ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಿಂದ 136 ಶಾಸಕರು ಗೆಲ್ಲುವುದು ಖಚಿತ: ಡಿ.ಕೆ.ಶಿವಕುಮಾರ್

Last Updated 3 ಫೆಬ್ರುವರಿ 2023, 9:14 IST
ಅಕ್ಷರ ಗಾತ್ರ

ಬೆಂಗಳೂರು: 'ಮುಂದಿನ 50 ದಿನಗಳ ನಂತರ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುವುದಿಲ್ಲ. ಎಲ್ಲ ಕ್ಷೇತ್ರಗಳಲ್ಲಿ ಎರಡು- ಮೂರು ಸಮೀಕ್ಷೆ ಮಾಡಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ 136 ಶಾಸಕರು ಗೆಲ್ಲುವುದು ಖಚಿತ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ಎರಡನೇ ಹಂತದ ಪ್ರಜಾಧ್ವನಿ ಯಾತ್ರೆ ಆರಂಭಕ್ಕೆ ಮೊದಲು ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, `ರಾಮನಗರ ಹಾಗೂ ಬೀದರ್ ಹೊರತುಪಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರಜಾಧ್ವನಿ ಯಾತ್ರೆಯನ್ನು ಮುಕ್ತಾಯಗೊಳಿಸಿದ್ದೇವೆ. ನಿರೀಕ್ಷೆಗಿಂತ ಎರಡು ಪಟ್ಟು ಜನ ಭಾಗವಹಿಸಿ ಬೆಂಬಲ ನೀಡಿದ್ದಾರೆ. ಹಾಸನ ಮತ್ತು ಮಂಡ್ಯದಲ್ಲಿ ನಮ್ಮ ಪಕ್ಷದ ಒಬ್ಬ ಶಾಸಕ ಇಲ್ಲದಿದ್ದರೂ ನಿರೀಕ್ಷೆಗೂ ಮೀರಿ ಜನ ಸೇರಿದ್ದರು' ಎಂದರು.

ಗುರುವಾರ ನಡೆದ ಟಿಕೆಟ್ ಹಂಚಿಕೆ ಸಭೆ ಬಗ್ಗೆ ಕೇಳಿದ ಪ್ರಶ್ನೆಗೆ, `ಸಭೆಯಲ್ಲಿ ಅಸಮಾಧಾನ ವ್ಯಕ್ತವಾಗಲಿದೆ ಎಂದು ಅನೇಕರು ಹೇಳುತ್ತಿದ್ದರು. ಒಂದೇ ಒಂದು ಅಪಸ್ವರವಿಲ್ಲದೆ ಸಭೆ ನಡೆಯಿತು. ಎಲ್ಲರ ಅಭಿಪ್ರಾಯ ಪಡೆದು ಅಭ್ಯರ್ಥಿಗಳ ಪಟ್ಟಿಯನ್ನು ಸ್ಕ್ರೀನಿಂಗ್ ಕಮಿಟಿಗೆ ನೀಡುತ್ತೇವೆ. ನಂತರ ಎಐಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಕೇಂದ್ರ ಚುನಾವಣಾ ಸಮಿತಿ ಅದನ್ನು ಪರಿಶೀಲಿಸಿ ಅಂತಿಮ ತೀರ್ಮಾನ ಮಾಡಲಿದೆ’ ಎಂದರು.

ಪ್ರಣಾಳಿಕೆ ವಿಚಾರವಾಗಿ ಸಮಿತಿಯ ಅಧ್ಯಕ್ಷ ಪರಮೇಶ್ವರ ಅವರು ಅಸಮಾಧಾನ ಹೊಂದಿದ್ದಾರಂತೆ ಎಂಬ ಪ್ರಶ್ನೆಗೆ, `ಯಾವುದೇ ಅಸಮಾಧಾನವಿಲ್ಲ. ಪರಮೇಶ್ವರ ಅವರು ಪಕ್ಷಕ್ಕೆ ದೊಡ್ಡ ಆಸ್ತಿ. ರಾಜ್ಯದ ಇತಿಹಾಸದಲ್ಲಿ ಸುದೀರ್ಘ ಕಾಲ ಪಕ್ಷದ ಅಧ್ಯಕ್ಷರಾಗಿದ್ದವರು. ಪರಮೇಶ್ವರ ಜತೆ ಸುರ್ಜೆವಾಲ ಅವರು ಸಭೆ ಮಾಡಿದ್ದಾರೆ' ಎಂದು ಸ್ಪಷ್ಟಪಡಿಸಿದರು.

'ಬೆಂಗಳೂರು ಬಗ್ಗೆ ವಿಶೇಷ ಚಿಂತನೆ ಮಾಡಬೇಕಿದ್ದು, ಪರಮೇಶ್ವರ ಅವರ ನೇತೃತ್ವದ ತಂಡ ವಿದೇಶಕ್ಕೆ ತೆರಳಿ, ಸಂಚಾರ ನಿರ್ವಹಣೆ ಕುರಿತು ಅಧ್ಯಯನ ಮಾಡಲಿದೆ. ನಾವು ಈಗಾಗಲೇ ಸಿಂಗಾಪುರ ಆಡಳಿತದ ಜತೆ ಮಾತುಕತೆ ನಡೆಸಿದ್ದೇವೆ. ತಂಡ ರಚನೆ ಬಗ್ಗೆ ಚರ್ಚೆ ಮಾಡಲಾಗಿದೆ. ನಮ್ಮ ರಾಜ್ಯಕ್ಕೆ ಪ್ರಣಾಳಿಕೆ ನೀಡುವಾಗ ಬೆಂಗಳೂರಿಗೆ ಬಂದಿರುವ ಕಳಂಕ ತೊಡೆದುಹಾಕುವ ಪ್ರಯತ್ನ ಮಾಡುತ್ತೇವೆ' ಎಂದರು.

`ಈ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ಬರುತ್ತದೆ. ಆಗ ಗ್ರಾಮೀಣ ಭಾಗಗಳ ಅಭಿವೃದ್ಧಿಗೆ ಯೋಜನೆ ರೂಪಿಸಬಹುದು. ಈ ಎಲ್ಲ ವಿಚಾರವಾಗಿ ಚರ್ಚೆ ಮಾಡಲು ಸುರ್ಜೆವಾಲ ಅವರು ಪರಮೇಶ್ವರ ಅವರನ್ನು ಭೇಟಿ ಮಾಡಿದ್ದಾರೆ' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT