ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿವೇಶನ: ಸರ್ಕಾರಕ್ಕೆ ರೈತರ ಪ್ರತಿಭಟನೆ, ಅಂಜಲಿ ನಿಂಬಾಳ್ಕರ್ ಪಾದಯಾತ್ರೆ ಬಿಸಿ

ಬಾರುಕೋಲು ಚಳವಳಿ 20ರಂದು: ಕೋಡಿಹಳ್ಳಿ
Last Updated 13 ಡಿಸೆಂಬರ್ 2021, 13:25 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಆರಂಭವಾದ ವಿಧಾನಮಂಡಲ ಚಳಿಗಾಲದ ಅಧಿವೇಶನ ಮೊದಲ ದಿನವಾದ ಸೋಮವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರ ಪ್ರತಿಭಟನೆ ಹಾಗೂ ಖಾನಾಪುರ ಕ್ಷೇತ್ರದ ಕಾಂಗ್ರೆಸ್‌ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಪಾದಯಾತ್ರೆಯ ಬಿಸಿ ಸರ್ಕಾರಕ್ಕೆ ತಟ್ಟಿತು.

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಅಂಜಲಿ ನಡೆಸಿದ ಪಾದಯಾತ್ರೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪಾಲ್ಗೊಂಡು ಸರ್ಕಾರದ ವಿರುದ್ಧ ಹರಿಹಾಯ್ದರು.

ಅಂಜಲಿ, ಭಾನುವಾರ ಖಾನಾಪುರದಿಂದ ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಪಾದಯಾತ್ರೆ ಆರಂಭಿಸಿದ್ದರು. ತಾಲ್ಲೂಕಿನ ಯಳ್ಳೂರಿನಿಂದ ಬೆಳಿಗ್ಗೆ ಪಾದಯಾತ್ರೆ ಮುಂದುವರಿಸಿದ್ದರು. ಅಲಾರವಾಡ ಕ್ರಾಸ್ ಬಳಿ ಅವರೊಂದಿಗೆ ಸಿದ್ದರಾಮಯ್ಯ ಹಾಗೂ ಶಾಸಕರಾದ ಡಾ.ಯತೀಂದ್ರ ಸಿದ್ದರಾಮಯ್ಯ ಮತ್ತು ಗಣೇಶ ಹುಕ್ಕೇರಿ ಪಾಲ್ಗೊಂಡು ಬೆಂಬಲ ಸೂಚಿಸಿದರು. ಬಳಿಕ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಕೂಡ ಭಾಗಿಯಾದರು. ಸುವರ್ಣ ವಿಧಾನಸೌಧ ಸಮೀಪದವರೆಗೂ ಪಾದಯಾತ್ರೆ ನಡೆಸಿದರು.

ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ‘ಖಾನಾಪುರ ಕ್ಷೇತ್ರದಲ್ಲಿ ಅತಿವೃಷ್ಟಿಯಿಂದ ಅಪಾರ ಹಾನಿಯಾಗಿದೆ. ಬಹಳಷ್ಟು ಮಂದಿ ಮನೆ ಕಳೆದುಕೊಂಡಿದ್ದಾರೆ. ಆದರೆ, ಸರ್ಕಾರದ ನಿರ್ಲಕ್ಷ್ಯದ ಪರಿಣಾಮ ಅಲ್ಲಿನ ಶಾಸಕರು ಒಂದು ಮನೆಯನ್ನೂ ಕೊಡಿಸಲು ಸಾಧ್ಯವಾಗಿಲ್ಲ. ಹೀಗಾಗಿ ಹೋರಾಟ ನಡೆಸುತ್ತಿದ್ದಾರೆ. ಇಂತಹ ಸಮಸ್ಯೆಗಳ ಬಗ್ಗೆ ವಿಧಾನಮಂಡಲ ಅಧಿವೇಶನದಲ್ಲಿ ಸರ್ಕಾರದ ಗಮನಸೆಳೆಯಲಾಗುವುದು. ರಾಜ್ಯದಾದ್ಯಂತ ಸಂತ್ರಸ್ತರಿಗೆ ಹಾಗೂ ರೈತರಿಗೆ ಪರಿಹಾರ ಸಿಕ್ಕಿಲ್ಲ’ ಎಂದು ತಿಳಿಸಿದರು.

‘ಈ ಸರ್ಕಾರ ಕಿವುಡು, ದಪ್ಪ ಚರ್ಮದ್ದಾಗಿದೆ. ಲಜ್ಜೆಗೆಟ್ಟ ಸರ್ಕಾರವಾಗಿದೆ. ಭಂಡರ ರೀತಿ ಕುರ್ಚಿಗೆ ಅಂಟಿ ಕೂರಬೇಡಿ. ಅಧಿಕಾರ ಬಿಟ್ಟು ತೊಲಗಿ’ ಎಂದು ವಾಗ್ದಾಳಿ ನಡೆಸಿದರು.

‘ಸಂತ್ರಸ್ತರು ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರಕ್ಕೆ ಬರಬಾರದು. ನಿಮ್ಮ ಪರ ಹೋರಾಡಲು ನಾವಿದ್ದೇವೆ’ ಎಂದರು.

ರೈತರ ಆಕ್ರೋಶ:ಕೃಷಿಗೆ ಮಾರಕವಾದ 3 ಕಾಯ್ದೆಗಳನ್ನು ಕೇಂದ್ರದಂತೆ ರಾಜ್ಯ ಸರ್ಕಾರವೂ ವಾಪಸ್ ಪಡೆಯುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯವರು ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಸುವರ್ಣ ವಿಧಾನಸೌಧ ಸಮೀಪದ ಕೊಂಡಸಕೊಪ್ಪ ಗುಡ್ಡದಲ್ಲಿ ಪ್ರತಿಭಟನೆ ನಡೆಸಿದರು.

ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟಿದ್ದ ಅವರನ್ನು ಪೊಲೀಸರು ಹಿರೇಬಾಗೇವಾಡಿ ಸಮೀಪದಲ್ಲೇ ತಡೆದು ವಶಕ್ಕೆ ಪಡೆದರು. ಸಾರಿಗೆ ಬಸ್‌ಗಳಲ್ಲಿ ಪ್ರತಿಭಟನಾ ಸ್ಥಳಕ್ಕೆ ಕರೆತಂದರು. ಸಂಜೆ ಪ್ರತಿಭಟನಾಕಾರರನ್ನು ಭೇಟಿಯಾದ ಸಚಿವರಾದ ಬಿ.ಸಿ. ಪಾಟೀಲ ಹಾಗೂ ಭೈರತಿ ಬಸವರಾಜ್‌ ಸಮಯ ಕೇಳಿದರು. ಇದರಿಂದ ರೈತರು ಅಸಮಾಧಾನ ವ್ಯಕ್ತಪಡಿಸಿದರು.

‘ಸರ್ಕಾರಕ್ಕೆ ವಾರದ ಗಡುವು ಕೊಡೋಣ. ಅಲ್ಲಿಯವರೆಗೆ ಮೂರೂ ಕಾಯ್ದೆ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಡಿ.20ರಂದು ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಬಾರುಕೋಲು ಚಳವಳಿ ನಡೆಸಲಾಗುವುದು’ ಎಂದು ಕೋಡಿಹಳ್ಳಿ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT