ಗುರುವಾರ , ಮಾರ್ಚ್ 23, 2023
30 °C
ಸಾಹಿತ್ಯ ಪರಿಷತ್ತಿನಿಂದ ಕಾರ್ಯಯೋಜನೆ

ಇದೇ ವರ್ಷ ಮಂಡ್ಯ ಸಾಹಿತ್ಯ ಸಮ್ಮೇಳನ: ಮುಂದಿನ ತಿಂಗಳು ಸಭೆ

ವರುಣ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಂಡ್ಯದಲ್ಲಿ ಇದೇ ವರ್ಷ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನಿರ್ಧರಿಸಿದೆ. ಇದರಿಂದಾಗಿ ಒಂದೇ ವರ್ಷ ಎರಡು ಸಮ್ಮೇಳನ ನಡೆಸಿದಂತಾಗಲಿದೆ. 

ಹಾವೇರಿಯಲ್ಲಿ ನಡೆದ ಪರಿಷತ್ತಿನ ಕಾರ್ಯಕಾರಿಣಿ ಸಭೆಯಲ್ಲಿ ಮುಂದಿನ ಸಮ್ಮೇಳನದ ಆತಿಥ್ಯವನ್ನು ಮಂಡ್ಯಕ್ಕೆ ನೀಡಲಾಗಿದೆ. ಕಸಾಪ 1915ರಿಂದ ನಿಯಮಿತವಾಗಿ ಸಾಹಿತ್ಯ ಸಮ್ಮೇಳನವನ್ನು ನಡೆಸಿಕೊಂಡು ಬರುತ್ತಿದೆ. ವರ್ಷಕ್ಕೊಮ್ಮೆ ನಡೆಯಬೇಕಿದ್ದ ಈ ಸಮ್ಮೇಳನ, ಕಾರಣಾಂತರಗಳಿಂದ ಈ ಹಿಂದೆಯೂ ವರ್ಷಕ್ಕೆ ಎರಡು ಬಾರಿ ನಡೆದಿದೆ.

2020ರ ಫೆ.5ರಿಂದ ಫೆ.7ರವರೆಗೆ 85ನೇ ಸಾಹಿತ್ಯ ಸಮ್ಮೇಳನ ಕಲಬುರಗಿಯಲ್ಲಿ ನಡೆದಿತ್ತು. 2021ರ ಫೆಬ್ರುವರಿ ತಿಂಗಳಲ್ಲಿ 86ನೇ ಸಾಹಿತ್ಯ ಸಮ್ಮೇಳನ ನಡೆಸಲು ಪರಿಷತ್ತಿನ ಹಿಂದಿನ ಕಾರ್ಯಕಾರಿ ಸಮಿತಿ ಕಾರ್ಯಯೋಜನೆ ರೂಪಿಸಿತ್ತು. ಅದರಂತೆ ಸರ್ಕಾರವು 2021ರ ಫೆ.26ರಿಂದ ಫೆ.28ರವರೆಗೆ ಸಮ್ಮೇಳನ ನಡೆಸುವುದಾಗಿ ಘೋಷಿಸಿತ್ತು. ಆದರೆ, ಕೋವಿಡ್‌ನಿಂದಾಗಿ ಸಮ್ಮೇಳನ ನಡೆದಿರಲಿಲ್ಲ. 2022ರ ನ.11ರಿಂದ ನ.13ರವರೆಗೆ ನಡೆಸಲು ನಿರ್ಧರಿಸಿದರೂ, ಅಗತ್ಯ ಸಿದ್ಧತೆ ಆಗದ ಕಾರಣ ಮತ್ತೆ ಮುಂದೂಡಲಾಗಿತ್ತು. ಇದರಿಂದಾಗಿ ಎರಡು ವರ್ಷಗಳ ಬಳಿಕ 86ನೇ ಸಾಹಿತ್ಯ ಸಮ್ಮೇಳನವನ್ನು ನಡೆಸಲಾಯಿತು. ಹೀಗಾಗಿ, ಇದೇ ವರ್ಷ ಡಿಸೆಂಬರ್ ತಿಂಗಳಲ್ಲಿ 87ನೇ ಸಾಹಿತ್ಯ ಸಮ್ಮೇಳನ ನಡೆಸಲು ಪರಿಷತ್ತು ಮುಂದಾಗಿದೆ. 

