ಶುಕ್ರವಾರ, ಮಾರ್ಚ್ 31, 2023
23 °C

ಟೀಕಿಸಿದರೆ ಮತ್ತಷ್ಟು ಸ್ಥಾನಗಳು ಕಡಿತ: ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ‘ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಜೆಡಿಎಸ್‌ ಬಗ್ಗೆ ಟೀಕೆ ಮಾಡುವುದನ್ನು ಮೊದಲು ನಿಲ್ಲಿಸಬೇಕು. ಟೀಕೆ ಮಾಡುವುದರಿಂದ ಮತ್ತಷ್ಟು ಸ್ಥಾನಗಳನ್ನು ಕಳೆದುಕೊಳ್ಳುತ್ತೀರಿ ಎಂದು ಎಚ್ಚರಿಕೆ ನೀಡುತ್ತೇನೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ನಗರಕ್ಕೆ ಆಗಮಿಸಿದ ಪಂಚರತ್ನ ಯಾತ್ರೆ ಸಂದರ್ಭದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಸರ್ಕಾರದ ವೈಫಲ್ಯಗಳನ್ನು ನಾನು ಟೀಕೆ ಮಾಡುವುದರಿಂದ ನನಗೇನೂ ಸಿಗಲ್ಲ. ಪಂಚರತ್ನ ಕಾರ್ಯಕ್ರಮಗಳ ಆಧಾರದ ಮೇಲೆ ರಾಜ್ಯದ ಜನರ ಮತ ಕೇಳಲು ನಾನು ಹೊರಟಿದ್ದೇನೆ. ಜನರಿಗೆ ನೀವೇನು ಮಾಡುತ್ತೀರಿ ಎಂಬುದನ್ನು ಹೇಳಿಕೊಳ್ಳಿ ಎಂದು ಈ ಮೂಲಕ ಅವರಿಗೆ ಸ್ಪಷ್ಟನೆ ನೀಡುತ್ತಿದ್ದೇನೆ’ ಎಂದರು.

‘ಜನರು ಅನುಭವಿಸುತ್ತಿರುವ ಸಂಕಷ್ಟ ಏನಿವೆ? ಅದಕ್ಕೆ ನಿಮ್ಮ ಯೋಜನೆಗಳೇನು ಎಂಬುದನ್ನು ಹೇಳಿಕೊಳ್ಳಿ. ಬಡವರು, ಅಂಗವಿಕಲರಿಗೆ ನಿಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಏನು ಕೊಟ್ಟಿದ್ದೀರಿ? ಯಾವುದಾದರೂ ಕಡುಬಡವರಿಗೆ ₹25 ಲಕ್ಷದವರೆಗೂ ವೈದ್ಯಕೀಯ ಚಿಕಿತ್ಸೆ ಕೊಡಿಸಿದ್ದೀರಾ? ಕಡುಬಡವರನ್ನು ನಿಮ್ಮ ಮನೆಗಳ ಬಾಗಿಲ ಹತ್ತಿರವೇ ಸೇರಿಸಿಕೊಳ್ಳಲ್ಲ. ರೈತರನ್ನು ಬಡವರನ್ನು ಯಾವ ರೀತಿ ಗೌರವಿಸಬೇಕು ಎಂಬುದನ್ನು ನಿಮ್ಮಿಂದ ನಮ್ಮ ಪಕ್ಷ ಕಲಿಯಬೇಕಿಲ್ಲ’ ಎಂದು ಕಿಡಿಕಾರಿದರು.

‘ಈ ಹಿಂದೆ 20 ತಿಂಗಳು ಅಧಿಕಾರದುದ್ದಕ್ಕೂ ಕಾಂಗ್ರೆಸ್‌ನವರು ನನಗೆ ಕಿರುಕುಳ ಕೊಟ್ಟರೂ ಸಾಕಷ್ಟು ಒಳ್ಳೆಯ ಕಾರ್ಯಕ್ರಮಗಳನ್ನು ನಾನು ಕೊಟ್ಟಿದ್ದೇನೆ. ರಾಜ್ಯದಲ್ಲಿ ಸಾರಾಯಿ, ಲಾಟರಿ ನಿಷೇಧ ಮಾಡಿದ್ದೇನೆ. ಇದು ಬಡವರನ್ನು ಉದ್ಧಾರ ಮಾಡಲು ನಾನು ಮಾಡಿದ ಕೆಲಸ. ಶ್ರೀಮಂತರನ್ನು ಶ್ರೀಮಂತರನ್ನಾಗಿ ಮಾಡುವ ಯೋಜನೆ ನನ್ನದಾಗಿರಲಿಲ್ಲ. ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿದ್ದಂತೆ ಲಾಟರಿ, ಮಟಕಾ ದಂಧೆಗಳನ್ನು ನಡೆಸಲು ಮುಕ್ತ ಅವಕಾಶ ಕೊಡಲಿಲ್ಲವೆ ಸಿದ್ದರಾಮಯ್ಯನವರೆ’ ಎಂದು ಪ್ರಶ್ನಿಸಿದರು.

‘ಈಗ 250 ಯುನಿಟ್‌ ವಿದ್ಯುತ್‌ ಉಚಿತ, ₹2 ಸಾವಿರ ಖಚಿತ ಎಂದು ಕಾಂಗ್ರೆಸ್‌ನವರು ಘೋಷಿಸುತ್ತಿದ್ದಾರೆ. ಅವರ ಭಾಷೆಯಲ್ಲೇ ಹೇಳುವುದಾದರೆ, ಎರಡು ಚಡ್ಡಿ ತೆಗೆದುಕೊಂಡರೆ ಒಂದು ಚಡ್ಡಿ ಉಚಿತ ಎನ್ನುವ ಯೋಜನೆ ರೀತಿಯಲ್ಲಿದೆ’ ಎಂದು ಲೇವಡಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು