ಸೋಮವಾರ, ಏಪ್ರಿಲ್ 19, 2021
28 °C
ಅಮಾನತು ಆದೇಶ ಹಿಂದಕ್ಕೆ ಪಡೆಯಲು ಸಿದ್ದರಾಮಯ್ಯ ಆಗ್ರಹ

ಸಂಗಮೇಶ್ವರ ಅಮಾನತು– ಕೋಲಾಹಲ; ಅಮಾನತು ಆದೇಶ ಹಿಂದಕ್ಕೆ ಪಡೆಯಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಒಂದು ರಾಷ್ಟ್ರ– ಒಂದು ಚುನಾವಣೆ’ಯ ಚರ್ಚೆ ವಿರೋಧಿಸಿ ಕಾಂಗ್ರೆಸ್‌ ಸದಸ್ಯರು ಧರಣಿ ನಡೆಸುತ್ತಿದ್ದ ವೇಳೆ ಅಂಗಿ ಬಿಚ್ಚಿ ಪ್ರತಿಭಟನೆ ತೋರಿದ ಭದ್ರಾವತಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಬಿ.ಕೆ.ಸಂಗಮೇಶ್ವರ ಅವರನ್ನು ಸದನದಿಂದ ಒಂದು ವಾರ ಅಮಾನತು ಮಾಡಿರುವುದು ಕೋಲಾಹಲಕ್ಕೆ ಕಾರಣವಾಯಿತು.

‘ಅಮಾನತು ಆದೇಶವನ್ನು ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದರೆ ನಮ್ಮೆಲ್ಲರನ್ನೂ ಅಮಾನತು ಮಾಡಿ ಹೊರಗೆ ಕಳಿಸಿ’ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ಧರಣಿ ನಡೆಸುತ್ತಿದ್ದಾಗ, ಸಂಗಮೇಶ್ವರ ಅಂಗಿ ಬಿಚ್ಚಿ ಹೆಗಲ ಮೇಲೆ ಹಾಕಿಕೊಂಡರು. ಈ ವೇಳೆ ಕಾಗೇರಿ, ‘ಇದು ರಸ್ತೆ ಎಂದುಕೊಂಡಿದ್ದೀರಾ. ಇದು ಸದನ. ಸದನಕ್ಕೆ ಅಗೌರವ ತೋರುತ್ತಿದ್ದೀರಿ. ಇಂತಹ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಎಚ್ಚರಿಕೆ ನೀಡಿದರು. ಸಂಗಮೇಶ್ವರ ಸಮಜಾಯಿಷಿ ನೀಡಲು ಮುಂದಾದರು. ‘ನಿಮಗೆ ಮಾನ ಮರ್ಯಾದೆ ಇಲ್ಲವೇನ್ರಿ’ ಎಂದು ಗದರಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೂ ತರಾಟೆಗೆ ತೆಗೆದುಕೊಂಡರು. ಈ ವೇಳೆ ಪಕ್ಕದಲ್ಲಿದ್ದ ಕಾಂಗ್ರೆಸ್‌ ಸದಸ್ಯ ಡಿ.ಕೆ. ಶಿವಕುಮಾರ್ ಅವರು ಸಂಗಮೇಶ್ವರ್‌ಗೆ ಶರ್ಟ್‌ ತೊಡಿಸಿದರು. ಬಳಿಕ ಸಭಾಧ್ಯಕ್ಷರು ಕಲಾಪವನ್ನು 15 ನಿಮಿಷ ಮುಂದೂಡಿದರು.

ನಂತರ ಕಲಾಪ ಆರಂಭವಾಗುತ್ತಿದ್ದಂತೆ ಕಾಗೇರಿ ಅವರು, ‘ಸದನದಲ್ಲಿ ಬೇಜವಾಬ್ದಾರಿ ಹಾಗೂ ಅಶಿಸ್ತನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಹೇಳಿದರು. ಸಂಗಮೇಶ್ವರ ಅವರನ್ನು ಸದನದಿಂದ ಇದೇ 12ರ ವರೆಗೆ ಅಮಾನತು ಮಾಡುವ ಪ್ರಸ್ತಾವವನ್ನು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಮಂಡಿಸಿದರು. ಬಳಿಕ ನಿರ್ಧಾರ ಪ್ರಕಟಿಸಿದ ಕಾಗೇರಿ ಅವರು, ‘ಸಂಗಮೇಶ್ವರ ಕೂಡಲೇ ಸದನದಿಂದ ಹೊರಕ್ಕೆ ಹೋಗಬೇಕು’ ಎಂದು ಸೂಚಿಸಿದರು.

ಅಮಾನತ್ತು ಹಿಂದಕ್ಕೆ ಪಡೆಯಲು ಪಟ್ಟು: ಭೋಜನ ವಿರಾಮದ ಬಳಿಕ ಕಲಾಪ ಮತ್ತೆ ಆರಂಭಗೊಂಡ ಬಳಿಕ ಸಿದ್ದರಾಮಯ್ಯ ಮಾತನಾಡಿ, ಸಂಗಮೇಶ್ವರ ಅವರ ಅಮಾನತು ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.

‘ಸಂಗಮೇಶ್ವರ ಅವರ ಕುಟುಂಬದ ಸದಸ್ಯರ ಮೇಲೆ ದೌರ್ಜನ್ಯದ ಪ್ರಕರಣ ದಾಖಲಿಸಲಾಗಿದೆ. ಅವರಿಗೆ ವಿಷಯ ಪ್ರಸ್ತಾಪಿಸಲು ಅವಕಾಶ ನೀಡಬೇಕಿತ್ತು. ಅವಕಾಶ ಸಿಗದ ಕಾರಣ ಪ್ರತಿಭಟನೆ ಮಾಡಿದ್ದಾರೆ. ಆದ್ದರಿಂದ ಅವರ ಅಮಾನತು ಆದೇಶ ಹಿಂದಕ್ಕೆ ಪಡೆಯಬೇಕು. ಇಲ್ಲವಾದರೆ ನಮ್ಮೆಲ್ಲರನ್ನೂ ಅಮಾನತು ಮಾಡಿ’ ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

‘ಸಭಾಧ್ಯಕ್ಷರ ಆದೇಶ ಪ್ರಜಾಪ್ರಭುತ್ವದ ಕಗ್ಗೊಲೆ. ಇಲ್ಲಿ ಹಿಟ್ಲರ್‌ ಆಡಳಿತ ನಡೆಯಲ್ಲ. ನೀವು ಎಲ್ಲರನ್ನೂ ಅರೆಸ್ಟ್ ಮಾಡಿಸಿ ಹೊರಗೆ ಕಳಿಸಿ’ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಸಂಗಮೇಶ್ವರ ತಡೆದ ಮಾರ್ಷಲ್‌ಗಳು

ಭೋಜನ ವಿರಾಮದ ವೇಳೆ ಮೊಗಸಾಲೆ ಒಳಗೆ ಪ್ರವೇಶಿಸಲು ಬಂದ ಸಂಗಮೇಶ್ವರ ಅವರನ್ನು ಮಾರ್ಷಲ್‌ಗಳು ಬಾಗಿಲ ಬಳಿಯೇ ತಡೆದರು. ‘ಸಭಾಧ್ಯಕ್ಷರ ಆದೇಶ ಇರುವುದರಿಂದ ಒಳಗೆ ಬಿಡಲು ಸಾಧ್ಯವಿಲ್ಲ’ ಎಂದು ಹೇಳಿದರು. ‘ಅಂತಹ ಆದೇಶ ಇದೆಯೇ, ಇದ್ದರೆ ಪ್ರತಿ ತೋರಿಸಿ’ ಎಂದು ಸಂಗಮೇಶ್ವರ ಏರು ಧ್ವನಿಯಲ್ಲಿ ಪ್ರಶ್ನಿಸಿದರು. ಸಾಕಷ್ಟು ವಾಗ್ವಾದ ನಡೆಸಿದರೂ ಅವರನ್ನು ಒಳಗೆ ಬಿಡಲಿಲ್ಲ.

ಈ ವಿಷಯ ತಿಳಿದು ಅಲ್ಲಿಗೆ ಬಂದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆ.ಆರ್‌.ರಮೇಶ್‌ಕುಮಾರ್‌, ಎಚ್‌.ಕೆ.ಪಾಟೀಲ ಮುಂತಾದವರು ಸಂಗಮೇಶ್ವರ ಅವರನ್ನು ಒಳಗೆ ಕರೆದೊಯ್ದರು. ‘ಯಾರ್ರಿ ತಡೆಯೋರು, ತಡಿಲೀ ನೋಡೋಣ’ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು. ಮಾರ್ಷಲ್‌ಗಳು ಸುಮ್ಮನೆ ನೋಡುತ್ತಾ ನಿಂತಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು