ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒಳ್ಳೆಯ ಶಾಲೆಯಾದರೆ ಕನ್ನಡ ಮಾಧ್ಯಮಕ್ಕೆ ಜೈ’

ಮುನ್ನೋಟ ಸಂಸ್ಥೆಯಿಂದ ಟ್ವಿಟರ್‌ನಲ್ಲಿ ಸಮೀಕ್ಷೆ
Last Updated 12 ಏಪ್ರಿಲ್ 2021, 21:43 IST
ಅಕ್ಷರ ಗಾತ್ರ

ಬೆಂಗಳೂರು: ‘ಒಳ್ಳೆಯ ಶಾಲೆ ಸಿಕ್ಕರೆ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಕೊಡಿಸುತ್ತೇವೆ’....

ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸುವ ಕುರಿತು ಪೋಷಕರ ಮನದಿಂಗಿತ ಅರಿಯಲು ಮುನ್ನೋಟ ಸಂಸ್ಥೆಯು ಟ್ವಿಟರ್‌ನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ 77.1ರಷ್ಟು ಮಂದಿ ವ್ಯಕ್ತಪಡಿಸಿರುವ ಅಭಿಪ್ರಾಯವಿದು. ಟ್ವಿಟರ್‌ನಲ್ಲಿ ಏ.3ರಿಂದ ಮೂರು ದಿನಗಳವರೆಗೆ ನಡೆಸಿದಸಮೀಕ್ಷೆಯಲ್ಲಿ 650 ಮಂದಿ ಭಾಗವಹಿಸಿದ್ದರು.

ಸಮೀಕ್ಷೆಯ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವ ಜೊತೆಗೆ ಕೆಲ ಪೋಷಕರು ಟ್ವೀಟ್‌ನಲ್ಲಿ ಅಭಿಪ್ರಾಯಗಳನ್ನೂ ಹಂಚಿಕೊಂಡಿದ್ದರು. ಕನ್ನಡ ಮಾಧ್ಯಮ ಶಿಕ್ಷಣದ ಮಹತ್ವದ ಕುರಿತ ಸ್ವಾರಸ್ಯಕರ ಚರ್ಚೆಗೂ ಈ ಸಮೀಕ್ಷೆಯು ವೇದಿಕೆ ಕಲ್ಪಿಸಿತು.

ಮನೆಯವರು ಒಪ್ಪದ ಕಾರಣಕ್ಕೆ ಕೆಲವು ಪೋಷಕರು ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೇರಿಸುತ್ತಿಲ್ಲ. ಇನ್ನು ಕೆಲವರು ‘ಕನ್ನಡ ಪಠ್ಯಗಳು, ಅದರಲ್ಲೂ ಗಣಿತ ಮತ್ತು ವಿಜ್ಞಾನ ಪಠ್ಯಗಳಲ್ಲಿ ಬಳಸಲಾಗಿರುವ ಕ್ಲಿಷ್ಟಕರವಾದ ಪದಗಳಿಂದ ಮಕ್ಕಳಿಗೆ ಸಮಸ್ಯೆ ಆಗುತ್ತಿದೆ’ ಎಂಬ ಅಭಿಪ್ರಾಯ ಹೊಂದಿದ್ದಾರೆ. ಮತ್ತೆ ಕೆಲವರು ಶಾಲೆಯ ಆಯ್ಕೆ ಕುರಿತ ಗೊಂದಲದಲ್ಲಿದ್ದಾರೆ.

