ಫೆಬ್ರುವರಿ 10ರಿಂದ ವಿಧಾನಮಂಡಲ ಅಧಿವೇಶನ: 17ಕ್ಕೆ ರಾಜ್ಯ ಬಜೆಟ್

ಬೆಂಗಳೂರು: ಫೆಬ್ರುವರಿ 10ರಂದು ವಿಧಾನಮಂಡಲದ ಪ್ರಸಕ್ತ ವರ್ಷದ ಬಜೆಟ್ ಅಧಿವೇಶನ ನಡೆಸಲು ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, 'ಫೆ. 10ರಂದು ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಫೆ. 16ರವರೆಗೂ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದೆ. ಫೆ.17ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್ ಮಂಡಿಸುವ ಸಾಧ್ಯತೆ ಇದೆ' ಎಂದರು.
ಅಧಿವೇಶನದ ಕೊನೆಯ ದಿನವನ್ನು ನಿರ್ಧರಿಸಿಲ್ಲ. ವಿಧಾನಮಂಡಲದ ಉಭಯ ಸದನಗಳ ಕಲಾಪ ಸಲಹಾ ಸಮಿತಿಗಳ ಸಭೆ ನಡೆಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಲೋಕೋಪಯೋಗಿ ಇಲಾಖೆ ಮೂಲಕ ₹600 ಕೋಟಿ ವೆಚ್ಚದಲ್ಲಿ 100 ಡಾ.ಬಿ.ಆರ್. ಅಂಬೇಡ್ಕರ್ ವಸತಿ ನಿಲಯಗಳ ನಿರ್ಮಾಣ, ಉತ್ತರ ಕನ್ನಡ ಜಿಲ್ಲೆಯ ಜಾಲಿ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಪೂಂಜಾಲಕಟ್ಟೆ, ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ವಡ್ಡರ್ಸೆ ಹಾಗೂ ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಹಿರೇಶಕುನ ಗ್ರಾಮದಲ್ಲಿ ಒಟ್ಟು ₹72 ಕೋಟಿ ವೆಚ್ಚದಲ್ಲಿ ನಾರಾಯಣ ಗುರು ವಸತಿ ಶಾಲೆ ನಿರ್ಮಾಣಕ್ಕೆ ಒಪ್ಪಿಗದ ನೀಡಲಾಗಿದೆ ಎಂದರು.
ನಗರ ಪ್ರದೇಶಗಳಲ್ಲಿ 117 ಆರೋಗ್ಯ ಕೇಂದ್ರಗಳನ್ನು ನಮ್ಮ ಕ್ಲಿನಿಕ್ ಗಳಾಗಿ ಪರಿವರ್ತಿಸುವುದು, ಗ್ರಾಮೀಣ ಪ್ರದೇಶದ 847 ಉಪ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವಕ್ಕೆ ಒಪ್ಪಿಗೆ ನೀಡಲಾಗಿದೆ ಎಂದು ವಿವರಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.