ಮುಂದಿನ ತಿಂಗಳು ಸಭೆ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಫೆಬ್ರುವರಿ ತಿಂಗಳಲ್ಲಿ ಪೂರ್ವಭಾವಿ ಸಭೆ ನಡೆಸಲು ಪರಿಷತ್ತು ನಿರ್ಧರಿಸಿದೆ. ಬಳಿಕ ಸ್ಥಳ ಪರಿಶೀಲಿಸಿ, ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಕಸಾಪ ಮುಂದಾಗಿದೆ.

‘ಡಿಸೆಂಬರ್ ತಿಂಗಳಲ್ಲಿ ಕ್ರಿಸ್ಮಸ್ ರಜೆ ಇರುವುದರಿಂದ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ವಿದೇಶಿ ಕನ್ನಡಿಗರಿಗೂ ಅನುಕೂಲ ಆಗಲಿದೆ. ಸಮ್ಮೇಳನದ ಅನುದಾನಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು’ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದರು. 

 ಸಮ್ಮೇಳನ: ಹೆಚ್ಚುತ್ತಿರುವ ವೆಚ್ಚ

ಸಾಹಿತಿಗಳು, ಸಾಹಿತ್ಯಾಸಕ್ತರು ಹಾಗೂ ಕನ್ನಡಿಗರನ್ನು ಒಂದೆಡೆ ಸೇರಿಸುವ ಅಕ್ಷರ ಜಾತ್ರೆಯ ವೆಚ್ಚವು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಸರ್ಕಾರವು ಮೈಸೂರಿನಲ್ಲಿ ನಡೆದ 83ನೇ ಸಾಹಿತ್ಯ ಸಮ್ಮೇಳನಕ್ಕೆ ₹ 8 ಕೋಟಿ, ಧಾರವಾಡದಲ್ಲಿ ನಡೆದ 84ನೇ ಸಾಹಿತ್ಯ ಸಮ್ಮೇಳಕ್ಕೆ ₹ 10 ಕೋಟಿ, ಕಲಬುರಗಿಯಲ್ಲಿ ನಡೆದ 85ನೇ ಸಾಹಿತ್ಯ ಸಮ್ಮೇಳನಕ್ಕೆ ₹ 14 ಕೋಟಿ ಅನದಾನ ನೀಡಿತ್ತು. ಹಾವೇರಿಯಲ್ಲಿ ನಡೆದ 86ನೇ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ₹ 20 ಕೋಟಿ ಅನುದಾನ ಘೋಷಿಸಿತ್ತು. ಈ ಬಾರಿ ಸಮ್ಮೇಳನದ ವೆಚ್ಚ ₹ 20 ಕೋಟಿ ದಾಟಲಿದೆ ಎಂದು ಪರಿಷತ್ತಿನ ಮೂಲಗಳು ತಿಳಿಸಿವೆ. 

*
ವರ್ಷಕ್ಕೊಮ್ಮೆ ನಡೆಯಬೇಕಿದ್ದ ಸಾಹಿತ್ಯ ಸಮ್ಮೇಳನ, ಕೋವಿಡ್ ಕಾರಣ ಎರಡು ವರ್ಷ ನಡೆದಿರಲಿಲ್ಲ. ಡಿಸೆಂಬರ್ ತಿಂಗಳು ಮಂಡ್ಯದಲ್ಲಿ ಸಮ್ಮೇಳನ ನಡೆಸಲಾಗುವುದು.

-ಮಹೇಶ ಜೋಶಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು