ಹೊಸ ಆವಿಷ್ಕಾರಗಳಲ್ಲಿ ಕನ್ನಡ ಭಾಷೆ ಬಳಸಿ: ಕವಿ ಬಿ.ಆರ್. ಲಕ್ಷ್ಮಣ ರಾವ್ ಕಿವಿಮಾತು

ಬೆಂಗಳೂರು: ‘ಕನ್ನಡ ಹೃದಯದ ಭಾಷೆಯಾದರೆ ಮಾತ್ರವೇ ಜಗತ್ತಿನೆಲ್ಲೆಡೆ ಕನ್ನಡ ಪಸರಿಸಲು ಸಾಧ್ಯ. ಮುಂದಿನ ಪೀಳಿಗೆಯ ಯುವಕರು ಹೊಸ ಆವಿಷ್ಕಾರಗಳಲ್ಲೂ ಕನ್ನಡ ಬಳಸುವ ಬಗ್ಗೆ ಯೋಚಿಸಿ, ಕಾರ್ಯಗತ ಮಾಡಬೇಕು’ ಎಂದು ಕವಿ ಬಿ.ಆರ್. ಲಕ್ಷ್ಮಣ ರಾವ್ ತಿಳಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಗರದಲ್ಲಿ ಮಂಗಳವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣದ ವಿದ್ಯಾರ್ಥಿಗಳಿಗೆ 2019–20ನೇ ಸಾಲಿನ ‘ಕನ್ನಡ ಮಾಧ್ಯಮ ಪ್ರಶಸ್ತಿ’ ಪ್ರದಾನ ಮಾಡಿ, ಮಾತನಾಡಿದರು.
‘ಭಾಷೆ ಎಂಬುದು ನಮ್ಮ ಅಸ್ಮಿತೆ ಮತ್ತು ಸಾಂಸ್ಕೃತಿಕ ಧಾತು. ನಾವು ಯಾವುದೇ ರಾಜ್ಯ, ದೇಶದಲ್ಲಿ ನೆಲೆಸಿದ್ದರೂ ಕನ್ನಡ ಭಾಷೆ ನಮ್ಮೆಲ್ಲರನ್ನೂ ಒಗ್ಗೂಡಿಸಲಿದೆ’ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ, ‘ಜಾಗತಿಕ ಮಟ್ಟದಲ್ಲಿ ಕನ್ನಡ ಕಟ್ಟಲು ಹಾಗೂ ಕನ್ನಡವನ್ನು ಉದ್ಯೋಗದ ಭಾಷೆಯನ್ನಾಗಿಸಲು ಪ್ರಾಧಿಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ’ ಎಂದು ತಿಳಿಸಿದರು.
ಕನ್ನಡ ಮಾಧ್ಯಮದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ವ್ಯಾಸಂಗ ಮಾಡಿದ ತೆಲಂಗಾಣದ 15 ವಿದ್ಯಾರ್ಥಿಗಳು, ಆಂಧ್ರ ಪ್ರದೇಶದ 71 ವಿದ್ಯಾರ್ಥಿಗಳು ಹಾಗೂ ಪಿಯುಸಿಯಲ್ಲಿ ವ್ಯಾಸಂಗ ಮಾಡಿದ 4 ವಿದ್ಯಾರ್ಥಿಗಳಿಗೆ ‘ಕನ್ನಡ ಮಾಧ್ಯಮ ಪ್ರಶಸ್ತಿ’ ನೀಡಲಾಯಿತು. ಒಟ್ಟು 90 ವಿದ್ಯಾರ್ಥಿಗಳಿಗೆ ₹ 9.91 ಲಕ್ಷ ನಗದು ಬಹುಮಾನ ವಿತರಿಸಲಾಯಿತು.
ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ಲ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.