ಕನ್ನಡ ಮಾಧ್ಯಮದ ಜೊತೆ ಸಂಪರ್ಕ ಭಾಷೆಯಾಗಿ ಇಂಗ್ಲಿಷ್‌ ಕಲಿಸುವ ಅಗತ್ಯದ ಬಗ್ಗೆಯೂ ಕೆಲವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ಬೆಂಗಳೂರಿನ ಕನ್ನಡ ಶಾಲೆಯಲ್ಲಿ ಸ್ಪೋಕನ್‌ ಇಂಗ್ಲಿಷ್‌ ತರಗತಿಗಳಿವೆಯೇ. ಇಂಗ್ಲಿಷ್‌ ಬಾರದೇ ಇದ್ದರೆ ಸಹವರ್ತಿಗಳಿಂದ ಎದುರಾಗುವ ಒತ್ತಡಕ್ಕೆ ಮಕ್ಕಳು ಒಳಗಾಗಬಾರದು. ಈ ಸಮಸ್ಯೆ ಪರಿಹಾರವಾದರೆ ಸೇರಿಸಲು ಅಡ್ಡಿ ಇಲ್ಲ’ ಎಂದು ಗುರುಪ್ರಸಾದ್‌ ತಿಮ್ಮಾಪುರ ತಿಳಿಸಿದ್ದಾರೆ.

‘ಕನ್ನಡ ಮಾಧ್ಯಮದಲ್ಲಿ ಮಕ್ಕಳನ್ನು ಓದಿಸಿದರೆ ಹೊಸ ಜಗತ್ತಿನ ಪೈಪೋಟಿಯಲ್ಲಿ ಅವರು ಹಿಂದೆ ಬೀಳಬಹುದು’ ಎಂದು ಸಿ. ವೀರೇಂದ್ರ ಆತಂಕ ತೋಡಿಕೊಂಡಿದ್ದಾರೆ.

ಇದನ್ನು ಒಪ್ಪದ ಅನೇಕರು, ‘ಇಂತಹ ಆತಂಕ ಅನಗತ್ಯ. ಕನ್ನಡ ಮಾಧ್ಯಮದಲ್ಲಿ ಕಲಿತ ಸಾವಿರಾರು ಮಂದಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲೂ ಯಶಸ್ವಿಯಾಗಿದ್ದಾರೆ’ ಎಂದು ಉದಾಹರಣೆಗಳನ್ನು ನೀಡಿದ್ದಾರೆ.

‘ಒಳ್ಳೆಯ ಶಾಲೆ ಇರಲಿ, ಬಿಡಲಿ ನಾನು ಕನ್ನಡ ಮಾಧ್ಯಮದಲ್ಲೇ ಮಕ್ಕಳನ್ನು ಓದಿಸುತ್ತೇನೆ’ ಎಂದು ಮೋಹನ ಬಿ.ಟಿ.ದೇವನೂರು ತಿಳಿಸಿದ್ದಾರೆ. ತಮ್ಮ ಮಕ್ಕಳನ್ನು ಕನ್ನಡ ಶಾಲೆಯಲ್ಲೇ ಕಲಿಸುತ್ತಿರುವುದಾಗಿಅನೇಕರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

‘ಮಕ್ಕಳು ಆಲೋಚಿಸುವ ಹಾಗೂ ಕನಸು ಕಾಣುವ ತಾಯ್ನುಡಿಯಲ್ಲೇ ಪ್ರಾಥಮಿಕ ಶಿಕ್ಷಣ ಸಿಗಬೇಕು. ಇದು ವೈಜ್ಞಾನಿಕವಾಗಿಯೂಸಾಬೀತಾಗಿದೆ. ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲೇ ಓದಿಸಲು ಇಷ್ಟೊಂದು ಪ್ರಮಾಣದಲ್ಲಿ ಪೋಷಕರು ಒಲವುಹೊಂದಿರುವುದು ಅಚ್ಚರಿಯ ಜೊತೆ ಸಂತಸದ ವಿಚಾರ. ಬೆಂಗಳೂರಿನಲ್ಲಿ ಕನ್ನಡ ಮಾಧ್ಯಮದ ಪಾಲಕರ ಗುಂಪೊಂದನ್ನು ಕಟ್ಟಲು ಇದು ನಾಂದಿಯಾಗಲಿ’ ಎಂದು ‘ಮುನ್ನೋಟ’ದ ವಸಂತ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ಉತ್ತಮ ಕನ್ನಡ ಶಾಲೆಗಳ ಪಟ್ಟಿ ತಯಾರಿ

ಮುನ್ನೋಟ ಸಂಸ್ಥೆಯು, ಈಗಿನ ಕಾಲದ ಅಗತ್ಯಗಳಿಗೆ ತಕ್ಕಂತೆ ಕನ್ನಡ ಮಾಧ್ಯಮದಲ್ಲೇ ಗುಣಮಟ್ಟದ ಶಿಕ್ಷಣ ನೀಡುವ ಶಾಲೆಗಳು ಎಲ್ಲೆಲ್ಲಿವೆ ಎಂಬುದನ್ನು ಗುರುತಿಸಿ ಈ ಬಗ್ಗೆ ಆನ್‌ಲೈನ್‌ನಲ್ಲಿ (https://kannadamaadhyama.wordpress.com) ಮಾಹಿತಿ ಹಂಚಿಕೊಳ್ಳುತ್ತಿದೆ.

‘ಉತ್ತಮ ಕನ್ನಡ ಶಾಲೆಗಳ ಬಗ್ಗೆ ತಿಳಿದಿರುವವರು ಈ ಬಗ್ಗೆ ಮಾಹಿತಿ ಹಂಚಿಕೊಳ್ಳಬಹುದು. ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸಲು ಆಸಕ್ತಿ ಹೊಂದಿರುವ ಪೋಷಕರ ಗಮನಕ್ಕೆ ಇದನ್ನು ತರಲು ಅನುಕೂಲವಾಗುತ್ತದೆ’ ಎಂದು ವಸಂತ ಶೆಟ್ಟಿ ತಿಳಿಸಿದರು.

ಮಾಹಿತಿ ಹಂಚಿಕೊಳ್ಳಲು ಇಮೇಲ್‌: prashant@munnota.com ಅಥವಾ vasant@munnota.com

ಕನ್ನಡ ಶಾಲೆ ಮಕ್ಕಳಿಗೆ ಇಂಗ್ಲಿಷ್‌ ತರಬೇತಿ

ಕನ್ನಡ ಮಾಧ್ಯಮದಲ್ಲಿ ಕಲಿಯುವ ಮಕ್ಕಳಿಗೆ ಸಂಪರ್ಕ ಭಾಷೆಯಾಗಿ ಇಂಗ್ಲಿಷ್‌ ಕಲಿಸುವ ಪ್ರಯತ್ನದಲ್ಲೂ ಮುನ್ನೋಟ ಸಂಸ್ಥೆ ತೊಡಗಿಸಿಕೊಂಡಿದೆ. ವೈಜ್ಞಾನಿಕ ಮಾಹಿತಿಗಳ ವಿಡಿಯೊಗಳನ್ನು ಕನ್ನಡಕ್ಕೆ ಡಬ್ ಮಾಡಿ ‘ತಿಳಿ’ ಯೂಟ್ಯೂಬ್‌ ಚಾನೆಲ್‌ ಮೂಲಕ ಒದಗಿಸುತ್ತಿದೆ.

‘ನಗರದ ವಿವಿಧ ಕನ್ನಡ ಶಾಲೆಗಳ ವಿದ್ಯಾರ್ಥಿಗಳಿಗೆ ಆರು ತಿಂಗಳು ಇಂಗ್ಲಿಷ್‌ ತರಬೇತಿ ನೀಡಲು ವ್ಯವಸ್ಥೆ ಮಾಡಿದ್ದೇವೆ. ಆನ್‌ಲೈನ್‌ ಮಾಧ್ಯಮವನ್ನು ಬಳಸಿ ರಾಜ್ಯದ ಬೇರೆ ಬೇರೆ ಕಡೆಯ ಕನ್ನಡ ಶಾಲೆಗಳ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ತರಬೇತಿ ನೀಡುವ ಚಿಂತನೆಯೂ ಇದೆ’ ಎಂದು ವಸಂತ ಶೆಟ್ಟಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT