ಶನಿವಾರ, ಮೇ 21, 2022
27 °C

ಫೆಬ್ರುವರಿ 14ರಿಂದ ವಿಧಾನಮಂಡಲ ಅಧಿವೇಶನ: ಮಾರ್ಚ್‌ ಮೊದಲ ವಾರ ಬಜೆಟ್‌ ಮಂಡನೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಫೆಬ್ರುವರಿ 14 ರಿಂದ 25 ರವರೆಗೆ ವಿಧಾನಮಂಡಲದ ಜಂಟಿ ಅಧಿವೇಶನ ಮತ್ತು ಮಾರ್ಚ್‌ ಮೊದಲ ವಾರ ಬಜೆಟ್‌ ಮಂಡಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾಳೆ(ಶುಕ್ರವಾರ) ಸರ್ಕಾರಕ್ಕೆ ಆರು ತಿಂಗಳು ತುಂಬಲಿದ್ದು, ಮುಂದಿನ ಒಂದು ವಾರ ಪ್ರಮುಖ ಇಲಾಖೆಗಳ ಸಾಧನೆ ಬಗ್ಗೆ ಮಾಧ್ಯಮಗಳ ಮೂಲಕ ಜನರಿಗೆ ಮಾಹಿತಿ ತಲುಪಿಸಲು ಸೂಚನೆ ನೀಡಿದ್ದೇನೆ ಎಂದರು.

ವರಿಷ್ಠರ ಜತೆ ಮಾತನಾಡಿದ್ದೇನೆ, ಅವರು ದೆಹಲಿಗೆ ಕರೆದರೆ ಹೋಗಲು ಸಿದ್ಧನಿದ್ದೇನೆ ಎಂದು ಸಂಪುಟ ಪುನಾರಚನೆ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಪ್ರತಿ ಬಾರಿ ಸಂಸತ್‌ ಅಧಿವೇಶ ನಡೆದಾಗ ಸಂಸದರ ಸಭೆಯನ್ನು ನಡೆಸುವುದು ವಾಡಿಕೆ. ಈ ಬಾರಿಯೂ ಅಂತಹ ಒಂದು ಸಭೆಯನ್ನು ಕರೆಯಲು ಚಿಂತನೆ ನಡೆಸಿದ್ದೇನೆ ಎಂದು ಅವರು ಹೇಳಿದರು.

ಇವತ್ತಿನ ಸಚಿವ ಸಂಪುಟ ಸಭೆಯಲ್ಲಿ ಬಿಬಿಎಂಪಿ ಚುನಾವಣೆ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು ಎದುರಿಸುವ ಬಗ್ಗೆ ಸುದೀರ್ಘ ಮಾತುಕತೆ ನಡೆಸಲಾಗಿದೆ. ಬಿಬಿಎಂಪಿ ಚುನಾವಣೆಯಲ್ಲಿ ನಗರದ ಸಚಿವರು ಮತ್ತು ಶಾಸಕರು ಮಾತ್ರವಲ್ಲದೆ ಇತರ  ಸಚಿವರು ಮತ್ತು ಪ್ರಭಾವಿ ನಾಯಕರನ್ನು ಬಳಸಿಕೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ಪಕ್ಷ ಮತ್ತು ಸರ್ಕಾರದ ಮಧ್ಯೆ ಸಮನ್ವಯಕ್ಕಾಗಿ ನಡೆಯಬೇಕಾಗಿದ್ದ ಚಿಂತನ– ಮಂಥನ ಸಭೆಯನ್ನು ನಡೆಸುವ ಸಂಬಂಧ ಪಕ್ಷದ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್ ಜತೆ  ಚರ್ಚೆ ನಡೆಸಲಾಗಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು