ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರುಘಾ ಮಠ ಆಸ್ತಿ ಅನ್ಯರ ಪಾಲಾಗಬಾರದು–ಹೈಕೋರ್ಟ್‌ಗೆ ಅಡ್ವೊಕೇಟ್‌ ಜನರಲ್‌ ಮನವರಿಕೆ

Last Updated 23 ಜನವರಿ 2023, 15:50 IST
ಅಕ್ಷರ ಗಾತ್ರ

ಬೆಂಗಳೂರು: ‘ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಪೀಠಾಧಿಪತಿ ಪೊಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆ ಅಡಿಯಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕಾರಣ, ಮುರುಘಾ ಮಠಕ್ಕೆ ಸೇರಿದ ಸಾವಿರಾರು ಕೋಟಿ ರೂಪಾಯಿಗಳ ಮೌಲ್ಯದ ಸ್ಥಿರ ಮತ್ತು ಚರಾಸ್ತಿ ಹಾಗೂ ನೂರಾರು ವಿದ್ಯಾಸಂಸ್ಥೆಗಳ ದೈನಂದಿನ ಆಡಳಿತ ಕುಸಿದು ಹೋಗಬಾರದು ಎಂಬ ಏಕೈಕ ಸದುದ್ದೇಶದಿಂದ ರಾಜ್ಯ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿದೆ‘ ಎಂದು ಅಡ್ವೊಕೇಟ್‌ ಜನರಲ್ ಹೈಕೋರ್ಟ್‌ಗೆ ಸ್ಪಷ್ಟಪಡಿಸಿದರು.

ನಿವೃತ್ತ ಐಎಎಸ್‌ ಅಧಿಕಾರಿ ಪಿ.ಎಸ್‌.ವಸ್ತ್ರದ ಅವರನ್ನು ಶ್ರೀ ಜಗದ್ಗುರು ಮುರುಘರಾಜೇಂದ್ರ (ಎಸ್‌ಜೆಎಂ) ಬೃಹನ್ಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಎಸ್‌ಜೆಎಂ ವಿದ್ಯಾಪೀಠದ ಅಧ್ಯಕ್ಷ, ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಮತ್ತು ಭಕ್ತರು ಸಲ್ಲಿಸಿರುವ ರಿಟ್‌ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ಮುಂದುವರಿಸಿತು.

ರಾಜ್ಯ ಸರ್ಕಾರದ ಪರವಾಗಿ ಇಡೀ ದಿನದ ಬೆಳಗ್ಗೆ ಮತ್ತು ಮಧ್ಯಾಹ್ನದ ಕಲಾಪದಲ್ಲಿ ಸುದೀರ್ಘ ವಾದ ಮಂಡಿಸಿದ ಅಡ್ವೊಕೇಟ್‌ ಜನರಲ್ ಪ್ರಭುಲಿಂಗ ಕೆ.ನಾವದಗಿ ಅವರು, ‘ರಿಲಿಜಿಯಸ್‌ ಡಿನಾಮಿನೇಶನ್ (ಧಾರ್ಮಿಕ ಪಂಥ) ಮತ್ತು ಮಠಾಧಿಪತಿ ಎಂಬುದರ ವ್ಯಾಖ್ಯಾನ ಬೇರೆ ಬೇರೆಯಾಗುತ್ತದೆ. ಮಠ ಒಂದು ಸಾರ್ವಜನಿಕ ಟ್ರಸ್ಟ್‌. ಹೀಗಾಗಿ, ಮಠದ ಅಧೀನದಲ್ಲಿರುವ ಆಸ್ತಿಗಳನ್ನು ಸಂರಕ್ಷಿಸುವ ಸಲುವಾಗಿ ಮತ್ತು ಸಂಸ್ಥೆಗಳ ನಿರಾತಂಕ ಆಡಳಿತದ ಮುಂದುವರಿಕೆ ಹಾಗೂ ರಕ್ಷಣೆಗಾಗಿ ತನ್ನ ಅಧಿಕಾರ ಚಲಾಯಿಸಿದೆ’ ಎಂದರು.

‘ಪೀಠಾಧಿಪತಿ ಜೈಲಿನಲ್ಲಿ ಇರುವ ಕಾರಣ ಆಡಳಿತ ಮಾಡಲು ಆಗುವುದಿಲ್ಲ ಎಂಬ ಕಾರಣಕ್ಕೆ ಚಿತ್ರದುರ್ಗದಲ್ಲಿನ ವೀರಶೈವ–ಲಿಂಗಾಯತ ಸಮಾಜದ ಮುಖಂಡರು ಸಭೆ ಸೇರಿ ಶರಣರು ಸ್ವಯಂ ಪೀಠತ್ಯಾಗ ಮಾಡುವಂತೆ ಕೇಳಿದ್ದರು. ಆದರೆ, ಅವರು ಒಪ್ಪದಿದ್ದಾಗ ಈ ನಿಟ್ಟಿನಲ್ಲಿ ವಿಧಾನಪರಿಷತ್ ಸದಸ್ಯ ನವೀನ್‌ ಕೆ.ಎಸ್.ನವೀನ್‌ ಹಾಗೂ ಇತರರು ಚಿತ್ರದುರ್ಗ ಜಿಲ್ಲಾಧಿಕಾರಿಗೆ 2022ರ ಅಕ್ಟೋಬರ್ 17 ಹಾಗೂ 2022ರ ನವೆಂಬರ್ 10ರಂದು ಪ್ರತ್ಯೇಕ ಮನವಿ ಸಲ್ಲಿಸಿ; ಪೀಠಾಧಿಪತಿ ಜೈಲಿನಲ್ಲಿದ್ದಾರೆ. ಅಂತೆಯೇ ಪರಂಪರೆಯನ್ನು ಉಲ್ಲಂಘಿಸಿ ಮಠಕ್ಕೆ ನೇಮಕ ಮಾಡಲಾಗಿರುವ ಉತ್ತರಾಧಿಕಾರಿಯೂ ಆರೋಪಿಯಾಗಿರುವ ಕಾರಣ ಆಡಳಿತಾಧಿಕಾರಿ ನೇಮಿಸಬೇಕು ಎಂದು ಕೋರಿದ್ದರು. ಈ ಮನವಿಗಳ ಮೇರೆಗೆ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿದೆ. ಇದು ಮಠದ ಅಭಿವೃದ್ಧಿ ಕಾರ್ಯಗಳಿಗೆ ಅನುಕೂಲವಾಗಲಿದೆ’ ಎಂದರು.

‘ಒಂದು ವೇಳೆ ಪೀಠಾಧಿಪತಿಗೆ ಜಾಮೀನು ದೊರೆತರೆ ಏನು ಮಾಡುತ್ತೀರಿ’ ಎಂಬ ನ್ಯಾಯಪೀಠದ ಪ್ರಶ್ನೆಗೆ, ‘ಹಾಗೊಂದು ವೇಳೆ ಆದರೆ, ಸರ್ಕಾರ ತನ್ನ ನಿರ್ಧಾರವನ್ನು ಮರು ಪರಿಶೀಲಿಸಲಿದೆ’ ಎಂದು ಅಡ್ವೊಕೇಟ್‌ ಜನರಲ್‌ ತಿಳಿಸಿದರು.

‘ಕ್ರಿಮಿನಲ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ಚಿತ್ರದುರ್ಗ ಜಿಲ್ಲಾ ಮತ್ತು ಸೆಷನ್ಸ್‌ನ ಎರಡನೇ ಹೆಚ್ಚುವರಿ ನ್ಯಾಯಾಲಯಕ್ಕೆ ತನಿಖಾಧಿಕಾರಿಗಳು ಸಲ್ಲಿಸಿರುವ ಮಧ್ಯಂತರ ದೋಷಾರೋಪ ಪಟ್ಟಿಯಲ್ಲಿ ಪೀಠಾಧಿಪತಿ ಕ್ರಿಮಿನಲ್‌ ಪ್ರಕರಣದ ಆರೋಪಿಯಾಗಿದ್ದು ಮಠದ ಆಡಳಿತ ನಡೆಸುವಂತಿಲ್ಲ ಎಂಬ ಅಂಶವನ್ನು ಸ್ಪಷ್ಟವಾಗಿ ನಮೂದು ಮಾಡಿದ್ದಾರೆ. ಅಂತೆಯೇ ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆ–1988ರ ಕಲಂ 8 (2) ಅಡಿಯಲ್ಲಿ ಈಗಿನ ಪೀಠಾಧಿಕಾರಿ ತನ್ನ ಯಾವುದೇ ಕರ್ತ್ಯವಗಳನ್ನು ನಿರ್ವಹಿಸಲು ನಿರ್ಬಂಧ ಹೇರಬೇಕು ಎಂಬ ಅಂಶವನ್ನೂ ಸೇರ್ಪಡೆ ಮಾಡಿ ಇದನ್ನು ಗಂಭೀರವಾಗಿ ಪರಿಗಣಿಸುವಂತೆ ನ್ಯಾಯಾಲಯಕ್ಕೆ ಕೋರಲಾಗಿದೆ’ ಎಂದರು.

‘ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆಯ ಅಡಿಯಲ್ಲಿ ಸಲ್ಲಿಸಲಾಗಿರುವ ಆರೋಪಗಳನ್ನು ಪ್ರಶ್ನಿಸಿ ಯಾವುದಾದರೂ ಮೇಲ್ಮನವಿ ಸಲ್ಲಿಸಲಾಗಿದೆಯೇ‘ ಎಂಬ ನ್ಯಾಯಪೀಠದ ಪ್ರಶ್ನೆಗೆ ಅಡ್ವೊಕೇಟ್‌ ಜನರಲ್’ ‘ಇಲ್ಲ‘ ಎಂದರು. ಅಂತೆಯೇ, ಅರ್ಜಿದಾರರ ಪರ ವಕೀಲರಿಗೂ ನ್ಯಾಯಪೀಠ ಇದೇ ಪ್ರಶ್ನೆ ಕೇಳಿದಾಗ, ‘ಈ ರಿಟ್‌ ಅರ್ಜಿ ಸಲ್ಲಿಸುವಾಗ ನಮ್ಮ ಅರಿವಿಗೆ ಬಂದಿರಲಿಲ್ಲ’ ಎಂದು ಹಿರಿಯ ವಕೀಲ ಜಯಕುಮಾರ್ ಎಸ್.ಪಾಟೀಲ ಉತ್ತರಿಸಿದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ‘ನಿಮ್ಮ ಕಕ್ಷಿದಾರ ಯಾರೋ ರಾಮೇಗೌಡ, ಕಲ್ಲೇಗೌಡ ಅಲ್ಲ. ಅವರೊಬ್ಬ ಧಾರ್ಮಿಕ ಸಂಸ್ಥೆಯ ಪೀಠಾಧಿಪತಿ, ನೀತಿಬೋಧಕ, ಪ್ರವಚನಕಾರರು. ಅಂತಹವರಿಗೆ ಇದೆಲ್ಲಾ ಗೊತ್ತಿಲ್ಲ ಎಂದರೆ ಏನರ್ಥ‘ ಎಂದು ಕುಟುಕಿತು.

‘ಸಂವಿಧಾನದ 26ನೇ ವಿಧಿಯಡಿ ಯಾವುದೇ ಒಬ್ಬ ನಾಗರಿಕ ಧಾರ್ಮಿಕ ಸಂಸ್ಥೆಗಳ ಸ್ಥಾಪನೆಗೆ ಮುಕ್ತ ಅವಕಾಶ ಹೊಂದಿ ಅದನ್ನು ಮೂಲಭೂತ ಹಕ್ಕಿನ ಅವಕಾಶದ ಅಡಿ ರಕ್ಷಣೆ ಪಡೆದಿರುವುದು ದಿಟ. ಆದರೆ, ಕ್ಲಿಷ್ಟಕರ ಸಂದರ್ಭಗಳಲ್ಲಿ, ನೈತಿಕ ಮತ್ತು ಆರೋಗ್ಯದ ಪ್ರಶ್ನೆ ಉದ್ಭವಿಸಿದ ಗಳಿಗೆಗಳಲ್ಲಿ ಈ ಹಕ್ಕಿನ ಸಾಂವಿಧಾನಿಕ ಮತ್ತು ನೈತಿಕ ರಕ್ಷಣೆಗಾಗಿ ಅದನ್ನು ನಿರ್ಬಂಧಿಸುವ ಅಧಿಕಾರವನ್ನೂ ಸರ್ಕಾರ ಹೊಂದಿದೆ. ಆದಾಗ್ಯೂ, ಈಗಿನ ಆಡಳಿತಾಧಿಕಾರಿ ನೇಮಕದ ನಿರ್ಧಾರ ಕೇವಲ ತಾತ್ಕಾಲಿಕ ಹಾಗೂ ಹಂಗಾಮಿ ವ್ಯವಸ್ಥೆ. ಹೀಗಾಗಿ, ಸಂವಿಧಾನದ 162ನೇ ವಿಧಿಯ ಅನುಸಾರ ಚಿತ್ರದುರ್ಗದ ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಸಂವಿಧಾನಬಾಹಿರವಲ್ಲ‘ ಎಂದು ಪ್ರತಿಪಾದಿಸಿದರು.

ನ್ಯಾಯಾಲಯದ ದಿನದ ಕಲಾಪದ ಅವಧಿ ಮುಕ್ತಾಯವಾದ ಕಾರಣ ವಿಚಾರಣೆಯನ್ನು ಇದೇ 30ಕ್ಕೆ ಮುಂದೂಡಲಾಗಿದೆ.

ಪ್ರಕರಣವೇನು?: ‘ಚಿತ್ರದುರ್ಗ ಮುರುಘಾಮಠದ ಪೀಠಾಧಿಪತಿ, ಪೋಕ್ಸೊ ಪ್ರಕರಣದಲ್ಲಿ ಜೈಲು ಸೇರಿದ್ದು, ರಾಜ್ಯ ಸರ್ಕಾರ ಪಿ.ಎಸ್.ವಸ್ತ್ರದ ಅವರನ್ನು 2022ರ ಡಿಸೆಂಬರ್ 13ರಂದು ಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿತ್ತು. ಅವರು 2022ರ ಡಿಸೆಂಬರ್ 15ರಂದು ಅಧಿಕಾರ ಸ್ವೀಕರಿಸಿದ್ದಾರೆ.

ಪೀಠಾಧಿಪತಿಯು, ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ (ಪೋಕ್ಸೊ) ಮತ್ತು ಎಸ್ಸಿ–ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಆರೋಪ ಹೊತ್ತು 2022ರ ಸೆಪ್ಟೆಂಬರ್‌ 1ರಿಂದ ಚಿತ್ರದುರ್ಗ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ದೋಷಾರೋಪ ಪಟ್ಟಿಯಲ್ಲಿ ಕಾಣಿಸಲಾಗಿರುವ, ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆ ಅನ್ವಯ ‘ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥ ಅಥವಾ ಉದ್ಯೋಗಿ ಕ್ರಿಮಿನಲ್ ಪ್ರಕರಣದಲ್ಲಿ ದೋಷಾರೋಪ ಪಟ್ಟಿಯಲ್ಲಿ ಆರೋಪಿಯಾಗಿ ಒಳಗೊಂಡು ವಿಚಾರಣೆ ಎದುರಿಸುವಂತಾಗಿದ್ದರೆ ಅಂತಹವರು ವಿಚಾರಣೆ ಮುಗಿಯುವತನಕ ತಾವು ಹೊಂದಿರುವ ಅಧಿಕಾರ ಚಲಾಯಿಸುವಂತಿಲ್ಲ’ ಎಂಬ ಆಪಾದನೆಗೂ ಒಳಗಾಗಿದ್ದಾರೆ.

ಯಾರು ಈ ಬಸವಪ್ರಭು...?

‘ಬಸವಪ್ರಭು ಸ್ವಾಮೀಜಿ ಉಸ್ತುವಾರಿ ಹೊತ್ತ ನಂತರ ಮಠಕ್ಕೆ ಸೇರಿದ ಲಕ್ಷಾಂತರ ರೂಪಾಯಿಗಳನ್ನು ಪಡೆದಿದ್ದು ಅದಕ್ಕೆ ಲೆಕ್ಕ ಕೊಡದೇ ಇರುವುದು ಗಮನಕ್ಕೆ ಬಂದಿದೆ. ಇದನ್ನು ಆಡಳಿತಾಧಿಕಾರಿ ವಸ್ತ್ರದ ಅವರು ತಮಗೆ ದೊರೆತಿರುವ ಮಾಹಿತಿಯ ಅನುಸಾರ ನನಗೆ ವಿವರ ಒದಗಿಸಿದ್ದಾರೆ’ ಎಂದು ಅಡ್ವೊಕೇಟ್‌ ಜನರಲ್‌ ನ್ಯಾಯಪೀಠಕ್ಕೆ ತಿಳಿಸಿದರು. ಈ ಮಾತಿಗೆ ದನಿಗೂಡಿಸಿದ ವಸ್ತ್ರದ ಪರ ಹಿರಿಯ ವಕೀಲ ಗಂಗಾಧರ ಗುರುಮಠ ಅವರು, ಹೌದು ಸ್ವಾಮಿ, ‘ಈ ಬಗ್ಗೆ ವಿವರಣೆ ನೀಡುವಂತೆ ಬಸವಪ್ರಭು ಅವರಿಗೆ ಕೇಳಿದಾಗ ಅವರು ಕಠಿಣವಾದ ಉತ್ತರ ನೀಡಿದ್ದು, ‘ವಿಷಯ ಹೈಕೋರ್ಟ್‌ನಲ್ಲಿದೆ, ನೀವು ಯಾರು ಕೇಳಲಿಕ್ಕೆ ಎಂದು ಉತ್ತರಿಸಿದ್ದಾರೆ’ ಎಂದರು.

ಈ ಮಾತಿಗೆ ನ್ಯಾಯಪೀಠ, ‘ಯಾರು ಈ ಬಸವಪ್ರಭು, ಅವರು ಲಕ್ಷಾಂತರ ಹಣವನ್ನು ಅ‍ಪರಾ–ತಪರಾ ಮಾಡಿದ್ದಾರೆ ಎಂಬುದಕ್ಕೆ ನಿಮ್ಮ ಬಳಿ ಏನು ಸಾಕ್ಷ್ಯವಿದೆ’ ಎಂದು ಪ್ರಶ್ನಿಸಿತು. ಈ ಪ್ರಶ್ನೆಗೆ ಅಡ್ವೊಕೇಟ್‌ ಜನರಲ್‌ ಮತ್ತು ಗುರುಮಠ ಅವರು, ‘ದಾಖಲೆಗಳು ಸದ್ಯ ಇಲ್ಲ, ಶೇಖರಿಸುತ್ತಿದ್ದೇವೆ’ ಎಂದರು. ಇದಕ್ಕೆ ನ್ಯಾಯಪೀಠ ‘ನಿಮ್ಮ ಆಡಳಿತಾಧಿಕಾರಿ ನಿವೃತ್ತ ಐಎಎಸ್‌ ಅಧಿಕಾರಿಯಲ್ಲವೇ, ಅವರಿಗೆ ಈ ವಿವರ ಸಂಗ್ರಹ ಸಾಧ್ಯವಾಗಿಲ್ಲವೇ, ನೀವು ಇಂತಹ ಆರೋಪ ಮಾಡುವಾಗ ಕೆ.ಆರ್‌.ಮಾರ್ಕೆಟ್‌ನಲ್ಲಿ ನಿಂತು ಆರೋಪಿಸಿದಂತೆ ಆಗಬಾರದು. ಸರಿಯಾದ ದಾಖಲೆ ಒದಗಿಸಿ ವಾದ ಮಂಡಿಸಿ’ ಎಂದು ಹೇಳಿತು.

ಪೀಠಾಧಿಪತಿಯ ಹೆಲಿಕಾಪ್ಟರ್‌ ಸುತ್ತಾಟಕ್ಕೆ ₹3 ಕೋಟಿ

‘ತುಂಬಿ ಏವಿಯೇಷನ್ಸ್‌ (ಹೆಲಿಕಾಪ್ಟರ್‌) ಜೊತೆ ಒಪ್ಪಂದ ಮಾಡಿಕೊಂಡಿದ್ದ ಪೀಠಾಧಿಪತಿಯು, 2020ರ ಅಕ್ಟೋಬರ್ 20ರಿಂದ ಬಳಸಿರುವ ಹೆಲಿಕಾಪ್ಟರ್‌ಗೆ 3 ಕೋಟಿ ಪಾವತಿ ಮಾಡಿದ್ದಾರೆ. ಇದನ್ನು ಏರ್‌ ಆಂಬುಲೆನ್ಸ್‌ ಆಗಿ ಬಳಸಲಾಗುವುದು ಎಂದು ಒಪ್ಪಂದ ಮಾಡಿಕೊಂಡಿದ್ದರು. ಆದರೆ, ಈ ದಿನದ ತನಕ ಯಾವುದೇ ರೋಗಿಯನ್ನು ಇದರಲ್ಲಿ ಕೊಂಡೊಯ್ದಿಲ್ಲ’ ಎಂದು ಅಡ್ವೊಕೇಟ್‌ ಜನರಲ್ ನ್ಯಾಯಪೀಠಕ್ಕೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT