ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಸೌಲಭ್ಯಗಳ ಕೊರತೆ; ಬೇಕಿದೆ ಕಾಳಜಿಯ ಒರತೆ

ಮಹಾರಾಷ್ಟ್ರ, ಗೋವಾ, ಕಾಸರಗೋಡು, ರಾಯಚೂರು ಗಡಿಭಾಗದ ಶಾಲೆಗಳಲ್ಲಿ ಕನ್ನಡ ಕಲಿಕೆಗೆ ಪೆಟ್ಟು
Last Updated 30 ಜುಲೈ 2022, 19:27 IST
ಅಕ್ಷರ ಗಾತ್ರ

ಮಂಗಳೂರು/ರಾಯಚೂರು/ಬೆಳಗಾವಿ: ಗಡಿಭಾಗದ ಕಾಸರಗೋಡು, ರಾಯಚೂರು ಮತ್ತು ಬೆಳಗಾವಿಯಲ್ಲಿ ಕನ್ನಡ ಶಾಲೆಗಳ ಸಮಸ್ಯೆಗಳು ಹಲವು ಬಗೆ. ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿರುವ ಬೆಳಗಾವಿ ಜಿಲ್ಲೆಯಲ್ಲಿಕನ್ನಡ ಶಾಲೆಗಳು ದಯನೀಯ ಸ್ಥಿತಿಯಲ್ಲಿವೆ. ಕಾಸರಗೋಡಿನಲ್ಲಿ ಮೂಲಸೌಲಭ್ಯಗಳ ಕೊರತೆ ಇಲ್ಲದಿದ್ದರೂ ಭಾಷೆಯ ಹೆಸರಿನಲ್ಲಿ ನಡೆಯುತ್ತಿರುವ ತಾರತಮ್ಯದಿಂದಾಗಿ ಕನ್ನಡದ ಅಸ್ಮಿತೆಗೆ ಪೆಟ್ಟು ಬಿದ್ದಿದೆ.ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ಗಡಿಯಲ್ಲಿ ಶಿಕ್ಷಕರ ಕೊರತೆಯೇ ದೊಡ್ಡ ಸಮಸ್ಯೆ.

ಕಾಸರಗೋಡಿನ ಕನ್ನಡ–ಮಲಯಾಳಂ ಮಾಧ್ಯಮ ಶಾಲೆಗಳಲ್ಲಿ ಸ್ಪರ್ಧೆಗಳು ಸೇರಿದಂತೆ ವಿವಿಧ ಯೋಜನೆಗಳಲ್ಲಿ ಈ ಹಿಂದೆ ಕನ್ನಡ ಮತ್ತು ಮಲಯಾಳಂಗೆ ಪ್ರತ್ಯೇಕ ವಿಭಾಗಗಳಿದ್ದವು. ಈಗ ಅವುಗಳೆಲ್ಲವೂ ‘ಸಾಮಾನ್ಯ’ ಆಗಿವೆ. ಇದರಿಂದ ಮಲಯಾಳಂ ಸ್ಪರ್ಧಿಗಳ ಆಧಿಪತ್ಯಕ್ಕೆ ಹಾದಿ ಸುಗಮವಾಗುತ್ತಿದೆ.

ಶಿಕ್ಷಕರನ್ನು ನೇಮಕ ಮಾಡುವಾಗ ಮಲಯಾಳಿಗಳಿಗೆ ಮಣೆ ಹಾಕುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪವಿದೆ. ಅನುದಾನಿತ ಶಾಲೆಗಳಲ್ಲಿ ಕೂಡ ಈ ಚಾಳಿ ಇದೆ ಎಂಬ ದೂರುಗಳೂ ಇವೆ. ಮುಖ್ಯ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಗ್ರಹಣ ಹಿಡಿದಿದ್ದು 12 ಕನ್ನಡ ಶಾಲೆಗಳಲ್ಲಿ ಮುಖ್ಯ ಶಿಕ್ಷಕರ ಹುದ್ದೆ ಖಾಲಿ ಇದೆ. ಅಲ್ಲೆಲ್ಲ ಮಲಯಾಳಿ ‘ಪ್ರಭಾರಿ’ಗಳದ್ದೇ ಆಧಿಪತ್ಯ.

ಬೆಳಗಾವಿ ಗಡಿ ಭಾಗದ ಸರ್ಕಾರಿ ಶಾಲೆಗಳು ಹಾಜರಾತಿ ಕೊರತೆಯ ಕಾರಣ ಮುಚ್ಚುವ ಹಂತಕ್ಕೆ ಬಂದಿವೆ. ಶಿಕ್ಷಕರ ಮತ್ತು ಸೌಕರ್ಯಗಳ ಕೊರತೆ ಇಲ್ಲಿ ತೀವ್ರವಾಗಿ ಕಾಡುತ್ತಿದೆ.

ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಲ್ಲಿ ವಾಸಿಸುತ್ತಿರುವ ಕನ್ನಡಿಗರ ಪೈಕಿ ಅನೇಕರುಕನ್ನಡ ಕಲಿಕೆಯ ಆಸಕ್ತಿಯಿಂದಾಗಿ ಗಡಿಯ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಸೇರಿಸಿದ್ದಾರೆ. ಆದರೆ, ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಂಬ ಆತಂಕದಿಂದ ಇಂಗ್ಲಿಷ್‌ ಅಥವಾ ಮರಾಠಿ ಮಾಧ್ಯಮಗಳತ್ತ ಸಾಗುತ್ತಿರುವುದು ಈಚಿನ ಬೆಳವಣಿಗೆ.

ಕನ್ನಡ ಕಲಿಕೆಗೇ ಕುತ್ತು!: ಬೆಳಗಾವಿ ಗಡಿಭಾಗದಲ್ಲಿ ಕನ್ನಡ ಮಾಧ್ಯಮದ ಜೊತೆಗೆ ಮರಾಠಿ ಮಾಧ್ಯಮ ಶಾಲೆಗಳೂ ಇವೆ. ಹಳ್ಳಿಗಳಲ್ಲಿ ಮಕ್ಕಳಿಗೆ ಕನ್ನಡ ಕಲಿಸಲು ಮರಾಠಿ ಭಾಷಿಗರೂ ಆಸಕ್ತಿ ತೋರಿಸುತ್ತಿದ್ದಾರೆ. ಆದರೆ, ಜಿಲ್ಲೆಯ 564 ಸರ್ಕಾರಿ ಮರಾಠಿ ಪ್ರಾಥಮಿಕ ಶಾಲೆಗಳ ಪೈಕಿ 123 ಶಾಲೆಗಳಲ್ಲಿ ಕನ್ನಡ ಭಾಷಾ ಶಿಕ್ಷಕರೇ ಇಲ್ಲ. ಹಾಗಾಗಿ ತವರಿನಲ್ಲೇ ಕನ್ನಡ ಕಲಿಕೆಗೆ ಕುತ್ತು ಬಂದಿದೆ. ಜಿಲ್ಲೆಯಲ್ಲಿ 1,416 ತರಗತಿ ಕೊಠಡಿಗಳು ಶಿಥಿಲಾವಸ್ಥೆ ತಲುಪಿವೆ. 3,402 ಸರ್ಕಾರಿ ಶಾಲೆಗಳಿದ್ದು 5,263 ಶಿಕ್ಷಕರ ಹುದ್ದೆಗಳು ಹಲವು ವರ್ಷಗಳಿಂದ ಖಾಲಿ ಇವೆ. ಸರ್ಕಾರ 2,862 ಅತಿಥಿ ಶಿಕ್ಷಕರನ್ನಷ್ಟೇ ನೇಮಕ ಮಾಡಿದೆ.

ಗಡಿ ಪ್ರೌಢಶಾಲೆಗೆ ಏಕೈಕ ಮುಖ್ಯೋಪಾಧ್ಯಾಯ!

ರಾಯಚೂರು ತಾಲ್ಲೂಕಿನ 40ಕ್ಕೂ ಹೆಚ್ಚು ಗ್ರಾಮಗಳು ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ಗಡಿಗೆ ಹೊಂದಿಕೊಂಡಿವೆ. ರಾಯಚೂರಿನಿಂದ 24 ಕಿಲೋಮೀಟರ್ ದೂರ, ತೆಲಂಗಾಣ ಗಡಿಭಾಗದಲ್ಲಿರುವ ಡಿ.ರಾಂಪೂರ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಪ್ರೌಢಶಾಲೆಯನ್ನು ಮುಖ್ಯೋಪಾಧ್ಯಾಯ ಶರಬಸಪ್ಪ ನೀಲಗಲ್‌ಕರ್ ಒಬ್ಬರೇ ಮುನ್ನಡೆಸುತ್ತಿದ್ದಾರೆ. 2018ರಲ್ಲಿ ಕೆಕೆಆರ್‌ಡಿಬಿ ಅನುದಾನದಲ್ಲಿ ಮೂರು ಕೊಠಡಿಗಳನ್ನು ನಿರ್ಮಿಸಿ ಪ್ರೌಢಶಾಲೆ ಆರಂಭಿಸಲಾಗಿದ್ದು 111 ವಿದ್ಯಾರ್ಥಿಗಳು ಇಲ್ಲಿ ಓದುತ್ತಿದ್ದಾರೆ.

ಗಡಿಯ ಶಾಲೆಗಳ ಸಬಲೀಕರಣಕ್ಕೆ ಒತ್ತು ನೀಡಬೇಕು. ಮರಾಠಿ ಮಾಧ್ಯಮ ಶಾಲೆಗಳಿಗೆ ಕನ್ನಡ ಭಾಷಾ ಶಿಕ್ಷಕರನ್ನು ತ್ವರಿತವಾಗಿ ನೇಮಿಸಬೇಕು ಎಂದು ಶಿಕ್ಷಣ ಸಚಿವರಿಗೆ ಪತ್ರ ಬರೆಯಲಾಗುವುದು.
- ಸಿ.ಸೋಮಶೇಖರ, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

ರಾಯಚೂರು ತಾಲ್ಲೂಕಿನ ಗಡಿಭಾಗದ ಗ್ರಾಮಗಳಲ್ಲಿ ಬಹುತೇಕ ಮಕ್ಕಳಿಗೆ ಕನ್ನಡ ಬರೆಯಲು, ಓದಲು ಬರುವುದಿಲ್ಲ. ಇಲ್ಲೆಲ್ಲ ಕನ್ನಡ ಶಿಕ್ಷಕರ ನೇಮಕಾತಿ ಆಗಬೇಕು
- ಹಫೀಜುಲ್ಲಾ‌, ಸಾಮಾಜಿಕ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT