ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಅಕ್ರಮಕ್ಕೆ ರಹದಾರಿ: ಇನಾಂ ರದ್ದತಿ ಮಸೂದೆಗೆ ಒಪ್ಪಿಗೆ, ಸದಸ್ಯರ ಆತಂಕ

Last Updated 20 ಡಿಸೆಂಬರ್ 2021, 20:30 IST
ಅಕ್ಷರ ಗಾತ್ರ

ಬೆಳಗಾವಿ (ಸುವರ್ಣ ವಿಧಾನಸೌಧ): ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಸದಸ್ಯರ ಆಕ್ಷೇಪದ ನಡುವೆಯೂ ‘ಕರ್ನಾಟಕ ಇನಾಮು ರದ್ದತಿ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಮಸೂದೆ’ಗೆ ವಿಧಾನಸಭೆಯಲ್ಲಿ ಸೋಮವಾರ ಅಂಗೀಕಾರ ನೀಡಲಾಯಿತು. ಈ ಮಸೂದೆ ಇನ್ನಷ್ಟು ಭೂ ಅಕ್ರಮಕ್ಕೆ ರಹದಾರಿ ಆಗಲಿದೆ ಎಂದು ಹಲವು ಸದಸ್ಯರು ಆತಂಕ ವ್ಯಕ್ತಪಡಿಸಿದರು.

ರಾಜ್ಯದ ವಿವಿಧೆಡೆ ಇನಾಂ ಜಮೀನು ಸಾಗುವಳಿ ಮಾಡುತ್ತಿರುವ ರೈತರು ಪಹಣಿಗಾಗಿ ಅರ್ಜಿ ಸಲ್ಲಿಸುವ ಅವಧಿಯನ್ನು ಇನ್ನೂ ಒಂದು ವರ್ಷ ಮುಂದುವರಿಸುವುದಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಕಂದಾಯ ಸಚಿವ ಆರ್‌.ಅಶೋಕ ತಿಳಿಸಿದರು. ಭೂಮಿಯ ಹಕ್ಕನ್ನು ರೈತರಿಗೆ ನೀಡುವುದರಿಂದ ಅವರು ಬ್ಯಾಂಕ್‌ಗಳಿಂದ ಸಾಲ ಪಡೆಯಲು, ಸರ್ಕಾರಿ ಉದ್ದೇಶಕ್ಕೆ ಭೂಸ್ವಾಧೀನ ಮಾಡಿಕೊಂಡಾಗ ಪರಿಹಾರ ಪಡೆದುಕೊಳ್ಳಲು ಅನುಕೂಲವಾಗುತ್ತದೆ ಎಂದೂ ತಿಳಿಸಿದರು.

ರಾಜ್ಯದ ಲಕ್ಷಾಂತರ ಎಕರೆ ಇನಾಂ ಭೂಮಿಯನ್ನುಕಳೆದ 50– 60 ವರ್ಷಗಳಿಂದ ರೈತರು ಉಳುಮೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟು 1 ಲಕ್ಷ ಎಕರೆಗೂ ಹೆಚ್ಚು ಇನಾಂ ಭೂಮಿ ಇದೆ ಎಂದು ಅವರು ಹೇಳಿದರು. ಈ ಮಸೂದೆಯನ್ನು ವಿಧಾನಮಂಡಲದ ಜಂಟಿ ಪರಿಶೀಲನಾ ಸಮಿತಿಗೆ ಒಪ್ಪಿಸಬೇಕು ಎಂದೂ ಸದಸ್ಯರು ಆಗ್ರಹಿಸಿದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ’30 ವರ್ಷಗಳ ಬಳಿಕ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ ನೀಡುತ್ತಿರುವುದು ಏಕೆ‘ ಎಂದು ಪ್ರಶ್ನಿಸಿದರು. ಅಶೋಕ ಪ್ರತಿಕ್ರಿಯಿಸಿ, ’ಇನಾಂ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದರೂ ಅನೇಕ ಮಂದಿ ಅರ್ಜಿ ಸಲ್ಲಿಸಿರಲಿಲ್ಲ. ಅಂತವರಿಗೆ ಅನುಕೂಲ ಮಾಡಿಕೊಡಲು ಅರ್ಜಿ ಸಲ್ಲಿಸುವ ಅವಧಿಯನ್ನು ಒಂದು ವರ್ಷ ವಿಸ್ತರಿಸಲಾಗಿದೆ ಅಷ್ಟೇ. ಪಿ.ಎಸ್‌.ವಸ್ತ್ರದ್‌ ಸಮಿತಿಯ ಶಿಫಾರಸಿನ ಮೇರೆಗೆ ತಿದ್ದುಪಡಿ ತರಲಾಗಿದೆ‘ ಎಂದೂ ಸ್ಪಷ್ಟಪಡಿಸಿದರು.

ಭೂಮಾಪಕರಿಗೂ ಅವಕಾಶ: ಜಮೀನು ಗುರುತಿಸಲು ಅಗತ್ಯವಿರುವ ವಿವರಣೆ, ಪೋಡಿ, ಭೂಪರಿವರ್ತನೆ ನಕ್ಷೆ, ಇ–ಸ್ವತ್ತು ಮುಂತಾದವುಗಳ ಸಂದರ್ಭದಲ್ಲಿ ಅರ್ಜಿಗಳ ಶೀಘ್ರ ವಿಲೇವಾರಿಗಾಗಿ ಸರ್ಕಾರಿ ಭೂಮಾಪಕರಿಗೂ ನೀಡಲು ಅವಕಾಶ ಒದಗಿಸುವ ‘ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಮಸೂದೆ’ಗೆ ಒಪ್ಪಿಗೆ ನೀಡಲಾಯಿತು.

ಸದ್ಯದ ವ್ಯವಸ್ಥೆಯಲ್ಲಿ ಪರವಾನಗಿ ಪಡೆದ ಭೂಮಾಪಕರು ಮಾತ್ರ 11 ಇ ಅಡಿ ಸ್ಕೆಚ್‌ ನೀಡಬಹುದಾಗಿತ್ತು. ಕಾಯ್ದೆಗೆ ತಿದ್ದುಪಡಿ ಮೂಲಕ ಸರ್ಕಾರಿ ಭೂಮಾಪಕರಿಗೂ ಈ ಅವಕಾಶ ನೀಡಲಾಗುವುದು ಎಂದು ಅಶೋಕ ತಿಳಿಸಿದರು. ಬೆಂಗಳೂರಿನ ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜು ವಿಶ್ವವಿದ್ಯಾಲಯ ಮಸೂದೆಗೆ ಒಪ್ಪಿಗೆ ನೀಡಲಾಯಿತು. ಈ ವಿ.ವಿಯಲ್ಲಿ ಶೇ 100ರಷ್ಟು ಕನ್ನಡಿಗ ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್‌ನ ಡಾ.ರಂಗನಾಥ್‌ ಒತ್ತಾಯಿಸಿದರು. ಇದಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಒಪ್ಪಿದರು.

**

ಸದಸ್ಯರ ಆಕ್ಷೇಪವೇನು?
ಹಲವು ವರ್ಷಗಳಿಂದ ಕೃಷಿ ಮಾಡಿಕೊಂಡಿರುವವರಿಗೆ ಅನುಕೂಲ ಮಾಡಿಕೊಡಲು ಈ ಮಸೂದೆಯನ್ನು ತಂದ ಹಾಗಿಲ್ಲ. ಸಂಡೂರಿನಲ್ಲಿ ಭತ್ತ ಬಿತ್ತಿ ಬೆಳೆಯುವವರು ಯಾರಿದ್ದಾರೆ. ಅಲ್ಲಿ ಗಣಿಗಾರಿಕೆ ಮಾಡಿ ಬಂಗಾರ ತೆಗೆಯುವವರೇ ಅಲ್ಲಿರುವುದು. ಅವರೇ ಅನುಕೂಲ ಮಾಡಿಕೊಡಲು ಈ ಮಸೂದೆ ತರಲಾಗಿದೆ.
-ಎಚ್‌.ಕೆ.ಪಾಟೀಲ, ಕಾಂಗ್ರೆಸ್ ಸದಸ್ಯ

*
ಈ ಮಸೂದೆ ಇನ್ನಷ್ಟು ಭೂ ಅಕ್ರಮಕ್ಕೆ ದಾರಿ ಕೊಡಲಿದೆ. ಇನಾಂ ರದ್ದತಿ ಹೆಸರಿನಲ್ಲಿ ಶೇ 50ಕ್ಕೂ ಹೆಚ್ಚು ಮಂದಿ ಇದನ್ನು ದುರುಪಯೋಗ ಮಾಡಿಕೊಳ್ಳಲಿದ್ದಾರೆ. ಬೆಂಗಳೂರಿನ ಮೈಸೂರು ರಸ್ತೆಯ ವೆಂಕಟಾಪುರದಲ್ಲಿ ಪುರವಂಕರ ಸಂಸ್ಥೆಯವರು 66 ಎಕರೆ ಇನಾಂ ಜಮೀನನ್ನು ಪಡೆದಿದ್ದಾರೆ. ಅವರು 6 ಸಾವಿರ ಫ್ಲ್ಯಾಟ್‌ಗಳನ್ನು ನಿರ್ಮಿಸಿದ್ದಾರೆ. ಈ ಮಸೂದೆಯಿಂದ ಇನ್ನಷ್ಟು ಇಂತಹವರಿಗೆ ಅನುಕೂಲ ಆಗಲಿದೆ.
-ಎ.ಟಿ.ರಾಮಸ್ವಾಮಿ, ಜೆಡಿಎಸ್‌ ಸದಸ್ಯ

*
ಈ ಮಸೂದೆಯಿಂದ ಅಕ್ರಮಕ್ಕೆ ಅವಕಾಶ ಆಗಲಿದೆ. ಇನಾಂ ಪಡೆದವರು ಒಬ್ಬರು ಇರುತ್ತಾರೆ. ಈಗ ಆ ಜಮೀನಿನಲ್ಲಿ ಕೃಷಿ ಮಾಡುತ್ತಿರುವವರು ಇನ್ನೊಬ್ಬರು ಇರುತ್ತಾರೆ. ಜಮೀನನ್ನು ಯಾರಿಗೆ ಮಂಜೂರು ಮಾಡುತ್ತೀರಿ.
-ಕುಮಾರ ಬಂಗಾರಪ್ಪ, ಬಿಜೆಪಿ ಸದಸ್ಯ

*
ನಮ್ಮೂರಿನ ಕೆಲವು ಜಮೀನು ಮಾಲೀಕರು ಬೆಂಗಳೂರಿಗೆ ಸೇರಿಕೊಂಡಿದ್ದಾರೆ. ಅದನ್ನು ಊರಿನ ರೈತರಿಗೆ ಗೇಣಿಗೆ ಕೊಟ್ಟಿದ್ದಾರೆ. ಅವರು 25–30 ವರ್ಷಗಳಿಂದ ಕೃಷಿ ಮಾಡುತ್ತಿದ್ದಾರೆ. ಈಗ ಅರ್ಜಿ ಸಲ್ಲಿಸಲು ಅವಕಾಶ ನೀಡಿದರೆ ಬೆಂಗಳೂರಿನ ಜನರು ಊರಿಗೆ ಓಡಿ ಬಂದು ಜಮೀನಿನ ಮೇಲೆ ಹಕ್ಕು ಸ್ಥಾಪಿಸುತ್ತಾರೆ. ರೈತರಿಗೆ ಅನ್ಯಾಯವಾಗುತ್ತದೆ. ಇಂತಹ ಪಾಪದ ಕೆಲಸಕ್ಕೆ ನಮ್ಮ ಸಹಮತಿ ಇಲ್ಲ.
-ಕೆ.ಎಂ. ಶಿವಲಿಂಗೇಗೌಡ, ಜೆಡಿಎಸ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT