ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟೀಕೆಗೆ ಮುಸ್ಲಿಮರ ಹೆಸರು ಬಳಕೆ: ಬಿಜೆಪಿ, ಕಾಂಗ್ರೆಸ್‌ ವಿರುದ್ಧ ಜೆಡಿಎಸ್‌ ಆಕ್ರೋಶ

ಈ ಎರಡೂ ಪಕ್ಷಗಳ ಪಾಲಿಗೆ ಮುಸ್ಲಿಮರು ಅಬ್ಬೇಪಾರಿಗಳಾಗಿದ್ದಾರೆ: ಸಿಎಂ ಇಬ್ರಾಹಿಂ
Last Updated 7 ಡಿಸೆಂಬರ್ 2022, 5:36 IST
ಅಕ್ಷರ ಗಾತ್ರ

ಬೆಂಗಳೂರು: ಮುಸ್ಲಿಮರ ವೇಷಭೂಷಣ ಧರಿಸಿದ ನಾಯಕರ ಫೋಟೋಗೆ ಮುಸ್ಲಿಂ ಹೆಸರನ್ನು ಹಾಕಿ ವ್ಯಂಗ್ಯ ಮಾಡುತ್ತಿರುವ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಸಾಮಾಜಿಕ ಜಾಲತಾಣದಲ್ಲಿ ಮಾಡುತ್ತಿರುವ ಪೋಸ್ಟ್‌ಗೆ ಜೆಡಿಎಸ್‌ ಪಕ್ಷ ಆಕ್ಷೇಪ ವ್ಯಕ್ತಪಡಿಸಿದೆ.

‘ಈ ಎರಡೂ ಪಕ್ಷಗಳ ಪಾಲಿಗೆ ಮುಸ್ಲಿಮರು ಅಬ್ಬೇಪಾರಿಗಳಾಗಿದ್ದಾರೆ‘ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಕಿಡಿಕಾರಿದ್ದಾರೆ.

‘ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷದವರು ಮುಸಲ್ಮಾನರನ್ನು ಯಾರು ಹೇಗೆ ಬೇಕಾದರೂ ತುಚ್ಛವಾಗಿ ಕಾಣಬಹುದು ಎಂದುಕೊಂಡಿದ್ದಾರೆ, ಇವರಿಬ್ಬರ ಹೆಸರು ಬೇರೆ ಆದರೆ ಉದ್ದೇಶ ಮಾತ್ರ ಒಂದೇ, ಸಮುದಾಯಗಳ ನಡುವೆ ದ್ವೇಷ ಬಿತ್ತಿ ಚಳಿ ಕಾಯಿಸಿಕೊಳ್ಳುವುದೇ ಇವರ ನಿತ್ಯ ಕಾಯಕ‘ ಎಂದು ಅವರು ಹೇಳಿದ್ದಾರೆ.

‘ಬಿಜೆಪಿಗಂತೂ ಮುಸಲ್ಮಾನರೆಂದರೆ ಅಪಥ್ಯ, ಮತ್ತು ಸದಾ ಕಾಲ ಮುಸಲ್ಮಾನರ ಮೇಲೆ ದ್ವೇಷ ಕಾರುವುದೇ ಇವರ ಜಾಯಮಾನ. ಆದರೆ ಮುಸಲ್ಮಾನರನ್ನು ಗುತ್ತಿಗೆ ತೆಗೆದುಕೊಂಡಂತೆ ವರ್ತಿಸುವ ಕಾಂಗ್ರೆಸ್ ಪಕ್ಷ ಕೂಡ ಖಾನ್,ಉಲ್ಲಾ,ಶೇಖ್ ಎಂಬ ಮುಸಲ್ಮಾನರ ಹೆಸರುಗಳನ್ನು ಮತ್ತು ವೇಷಭೂಷಣಗಳನ್ನು ವ್ಯಂಗ್ಯ ಮತ್ತು ಹೀಯಾಳಿಕೆಗೆ ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡು‘ ಎಂದು ಇಬ್ರಾಹಿಂ ಕಿಡಿಕಾರಿದ್ದಾರೆ.

‘ಆ ಹೆಸರುಗಳನ್ನು ಇಟ್ಟುಕೊಂಡಿರುವರು ಯಾರೂ ಮನುಷ್ಯರೇ ಅಲ್ಲ ಎಂಬಂತೆ ಬಿಂಬಿಸುತ್ತಿರುವುದು ಬಿಜೆಪಿ-ಕಾಂಗ್ರೆಸ್ ಎರಡೂ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು ಎಂಬುದನ್ನು ಸಾಬೀತು ಮಾಡಿವೆ. ಬಿಜೆಪಿ ಸೂತ್ರಧಾರಿ, ಕಾಂಗ್ರೆಸಿಗರು ಪಾತ್ರಧಾರಿ, ಇವರ ಪಾಲಿಗೆ ಮುಸಲ್ಮಾನರು ಅಬ್ಬೇಪಾರಿ ಎನ್ನುವುದು ಅಕ್ಷರಶಃ ಜಗಜ್ಜಾಹೀರಾಗಿದೆ‘ ಎಂದು ಅವರು ಹೇಳಿದ್ದಾರೆ.

ಮುಸಲ್ಮಾನರು ಪ್ರಬುದ್ಧರಾಗಿದ್ದಾರೆ ಎನ್ನುವುದನ್ನು ಈ ಎರಡು ಭಂಡ ರಾಷ್ಟ್ರೀಯ ಪಕ್ಷಗಳು ಮರೆಯಬಾರದು ಎಂದು ಅವರು ಎಚ್ಚರಿಸಿದ್ದಾರೆ.

ಜೆಡಿಎಸ್‌ ರಾಜ್ಯ ವಕ್ತಾರೆ ನಜ್ಮಾ ನಜೀರ್‌ ಕೂಡ, ಕಾಂಗ್ರೆಸ್‌ ಹಾಗೂ ಬಿಜೆಪಿಯ ಇಂಥ ಪೋಸ್ಟ್‌ಗಳಿಗೆ ಖಂಡನೆ ವ್ಯಕ್ತ‍ಪಡಿಸಿದ್ದಾರೆ.

ವಿರೋಧ ಪ‍ಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಬಿಜೆಪಿ ಸಿದ್ರಾಮುಲ್ಲ ಖಾನ್‌ ಎಂದು ಟೀಕೆ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಸ್ಲಿಂ ಟೋಪಿ ಧರಿಸಿರುವ ಫೋಟೋ ಹಾಕಿ, ಇವರನ್ನು ಬೊಮ್ಮಾಯುಲ್ಲಾ ಖಾನ್‌ ಎಂದು ಕರೆಯಬಹುದೇ ಎಂದು ಪ್ರಶ್ನೆ ಮಾಡಿತ್ತು.

ಜತೆಗೆ ಬಿಜೆಪಿಯ ಇತರೆ ನಾಯಕರು ಮುಸ್ಲಿಂ ಟೋಪಿ ಧರಿಸಿರುವ ಫೋಟೊವನ್ನೂ ಹಾಕಿ,ಕಾಂಗ್ರೆಸ್‌ ಪ್ರಶ್ನೆ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT