ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಣದ ಸಿಎಂ ಕುರ್ಚಿಗೆ ಕಾಂಗ್ರೆಸ್ ನಾಯಕರ ಮನ ಹಂಬಲಿಸುತ್ತಿದೆ: ಬಿಜೆಪಿ ವ್ಯಂಗ್ಯ 

ಅಕ್ಷರ ಗಾತ್ರ

ಬೆಂಗಳೂರು: ಅಧಿಕಾರಕ್ಕೆ ಬರುವ ಮುನ್ನವೇ ಕಾಂಗ್ರೆಸ್‌ನಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನಡುವೆ ಮುಖ್ಯಮಂತ್ರಿ ಗದ್ದುಗೆಗೆ ಗುದ್ದಾಟ ಜೋರಾಗಿದೆ.

ಉಭಯ ನಾಯಕರು ಸಿಎಂ ಕುರ್ಚಿಗಾಗಿ ನಡೆಸುತ್ತಿರುವ ಮುಸುಕಿನ ಗುದ್ದಾಟವನ್ನು ಪ್ರಸ್ತಾಪಿಸಿ ಬಿಜೆಪಿ ಸರಣಿ ಟ್ವೀಟ್ ಮಾಡಿದೆ.

‘ಕಾಣದ ಸಿಎಂ ಕುರ್ಚಿಗೆ ಕಾಂಗ್ರೆಸ್ ನಾಯಕರ ಮನ ಹಂಬಲಿಸುತ್ತಿದೆ. ಉತ್ಸವ, ವ್ಯಕ್ತಿಯಾರಾಧನೆ, ನಕಲಿ ಗಾಂಧಿ‌ ಕುಟುಂಬದ ಋಣ ಸಂದಾಯದ ಮುಖೇನ ಸಿಎಂ ಕುರ್ಚಿಗೆ ಟವೆಲ್ ಹಾಕಿ‌ ಕಾಯ್ದಿರಿಸುವ ಪ್ರಯತ್ನದಲ್ಲಿದ್ದಾರೆ‌. ನಾಲ್ಕು ಕಾಲಿನ ಸಿಎಂ ಕುರ್ಚಿಗೆ ಕಾಂಗ್ರೆಸ್ ಪಕ್ಷದ ಅಷ್ಟ ದಿಕ್ಕುಗಳಿಂದ ದಾಳಿಯಾಗುತ್ತಿದೆ’ ಎಂದು ಬಿಜೆಪಿ ವ್ಯಂಗ್ಯವಾಡಿದೆ.

‘ಖಾಲಿ ಇರದ ಸಿಎಂ ಕುರ್ಚಿಗಾಗಿ ಕಾಂಗ್ರೆಸ್ ನಾಯಕರು ಕದನ‌ ನಡೆಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಸಭೆ ಸಮಾರಂಭಗಳ ಕುರ್ಚಿಗಳಷ್ಟೆ ಖಾಲಿ ಬಿದ್ದಿವೆ. ಕಾಂಗ್ರೆಸ್ಸಿಗರೇ, ನಿಮ್ಮೊಳಗಿ ಖಾಲಿ ಕುರ್ಚಿಗಳನ್ನು ಮೊದಲು ಭರ್ತಿ ಮಾಡಿಕೊಳ್ಳಿ’ ಎಂದು ಬಿಜೆಪಿ ಕಿಡಿಕಾರಿದೆ.

ಇದೇ ವೇಳೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ನೀಡಿದ ಎಚ್ಚರಿಕೆ ಡಿಕೆಶಿಯ ಅಸಹಾಯಕತೆಗೆ ಹಿಡಿದ ಕನ್ನಡಿ ಎಂದು ಬಿಜೆಪಿ ಕಿಚಾಯಿಸಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನಾಯಕತ್ವ ಪ್ರಶ್ನಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ತನ್ನ ಮಾತು ಕೇಳುವುದಿಲ್ಲ‌ ಎಂದು ಸಾಮಾನ್ಯ ಶಾಸಕನ ಬಾಯಿ ಮುಚ್ಚಿಸಲು ಹೈಕಮಾಂಡ್ ಮೊರೆ ಹೋಗುವಂತಾಯ್ತು. ಇದು ಡಿ.ಕೆ.ಶಿವಕುಮಾರ್ ಅವರ ಅಸಹಾಯಕತೆ ಅಲ್ಲದೆ ಮತ್ತೇನು’ ಎಂದು ಪ್ರಶ್ನಿಸಿದೆ.

‘ಡಿಕೆಶಿ ವಿರುದ್ಧ ಮಾತನಾಡಿದ್ದಕ್ಕಾಗಿ ಸಿದ್ದರಾಮಯ್ಯ ಬಣದ ವ್ಯಕ್ತಿಗಳಿಗೆ ಕಾಂಗ್ರೆಸ್ ಹೈಕಮಾಂಡ್ ನೀಡುವ ನೋಟಿಸ್ ಈಗ ನಗೆಪಾಟಲಿಸರಕಾಗಿದೆ. ನೋಟಿಸ್ ನೀಡಿದ ಮರು‌ದಿನವೇ ಮತ್ತೆ ಟೀಕೆ ಶುರುವಾಗುತ್ತದೆ. ಡಿಕೆಶಿ ಅವರ ಅಸಹಾಯಕ ಸ್ಥಿತಿಗೆ ಮರುಕಪಡುವಂತಾಗಿದೆ’ ಎಂದು ಬಿಜೆಪಿ ಕುಟುಕಿದೆ.

‘ಡಿಕೆಶಿ‌ ವಿರುದ್ಧದ ಪಿಸುಮಾತು ಪ್ರಕರಣಕ್ಕಾಗಿ ಉಗ್ರಪ್ಪ ಅವರಿಗೆ ಈ ಹಿಂದೆ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಆದೇ ಉಗ್ರಪ್ಪ ಸಿದ್ದರಾಮಯ್ಯ ಜೊತೆ ವೇದಿಕೆಯಲ್ಲಿ ವಿರಾಜಮಾನರಾದರು. ಡಿಕೆಶಿ ಜತೆ ಪತ್ರಿಕಾಗೋಷ್ಠಿ ನಡೆಸಿದರು. ತಾನು ಕೊಟ್ಟ ನೋಟಿಸ್‌ಗೆ ತಾನೇ ಬೆಲೆ ನೀಡಲಾಗದ ಸ್ಥಿತಿಗೆ ಡಿಕೆಶಿ ತಲುಪಿದ್ದಾರೆ’ ಎಂದು ಬಿಜೆಪಿ ಕಿಡಿಕಾರಿದೆ.

‘ಕಾಂಗ್ರೆಸ್ ಪಕ್ಷದಲ್ಲಿ ಈಗ ಕುರ್ಚಿ ಕಲಹ ಪರ್ವ ಆರಂಭಗೊಂಡಿದೆ. ಒಂದೆಡೆ ಯುವ ಕಾಂಗ್ರೆಸ್ ಕಾರ್ಯಕರ್ತರು, ಚಿಕ್ಕಮಗಳೂರು ಚಿತ್ರದುರ್ಗದಲ್ಲಿ ಕುರ್ಚಿ ಹಿಡಿದು ಮಾರಾಮಾರಿ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಹಿರಿಯ ಕಾಂಗ್ರೆಸ್ ನಾಯಕರು, ಎಲ್ಲೆಂದರಲ್ಲಿ, ಮರಿಚೀಕೆ ಸಿಎಂ ಕುರ್ಚಿಗಾಗಿ ಕಾದಾಡುತ್ತಿದ್ದಾರೆ‌’ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT