ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ಚಿತ್ರರಂಗದಲ್ಲಿ 50 ವರ್ಷದ ದುಡಿಮೆಗೆ ಸಿಕ್ಕ ಫಲ

ಕೊಡಗಿನ ನಿರ್ದೇಶಕ ಆಪಾಡಂಡ ತಿಮ್ಮಯ್ಯ ರಘು ಅವರಿಗೆ ರಾಜ್ಯೋತ್ಸವ ಪುರಸ್ಕಾರ
Last Updated 28 ಅಕ್ಟೋಬರ್ 2020, 12:10 IST
ಅಕ್ಷರ ಗಾತ್ರ

ಮಡಿಕೇರಿ: ‘ಸುಮಾರು 50 ವರ್ಷಗಳ ಚಿತ್ರರಂಗದಲ್ಲಿ ದುಡಿಮೆ ಮಾಡಿದ್ದಕ್ಕೆ ಸಾರ್ಥಕವಾಯಿತು. ಪ್ರಶಸ್ತಿಯೇ ನನಗೆ ಇದೇ ದೊಡ್ಡ ಆಸ್ತಿ. ಶ್ರಮಕ್ಕೆ ಕೊನೆಗೂ ಫಲ ಸಿಕ್ಕಿದೆ’.– ಹೀಗೆಂದವರು ಕೊಡಗಿನ ನಿರ್ದೇಶಕ ಆಪಾಡಂಡ ತಿಮ್ಮಯ್ಯ ರಘು (ಎ.ಟಿ. ರಘು).

ಈ ಸಾಲಿನ ಚಲನಚಿತ್ರ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಅವರು ಆಸ್ಪತ್ರೆಯಿಂದಲೇ ದೂರವಾಣಿ ಮೂಲಕ ಸಂತಸ ಹಂಚಿಕೊಂಡರು.

‘ಕೆಲವು ದಿನಗಳಿಂದ ಅರೋಗ್ಯದಲ್ಲಿ ಏರುಪೇರಾಗಿದ್ದು, ಡಯಾಲಿಸಿಸ್‌ಗೆ ಒಳಗಾಗಿರುವೆ. ಕಣ್ಣುಗಳ ಶಸ್ತ್ರಚಿಕಿತ್ಸೆಯೂ ಆಗಿದೆ’ ಎಂದ ಅವರು, ಆ ನೋವಿನ ನಡುವೆಯೂ ರಘು ಅವರು ಪ್ರಶಸ್ತಿಯ ಸಂಭ್ರಮ ಹಂಚಿಕೊಂಡರು.

‘1965ರಲ್ಲಿ ಸಣ್ಣ ಪಾತ್ರದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಪ್ರವೇಶಿಸಿದೆ. 40ಕ್ಕೂ ಹೆಚ್ಚು ಸಿನಿಮಾ ನಿರ್ದೇಶನ ಮಾಡಿದ್ದೇನೆ‘ ಎಂದು ರಘು ಹೇಳಿದರು.

‘ರೆಬೆಲ್ ಸ್ಟಾರ್‌’ ದಿವಂಗತ ಅಂಬರೀಶ್‌ ಅವರು ನಟಿಸಿದ ಸಿನಿಮಾಗಳನ್ನೇ ಹೆಚ್ಚು ನಿರ್ದೇಶನ ಮಾಡಿರುವೆ. ಅವರ 25 ಸಿನಿಮಾ ನಿರ್ದೇಶನ ಮಾಡಿರುವ ತೃಪ್ತಿಯಿದೆ. 70ರ ದಶಕದಲ್ಲಿ ‘ದೇವರ ಕಣ್ಣು’ ಎಂಬ ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೆ. ಕಾಫಿ ನಾಡಿನಿಂದ ಬಂದ ರಘು ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಅಂಬರೀಶ್ ಅವರೇ ಪ್ರಮುಖ ಕಾರಣ’ ಎಂದು ತಿಳಿಸಿದರು.

ರಘು ಅವರು ನಿರ್ದೇಶಕ ಬಿ. ವಿಠಲಾಚಾರ್ಯ ಜೊತೆಯಲ್ಲಿ ಕೆಲಸ ಮಾಡಿದ್ದರು. ವೈ.ಆರ್. ಸ್ವಾಮಿ ಅವರಿಗೆ ಸಹಾಯಕ ನಿರ್ದೇಶಕರಾಗಿದ್ದರು. ಬಳಿಕ ಸ್ವತಂತ್ರವಾಗಿ ಸಿನಿಮಾ ನಿರ್ದೇಶಿಸಿದರು.

1980ರಲ್ಲಿ ‘ನ್ಯಾಯ ನೀತಿ ಧರ್ಮ ಚಿತ್ರ’ದ ಮೂಲಕ ನಿರ್ದೇಶಕರಾದರು. ಶಂಕರ್ ಸುಂದರ್, ಆಶಾ, ಅವಳ ನೆರಳು, ಧರ್ಮಯುದ್ಧ, ಮೇರಿ ಅದಾಲತ್, ಗುಂಡ–ಗುರು, ಗುರು ಜಗದ್ಗುರು, ಕಾಡಿನ ರಾಜ, ದೇವರ ಮನೆ, ಕಟ್ಟು ರಾಣಿ, ಪ್ರೀತಿ, ಅಂತಿಮ ತೀರ್ಪು, ಇನ್‌ಸ್ಪೆಕ್ಟರ್‌ ಕ್ರಾಂತಿಕುಮಾರ್, ಆಪಾದ್ಭಾಂದವ, ಕೃಷ್ಣ ಮೆಚ್ಚಿದ ರಾಧೆ, ಪದ್ಮವ್ಯೂಹ, ನ್ಯಾಯಕ್ಕಾಗಿ ನಾನು, ಅಜಯ್ ವಿಜಯ್, ಕೆಂಪು ಸೂರ್ಯ, ಪುಟ್ಟ ಹೆಂಡ್ತಿ, ಮೈಸೂರು ಜಾಣ, ಸೂರ್ಯೋದಯ, ಮಿಡಿದ ಹೃದಯಗಳು, ಜೈಲರ್ ಜಗನ್ನಾಥ್, ಮಂಡ್ಯದ ಗಂಡು, ಶ್ರಾವಣ ಸಂಜೆ, ಬೇಟೆಗಾರ, ರ‍್ಯಾಂಬೋ ರಾಜ, ರಿವಲ್ವಾರ್ ರಾಣಿ, ಜೆನಿಫರ್ ಈ ಲವ್ ಯು ಚಿತ್ರಗಳನ್ನು ಎ.ಟಿ.ರಘು ನಿರ್ದೇಶಿಸಿದ್ದಾರೆ. ರಘು ಅವರು ಕನ್ನಡ ಚಿತ್ರ ಮಾತ್ರವಲ್ಲದೆ, ಹಿಂದಿ ಹಾಗೂ ಮಲಯಾಲಂ ಚಿತ್ರವನ್ನೂ ನಿರ್ದೇಶಿಸಿದ್ದಾರೆ. 1984ರಲ್ಲಿ ಮೇರಿ ಅದಾಲತ್ ಚಿತ್ರವನ್ನು ನಿರ್ದೇಶಿಸಿದ್ದರು. 1985ರಲ್ಲಿ ಮಲಯಾಲಂನ ಕಟ್ಟು ರಾಣಿ ಚಿತ್ರ ನಿರ್ದೇಶಿಸಿದ್ದ ಹೆಗ್ಗಳಿಕೆ ರಘು ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT