ಮಂಗಳವಾರ, ಆಗಸ್ಟ್ 16, 2022
30 °C
ಆಯ್ಕೆಯಾದವರಿಗೆ ₹ 1 ಲಕ್ಷ ಗೌರವ ಧನ ಘೋಷಿಸಿದ ಮನು ಬಳಿಗಾರ್

ಗೊರುಚ ಸೇರಿ ಐವರಿಗೆ ಕಸಾಪ ಗೌರವ ಸದಸ್ಯತ್ವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಗೌರವ ಸದಸ್ಯರಾಗಿ ಗೊ.ರು. ಚನ್ನಬಸಪ್ಪ, ವೀಣಾ ಶಾಂತೇಶ್ವರ ಸೇರಿದಂತೆ ಐವರು ಆಯ್ಕೆಯಾಗಿದ್ದಾರೆ.

ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ನೇತೃತ್ವದ ಆಯ್ಕೆ ಸಮಿತಿಯು ಶನಿವಾರ ಸಭೆ ನಡೆಸಿ, ಗೌರವ ಸದಸ್ಯರನ್ನು ಆಯ್ಕೆ ಮಾಡಿದೆ. ಸಾಹಿತಿ ವೀಣಾ ಶಾಂತೇಶ್ವರ, ಜಾನಪದ ವಿದ್ವಾಂಸ ಗೊ.ರು. ಚನ್ನಬಸಪ್ಪ, ಸಂಶೋಧಕ ಹಂ.ಪ. ನಾಗರಾಜಯ್ಯ, ಕವಿ ದೊಡ್ಡರಂಗೇಗೌಡ ಹಾಗೂ ಬಹುಭಾಷಾ ವಿದ್ವಾಂಸ ಮಲ್ಲೇಪುರಂ ಜಿ. ವೆಂಕಟೇಶ್ ಅವರು ಗೌರವ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಗೌರವ ಸದಸ್ಯರಿಗೆ ತಲಾ ₹ 1 ಲಕ್ಷ ಗೌರವ ಧನವನ್ನು ಕಸಾಪ ಘೋಷಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮನು ಬಳಿಗಾರ್, ‘ಕನ್ನಡ ನಾಡು ನುಡಿಗಾಗಿ ಗಣನೀಯ ಸೇವೆ ಸಲ್ಲಿಸಿರುವ ಹಿರಿಯರಿಗೆ ಪರಿಷತ್ತಿನ ಗೌರವ ಸದಸ್ಯತ್ವ ನೀಡಿ ಸನ್ಮಾನಿಸುವ ಸಂಪ್ರದಾಯ 1985ರಿಂದಲೂ ನಡೆದು ಬಂದಿದೆ. ಈ ಹಿಂದೆ ಆಯ್ಕೆಯಾಗಿದ್ದ ಐವರು ಗೌರವ ಸದಸ್ಯರಲ್ಲಿ ನಾಲ್ವರು ನಮ್ಮನ್ನು  ಅಗಲಿದ್ದಾರೆ. ಡಾ.ಎಚ್‌.ಜೆ. ಲಕ್ಕಪ್ಪಗೌಡ ಮಾತ್ರ ನಮ್ಮೊಂದಿಗೆ ಇದ್ದಾರೆ. ಕಳೆದ ಕೆಲ ವರ್ಷಗಳಿಗೆ ಹೋಲಿಸಿದಲ್ಲಿ ಪರಿಷತ್ತಿನ ಸದಸ್ಯರ ಸಂಖ್ಯೆ ಈಗ ಹಲವು ಪಟ್ಟು ಹೆಚ್ಚಳವಾಗಿದೆ. ಹೀಗಾಗಿ ಐವರು ಗೌರವ ಸದಸ್ಯರನ್ನು ಆಯ್ಕೆ ಮಾಡಿದ್ದೇವೆ’ ಎಂದು ತಿಳಿಸಿದರು.

‘ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗದವರು, ಜ್ಞಾನಪೀಠ, ನೃಪತುಂಗ ಹಾಗೂ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆಯದವರನ್ನು ಗೌರವ ಸದಸ್ಯ ಸ್ಥಾನಕ್ಕೆ ಪರಿಗಣಿಸಲಾಗಿದೆ. ಇದೇ ಮೊದಲ ಬಾರಿ ಗೌರವ ಧನವನ್ನು ನೀಡಲಾಗುತ್ತಿದ್ದು, ಅವರ ಸಮಗ್ರ ಸಾಹಿತ್ಯ ಸಾಧನೆಯನ್ನು ಒಳಗೊಂಡ ಪುಸ್ತಕವನ್ನೂ ಪ್ರಕಟಿಸಲಾಗುತ್ತದೆ. ತಾಮ್ರ ಫಲಕದೊಂದಿಗೆ ಅವರನ್ನು ಗೌರವಿಸಲಾಗುತ್ತದೆ. ಆಯ್ಕೆಯಾದವರು ಆಜೀವಪರ್ಯಂತ ಪರಿಷತ್ತಿನ ಸದಸ್ಯರಾಗಿರುತ್ತಾರೆ’ ಎಂದು ವಿವರಿಸಿದರು.

ಆಯ್ಕೆ ಸಮಿತಿ ಸಭೆಯ ಸದಸ್ಯ ಎಸ್‌.ಆರ್. ವಿಜಯಶಂಕರ, ಗೌರವ ಕೋಶಾಧ್ಯಕ್ಷ ಪಿ. ಮಲ್ಲಿಕಾರ್ಜುನಪ್ಪ, ಗೌರವ ಕಾರ್ಯದರ್ಶಿ ಕೆ. ರಾಜಕುಮಾರ್ ಹಾಗೂ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕ ಪದ್ಮರಾಜ ದಂಡಾವತಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.