವಿಲ್ಲ. ಮೂರು ದಿನ ಕಳೆದರೂ ಲಕ್ಷಾಂತರ ಜನ ಇನ್ನೂ ಬರುತ್ತಿದ್ದಾರೆ. ಇದಕ್ಕಾಗಿಯೇ ಅಪ್ಪಾಜಿ ಅಭಿಮಾನಿ ದೇವರುಗಳು ಎಂದಿದ್ದರು. ಅಪ್ಪಾಜಿ ಅಂತ್ಯಕ್ರಿಯೆ ಸಂದರ್ಭದಲ್ಲಿ ಜನರೇ ಕಂಠೀರವ ಸ್ಟುಡಿಯೊ ಒಳಗೆ ಹೋಗಿ ಕುಟುಂಬಸ್ಥರಿಗಿಂತ ಮೊದಲೇ ಹಾಲು–ತುಪ್ಪ ಬಿಟ್ಟಿದ್ದರು. ಮಣ್ಣನ್ನೂ ತೋಡಿದ್ದರು. ಹೀಗಾಗಿ ಈ ಬಾರಿ ಹಾಗೆ ಆಗಬಾರದು ಎಂದು ಕುಟುಂಬಸ್ಥರು ಹಾಲು–ತುಪ್ಪ ಬಿಟ್ಟ ಬಳಿಕ ಸಾರ್ವಜನಿಕರಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದರು.

ಆತ್ಮಹತ್ಯೆಗೆ ಮುಂದಾಗಬೇಡಿ: ಶಿವಣ್ಣ ಕರೆ

‘ಅಪ್ಪು ಇಲ್ಲ ಎಂದೆನ್ನಲು ಕಷ್ಟವಾಗುತ್ತದೆ. ನೋವಾಗುತ್ತದೆ. ಏಕೆಂದರೆ ಚಿಕ್ಕವನು. ಸಣ್ಣ ವಯಸ್ಸು. ಅದೆಷ್ಟು ಬೇಗ ಭಗವಂತನಿಗೆ ಆತ ಇಷ್ಟವಾಗಿಬಿಟ್ಟ ಎಂದರೆ ನಮಗದು ನೋವು ಕೊಡುತ್ತದೆ. ಅಭಿಮಾನಿ ದೇವರುಗಳಿಗೆ ನೋವು ಕೊಡುತ್ತದೆ. ನಮಗಿಂತ ಹೆಚ್ಚಾಗಿ ಅಭಿಮಾನಿಗಳಿಗೆ ನೋವಾಗಿದೆ. ಹೀಗೆಂದು ಆತ್ಮಹತ್ಯೆಯಂಥ ನಿರ್ಧಾರ ತೆಗೆದುಕೊಳ್ಳಬೇಡಿ’ ಎಂದು ನಟ ಶಿವರಾಜ್‌ಕುಮಾರ್‌ ಮನವಿ ಮಾಡಿದರು.

ಪುನೀತ್‌ ಅಕಾಲಿಕ ನಿಧನದಿಂದಾಗಿ ತೀವ್ರ ಆಘಾತಕ್ಕೆ ಒಳಗಾಗಿದ್ದ ಶಿವರಾಜ್‌ಕುಮಾರ್‌ ಮೌನಕ್ಕೆ ಶರಣಾಗಿದ್ದರು. ಅಂತ್ಯಕ್ರಿಯೆ ಬಳಿಕ ಸದಾಶಿವನಗರದಲ್ಲಿರುವ ಪುನೀತ್‌ ನಿವಾಸದ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಅಪ್ಪು ನನ್ನಲ್ಲಿದ್ದಾನೆ, ರಾಘುವಿನಲ್ಲಿದ್ದಾನೆ. ಅದಕ್ಕಿಂತ ಹೆಚ್ಚಾಗಿ ಅಭಿಮಾನಿಗಳ ಹೃದಯದಲ್ಲಿದ್ದಾನೆ. ದಯವಿಟ್ಟು ಆತ್ಮಹತ್ಯೆಯಂತಹ ನಿರ್ಧಾರ ಕೈಗೊಳ್ಳಬೇಡಿ. ನಿಮಗೂ ಕುಟುಂಬವಿದೆ. ಅಪ್ಪು ಇಂತಹ ನಿರ್ಧಾರಗಳನ್ನು ಇಷ್ಟಪಡುತ್ತಿಲ್ಲ. ಅಂಥ ನಿರ್ಧಾರ ಮಾಡಬೇಡಿ. ದಯವಿಟ್ಟು ನಿಮ್ಮ ಕುಟುಂಬಗಳನ್ನು ನೀವು ನೋಡಿಕೊಳ್ಳಿ. ಏಕೆಂದರೆ ಅಗತ್ಯ ಕುಟುಂಬಕ್ಕೆ ಇರುತ್ತದೆ. ಇದನ್ನು ಕಳೆದುಕೊಳ್ಳಬೇಡಿ. ನಾವೆಲ್ಲವೂ ಇಲ್ಲವೇ. ನೋವನ್ನು ನುಂಗಿಕೊಂಡು ಸಾಗಬೇಕು’ ಎಂದರು. 

‘ಕಂಠೀರವ ಸ್ಟೇಡಿಯಂನಲ್ಲಿ ಅಭಿಮಾನಿಗಳು ಕುಟುಂಬ ಸಮೇತರಾಗಿ ಬಂದು ಅಪ್ಪು ಅಪ್ಪು ಎಂದು ಕರೆದು ಅತ್ತಾಗ ನನಗೂ ನೋವಾಗಿತ್ತು. ಈ ನೋವು ನೋಡಿದಾಗ ಅವಸರವಾಗಿ ದೇವರು ಕರೆದುಕೊಂಡುಬಿಟ್ಟನೇ ಎಂದೆನಿಸಿಬಿಡುತ್ತದೆ. ಇದನ್ನು ಜೀರ್ಣಿಸಿಕೊಳ್ಳಲು ಆಗುವುದಿಲ್ಲ. ಇಲ್ಲೇ ಎಲ್ಲೋ ಹೊರಗೆ ಹೋಗಿದ್ದಾನೆ, ಊರಿಗೆ ಹೋಗಿದ್ದಾನೆ, ಬರಬಹುದೇನೋ ಎಂಬ ಭಾವನೆ. ನಾನು ಅವನಿಗಿಂತ 13 ವರ್ಷ ದೊಡ್ಡವನು. ಅವನನ್ನು ಮಗುವಾಗಿರುವಾಗಲಿಂದ ನೋಡಿದ್ದೇನೆ. ನನ್ನ ಮಗುವನ್ನೇ ಕಳೆದುಕೊಂಡಂತೆ ಅನಿಸುತ್ತಿದೆ. ಅಪ್ಪು ಕುಟುಂಬದ ಜೊತೆ ನಾವೆಲ್ಲರೂ ಇದ್ದೇವೆ. ಅವನ ಆಸೆ, ಆಕಾಂಕ್ಷೆಗಳನ್ನು ಈಡೇರಿಸಲು ನಾವು ಪ್ರಯತ್ನ ಮಾಡುತ್ತೇವೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು